ADVERTISEMENT

ಅಧಿಕಾರ ನಾಸ್ತಿ, ಸಿಬ್ಬಂದಿ ಕೊರತೆ ಜಾಸ್ತಿ!

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2011, 9:00 IST
Last Updated 4 ಫೆಬ್ರುವರಿ 2011, 9:00 IST

ಮಂಗಳೂರು: ಇಡೀ ಕರಾವಳಿ ಸಮುದ್ರ ತಟದಲ್ಲಿ ನಡೆಯಬಹುದಾದ ಎಲ್ಲ ಬಗೆಯ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ರೂಪಿತ ಕರಾವಳಿ ನಿಯಂತ್ರಣ ವಲಯ(ಸಿಆರ್‌ಝೆಡ್) ಕಚೇರಿ ಮಂಗಳೂರಿನಲ್ಲಿದ್ದರೂ ದಂಡನೆ ಅಧಿಕಾರ ಹಾಗೂ ಅಗತ್ಯ ಸಿಬ್ಬಂದಿ ಎರಡೂ ಇಲ್ಲದೆ ಹಲ್ಲು ಕಿತ್ತ ಹುಲಿಯಂತಾಗಿದೆ.

ಕರಾವಳಿಗುಂಟ ಇದೀಗ ಪರಿಷ್ಕೃತ ಸಿಆರ್‌ಝೆಡ್ ಜಾರಿಗೆ ಬಂದಿದೆಯಾದರೂ ಹೊಸ ಕಾನೂನಿನಲ್ಲಿ ಏನೆಲ್ಲ ಬದಲಾವಣೆಗಳಾಗಿವೆ. ನಿರ್ದೇಶನಗಳನ್ನು ಉಲ್ಲಂಘಿಸಿದರೆ ದಂಡನೆ ಏನು, ಕ್ರಮ ಯಾರಿಂದ ಇಂತಹ ಅನೇಕ ಸಂದೇಹಗಳಿಗೆ ಇನ್ನೂ ಪರಿಸರ ಇಲಾಖೆ ಸಿಬ್ಬಂದಿಯಲ್ಲೇ ಗೊಂದಲಗಳಿದ್ದು, ಅವು ದೂರವಾಗಿಲ್ಲ. ಅಲ್ಲದೆ, ಪರಿಷ್ಕೃತ ಸಿಆರ್‌ಝೆಡ್ ಜ. 6ರಂದೇ ಜಾರಿಗೆ ಬಂದರೂ ಈವರೆಗೂ ಭಾರತ ರಾಜ್ಯಪತ್ರದಲ್ಲಿ ಪ್ರಕಟವಾಗಿಲ್ಲ.

ಸಿಆರ್‌ಝೆಡ್‌ಗಾಗಿಯೇ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಪ್ರಾದೇಶಿಕ ನಿರ್ದೇಶಕರ ಕಚೇರಿ ಮಂಗಳೂರಿನ ಮಹಾನಗರ ಪಾಲಿಕೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ವಾಸ್ತವವಾಗಿ ಇಲ್ಲಿಯ ಸಿಬ್ಬಂದಿಗೆ ಈಗ ಕೆಲಸವೇ ಇಲ್ಲ. ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿ ಮರಳುಗಾರಿಕೆ, ಮೀನುಗಾರಿಕೆ ಇಲ್ಲವೇ ಇತರೆ ಅಕ್ರಮ ಚಟುವಟಿಕೆ ನಡೆಯುತ್ತಿದ್ದಲ್ಲಿ ಅಂಥ ಸಂಸ್ಥೆ, ವ್ಯಕ್ತಿ ವಿರುದ್ಧ ಪ್ರಾದೇಶಿಕ ನಿರ್ದೇಶಕರು ಕ್ರಮ ಕೈಗೊಳ್ಳಬೇಕು. ಆದರೆ ಈ ಇಲಾಖೆ ಅಧಿಕಾರಿಗಳಿಗೆ ಇಂಥ ಯಾವುದೇ ಅಧಿಕಾರ ನೀಡಲಾಗಿಲ್ಲ. ಪರಿಣಾಮ ಪ್ರಾಕೃತಿಕ ಸಂಪತ್ತು ಲೂಟಿಕೋರರಿಗೆ ಈ ಲೋಪ ದೊಡ್ಡ ವರವೇ ಆಗಿ ಪರಿಗಣಿಮಿಸಿದೆ.

