ADVERTISEMENT

ಅನ್ಯಾಯದ ಸಂಪತ್ತು ಶಾಶ್ವತ ಅಲ್ಲ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2012, 9:40 IST
Last Updated 17 ಆಗಸ್ಟ್ 2012, 9:40 IST
ಅನ್ಯಾಯದ ಸಂಪತ್ತು ಶಾಶ್ವತ ಅಲ್ಲ
ಅನ್ಯಾಯದ ಸಂಪತ್ತು ಶಾಶ್ವತ ಅಲ್ಲ   

ಮೂಡುಬಿದಿರೆ: `ಅನ್ಯಾಯದಲ್ಲಿ ಸಂಪತ್ತು ಗಳಿಸಿ ಶ್ರೀಮಂತರಾದವರಿಗೆ ತೃಪ್ತಿ ಎನ್ನುವುದೇ ಇಲ್ಲ. ಇಂತಹ ಸಂಪತ್ತು ಶಾಶ್ವತ ಅಲ್ಲ~ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಹೇಳಿದರು.

ಬುಧವಾರ ವಿದ್ಯಾಗಿರಿಯಲ್ಲಿ ನಡೆದ ಮಿಜಾರುಗುತ್ತು ಆನಂದ ಆಳ್ವ ಅವರ 95ನೇ ಹುಟ್ಟುಹಬ್ಬದ ಪ್ರಯುಕ್ತ  ಆಳ್ವಾಸ್ ಶಿಕ್ಷಣ ಸಂಸ್ಥೆಯ ರಜತಾದ್ರಿ ಮತ್ತು ಕೊಡಚಾದ್ರಿ ವಸತಿ ನಿಲಯ ಮತ್ತು ಮೂಲ್ಕಿ ಭಾಸ್ಕರ ಸರಸ್ವತಿ ಕ್ರೀಡಾ ಹಾಸ್ಟೆಲ್ ಉದ್ಘಾಟಿಸಿ ಅವರು ಮಾತನಾಡಿದರು.

`ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 66 ವರ್ಷಗಳಾಗಿವೆ. ಇಂದಿನ ಪರಿಸ್ಥಿತಿಯನ್ನು ಗಮನಿಸಿದಾಗ ನಾವು ಎಲ್ಲೊ ಒಂದು ಕಡೆ ದಾರಿ ತಪ್ಪಿದ ಅನುಭವವಾಗುತ್ತಿದೆ. ಸಮಾಜದಲ್ಲಿ ದುರಾಸೆ ಹೆಚ್ಚಾಗುತ್ತಿದೆ. ಅನ್ಯಾಯದಲ್ಲಿ ಗಳಿಸಿ ಶ್ರೀಮಂತರಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಭ್ರಷ್ಟಾಚಾರ ನಮ್ಮ ವ್ಯವಸ್ಥೆಯನ್ನು ಹಾಳು ಮಾಡುತ್ತಿದೆ. ಸರ್ಕಾರಿ ನೌಕರರು ತಾವು ಸಮಾಜ ಸೇವಕರೆನ್ನುವುದನ್ನು ಮರೆತಿದ್ದಾರೆ. ಇದರಿಂದಾಗಿ ಮಾನವೀಯತೆ. ಸಂಸ್ಕೃತಿ ಮಾಯವಾಗಿದೆ~ ಎಂದು ವಿಷಾದ ವ್ಯಕ್ತಪಡಿಸಿದರು. 

 ಮಂಗಳೂರಿನ ಕೊಣಾಜೆಯಲ್ಲಿ ನಿರ್ಮಾಣವಾಗುತ್ತಿರುವ ಲಯನ್ಸ್ ಮುಕ್ತಿ ಭೂಮಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಡಾ. ಮೋಹನ್ ಆಳ್ವ ಅವರು ಒಂದು ಲಕ್ಷ ರೂಪಾಯಿ ದೇಣಿಗೆಯನ್ನು ಲಯನ್ 324 ಡಿ5ರ ಮಾಜಿ ಸಂಚಾಲಕಿ ವಿಜಯಲಕ್ಷ್ಮಿ ಪ್ರಸಾದ್ ರೈ ಅವರಿಗೆ ಹಸ್ತಾಂತರಿಸಿದರು.

ಕೊಯಮುತ್ತೂರಿನ ಸ್ಟೇನ್ ಕಂಪೆನಿಯ ಕೆ.ಎಸ್ ಹೆಗ್ಡೆ, ಉದ್ಯಮಿ ಅರವಿಂದ ಪೂಂಜ, ಬಾಲಕೃಷ್ಣ ಅಳ್ವ, ಮಾಜಿ ಸಚಿವ ಅಮರನಾಥ ಶೆಟ್ಟಿ , ಜಯಶ್ರೀ ಎ. ಶೆಟ್ಟಿ, ಸಂಸ್ಥೆಯ ಟ್ರಸ್ಟಿ ವಿವೇಕ ಆಳ್ವ, ವರ್ಷಾ ವಿ. ಆಳ್ವ, ವಿನಯ ಆಳ್ವ ಇದ್ದರು.  ಸರ್ಕಾರದ ವಿಪಕ್ಷ ಮುಖ್ಯ ಸಚೇತಕ ಅಭಯಚಂದ್ರ ಅವರು ಆನಂದ ಆಳ್ವ ಅವರ ಮನೆಗೆ ತೆರಳಿ ಹುಟ್ಟುಹಬ್ಬದ ಶುಭಾಶಯ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.