ಅಕ್ರಮಗಳು ನಡೆಯುತ್ತಿರುವುದು ಕಂಡುಬಂದಲ್ಲಿ ಜಿಲ್ಲಾಧಿಕಾರಿಗೆ ಮಾಹಿತಿ ನೀಡಲಾಗುತ್ತಿದೆ. ಜಿಲ್ಲಾ ಮಟ್ಟದ ಸಿಆರ್‌ಝೆಡ್ ಸಮಿತಿಗೆ ಜಿಲ್ಲಾಧಿಕಾರಿಯೇ ಅಧ್ಯಕ್ಷರಾಗಿದ್ದು, ಈ ಬಗ್ಗೆ ಮುಂದಿನ ಕ್ರಮಕ್ಕೆ ಪರಿಸರ ಇಲಾಖೆ ಕಾರ್ಯದರ್ಶಿಗೆ ಶಿಫಾರಸು ಮಾಡಲಾಗುತ್ತದೆ. ಅಲ್ಲಿಂದ ಕ್ರಮ ಜರುಗಿದ ಆದೇಶ ನಮ್ಮ ಕಚೇರಿಗೆ ತಲುಪುವ ವೇಳೆಗೆ ಒಂದು ತಿಂಗಳೇ ಆಗಬಹುದು. ಎಲ್ಲ ಪ್ರಕ್ರಿಯೆ ಮುಗಿದು ಕ್ರಮದ ಆದೇಶ ಜಿಲ್ಲಾಧಿಕಾರಿ ಕೈತಲುಪುವಷ್ಟರಲ್ಲಿ ‘ನಡೆಯಬಾರದ್ದೆಲ್ಲ’ ನಡೆದು ಹೋಗಿರುತ್ತದೆ, ಆದರೆ ಸ್ಥಳೀಯವಾಗಿ ನಾವೇ ಠಾಣೆಗಳಲ್ಲಿ ಪ್ರಕರಣ ದಾಖಲಿಸಿ ಎಚ್ಚರಿಕೆ ನೀಡೋಣ ಎಂದರೆ ಅದಕ್ಕೂ ಅವಕಾಶವಿಲ್ಲ ಎಂದು ಪರಿಸರ ಇಲಾಖೆ ಅಧಿಕಾರಿಗಳು ಅಳಲು ತೋಡಿಕೊಳ್ಳುತ್ತಾರೆ.

ಸಮುದ್ರ ತಟದಲ್ಲಿ ಸಿಆರ್‌ಝೆಡ್ ನಿಯಮ ವಿರೋಧಿ ಕೃತ್ಯ ನಡೆಯುತ್ತಿರುವ ಕುರಿತು ದೂರು ಬಂದಲ್ಲಿ ಸ್ಥಳಕ್ಕೆ ಧಾವಿಸಿ ಎಚ್ಚರಿಕೆ ನೀಡಲು ಕಚೇರಿಯಲ್ಲಿ ಒಬ್ಬ ಗಾರ್ಡ್ ಸಹ ಇಲ್ಲ. ಇರುವ 3-4 ಸಿಬ್ಬಂದಿಯೇ ಇಡೀ ವ್ಯವಸ್ಥೆ ನೋಡಿಕೊಳ್ಳಬೇಕಿದೆ.

ಮೊದಲು 1991ರಲ್ಲಿ ಸಿಆರ್‌ಝೆಡ್ ಕಾಯ್ದೆ ಜಾರಿಗೆ ಬಂದಿತು. ಆರಂಭದಲ್ಲಿ ಈ ಬಗ್ಗೆ ಬಹುತೇಕರಿಗೆ ಮಾಹಿತಿಯೇ ಇರದ ಪರಿಣಾಮ ಸಿಆರ್‌ಝೆಡ್ ಎಂದರೆ ಯಾರಿಗೂ ಲೆಕ್ಕವೇ ಇರಲಿಲ್ಲ. ಈ ಬಗ್ಗೆ ಅಲ್ಪ ಜಾಗೃತಿ ಉಂಟಾಗಿದ್ದು 2001ರಿಂದ. ಸಿಆರ್‌ಝೆಡ್ ನಿಯಮ ಉಲ್ಲಂಘನೆಗಾಗಿ ಹಲವು ಪ್ರಕರಣಗಳು ದಾಖಲಾದ ಪರಿಣಾಮ ನೈಸರ್ಗಿಕ ಸಂಪತ್ತು ಲೂಟಿಕೋರರಿಗೆ ಎಚ್ಚರಿಕೆ ಕೊಡಲಾಯಿತು. ಮರುವರ್ಷವೇ ಮಂಗಳೂರಿನಲ್ಲಿ ಸಿಆರ್‌ಝೆಡ್ ನಿರ್ವಹಣೆಗಾಗಿಯೇ ಪ್ರತ್ಯೇಕ ಕಚೇರಿ ಆರಂಭವಾಯಿತು.

ಪರಿಷ್ಕೃತ ಸಿಆರ್‌ಝೆಡ್ ನಿಯಮಾವಳಿ ಕುರಿತು ಈಗಾಗಲೇ ಜಿಲ್ಲೆಯ ಎಲ್ಲ ಗ್ರಾ.ಪಂ.ಗಳಿಗೆ ಮಾಹಿತಿ ಕಳುಹಿಸಿದ್ದು ಅಕ್ರಮ ಕಂಡುಬಂದಲ್ಲಿ ಮಾಹಿತಿ ನೀಡಲು ಕೋರಲಾಗಿದೆ. ಆದರೆ ಇಂಥ ಮಾಹಿತಿಯನ್ನು ಜಿಲ್ಲಾಧಿಕಾರಿ ಗಮನಕ್ಕೆ ತರುವುದರ ಜತೆಗೇ ಅಕ್ರಮ ನಡೆಸುತ್ತಿರುವ ಸಂಸ್ಥೆ-ವ್ಯಕ್ತಿ ವಿರುದ್ಧ ಎಚ್ಚರಿಕೆ ನೀಡಿ ನೋಟಿಸ್ ನೀಡಬಹುದೇ ಹೊರತು ಪ್ರಕರಣ ದಾಖಲಿಸುವ ಅಧಿಕಾರ ನಮಗಿಲ್ಲ ಎಂದು ಕಚೇರಿಯ ಪ್ರಭಾರಿ ಪ್ರಾದೇಶಿಕ ನಿರ್ದೇಶಕ ಮಹಮ್ಮದ್ ಬ್ಯಾರಿ ‘ಪ್ರಜಾವಾಣಿ’ಗೆ ಸೋಮವಾರ ತಿಳಿಸಿದರು.

ಕನಿಷ್ಠ 3-4 ಕಾವಲುಗಾರರು, ವಾಹನ ಸೇರಿದಂತೆ ಅಗತ್ಯ ಸೌಲಭ್ಯವನ್ನು ಸರ್ಕಾರ ನೀಡಿದಲ್ಲಿ ಒಪ್ಪಿಸಿದ ಕೆಲಸವನ್ನು ಯಶಸ್ವಿಯಾಗಿ ನಿಭಾಯಿಸಬಹುದು. ಇದೆಲ್ಲ ಕೊರತೆಗಳ ಮಧ್ಯೆಯೇ ಹೊಸ ಕಾಯ್ದೆ ಕುರಿತು ಮುಖ್ಯವಾಗಿ ಮರಳು ಸಾಗಣೆದಾರರು, ಮೀನುಗಾರ ಕುಟುಂಬದಲ್ಲಿ ಜಾಗೃತಿ ಮೂಡಿಸಲು ಮುಂಬರುವ ದಿನಗಳಲ್ಲಿ ಕಾರ್ಯಾಗಾರ ನಡೆಸುವ ಚಿಂತನೆಯೂ ಇದೆ ಎಂದು ಮಾತು ಮುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.