ಮಂಗಳೂರು: ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಎಂ.ಆರ್.ವಾಸುದೇವ್ ಅವರು ಶನಿವಾರ ಜಿಲ್ಲಾ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆ ಬಗ್ಗೆ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸಂಸ್ಥಾಪಕ ಸಂಚಾಲಕ ರಾಬರ್ಟ್ ರೊಸಾರಿಯೊ ಅವರು ಅಪಸ್ವರ ಎತ್ತಿದ್ದರಿಂದ ನಾಮಪತ್ರ ಸಲ್ಲಿಕೆ ವೇಳೆ ನೂಕುನುಗ್ಗಾಟ ನಡೆದು ಗೊಂದಲದ ವಾತಾವರಣ ನಿರ್ಮಾಣವಾಯಿತು.
ಪಕ್ಷವು ಜಿಲ್ಲೆಯಲ್ಲಿ ಮೊದಲ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದರಿಂದ ಅನುಭವದ ಕೊರತೆ ಕಂಡುಬಂತು. ಒಬ್ಬರು ಪಕ್ಷದ ಕಚೇರಿಯಲ್ಲಿ ಕುಳಿತು ನಿದ್ದೆ ಹೋಗಿದ್ದರೆ, ಇನ್ನೊಬ್ಬರು ಪತ್ರಿಕೆಗಳಲ್ಲಿ ಬರುವ ‘ಪದಬಂಧ’ದ ಅಕ್ಷರ ಜೋಡಿಸುವುದರಲ್ಲಿ ತಲ್ಲೀನರಾಗಿದ್ದರು.
ಕಚೇರಿಯಿಂದ ಅಭ್ಯರ್ಥಿ ಹೊರಟಾಗ ನಾಯಕರೊಬ್ಬರು ಹಿಂದಕ್ಕೆ ಓಡಿ, ‘ಸಮ್ ಬಡಿ ಕ್ಯಾರಿ ಸಮ್ ಪ್ಯಾಂಪ್ಲೆಟ್ಸ್ ಯಾರ್’ (ಯಾರಾದರೂ ಕರಪತ್ರ ಹಿಡಿದುಕೊಳ್ಳಿ) ಎಂದು ಕೂಗಿದರು. ಇನ್ನೂ ಕೆಲವರು ಕಾರ್ಯಕರ್ತರ ತಲೆಗೆ ‘ಆಮ್ ಆದ್ಮಿ’ ಟೋಪಿ ಹಾಕುವುದರಲ್ಲಿ ತಲ್ಲೀನರಾಗಿದ್ದರು.
ಪಾದಯಾತ್ರೆ– ಬಸ್ ಪಯಣ: ಪಕ್ಷದ ಅಭ್ಯರ್ಥಿ ಮತ್ತು ಬೆಂಬಲಿಗರು ಬಲ್ಮಠದ ಕಚೇರಿಯಿಂದ ಹಂಪನಕಟ್ಟೆವರೆಗೆ ಪಾದಯಾತ್ರೆಯಲ್ಲಿ ಸಾಗಿ, ಬಳಿಕ ಸಿಟಿ ಬಸ್‌ನಲ್ಲಿ ಪ್ರಯಾಣಿಸಿದರು. ನಾಯಕರು ನಾಮಪತ್ರದ ಜತೆ ಸಲ್ಲಿಸುವ ಪ್ರಮಾಣಪತ್ರವನ್ನು ನೋಟರಿ ಅವರಿಂದ ದೃಢೀಕರಿಸುವುದನ್ನೇ ಮರೆತಿದ್ದರು. ಅದಕ್ಕಾಗಿ ಜಿಲ್ಲಾಧಿಕಾರಿ ಕಚೇರಿ ಬಳಿ ಸುಮಾರು ಒಂದು ತಾಸು ಕಾಯಬೇಕಾಯಿತು.
ಅಷ್ಟರಲ್ಲಿ ನಾಟಕೀಯ ಬೆಳವಣಿಗೆ ನಡೆಯಿತು. ಪಕ್ಷದ ಜಿಲ್ಲಾ ಘಟಕದ ಸಂಸ್ಥಾಪಕ ರಾಬರ್ಟ್ ರೊಸಾರಿಯೊ ಅವರು, ‘ಎಂ.ಆರ್.ವಾಸುದೇವ್ ಅವರು ಪಕ್ಷದ ಅಧಿಕೃತ ಅಭ್ಯರ್ಥಿಯೇ ಅಲ್ಲ. ಅವರಿಗೆ ಪಕ್ಷದ ಬಿ.ಫಾರ್ಮ್ ಇನ್ನೂ ಸಿಕ್ಕಿಲ್ಲ. ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ಇದೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.
‘ವಾಸುದೇವ್ ಅವರು ಸಂಘ ಪರಿವಾರದ ಅಭ್ಯರ್ಥಿ. ಬಿಜೆಪಿಯ ‘ನಮೋ ಬ್ರಿಗೇಡ್’ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಗ್ಗೆ ನಾನು ವರಿಷ್ಠರಿಗೆ ದೂರು ನೀಡಿದ್ದೇನೆ. ಅವರ ಆಯ್ಕೆಯೂ ಪಕ್ಷದ ನಿಯಮ ಪ್ರಕಾರ ಆಗಿಲ್ಲ. ನಮ್ಮ ಪಕ್ಷದ ಅಭ್ಯರ್ಥಿಯ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ ಆಹ್ವಾನಿಸಬೇಕು. ಆದರೆ, ಇವರ ಆಯ್ಕೆಯನ್ನು ಗುಟ್ಟಾಗಿ ನಡೆಸಿ ಮತ್ತೆ ಹೆಸರು ಪ್ರಕಟಿಸಲಾಗಿದೆ. ಇದು ಒಂದು ರೀತಿ ಎತ್ತಿನ ಮುಂದೆ ಗಾಡಿ ಕಟ್ಟಿದಂತೆ’ ಎಂದು ಆರೋಪಿಸಿದರು.
ಅಷ್ಟರಲ್ಲಿ ರಾಬರ್ಟ್ ಅವರನ್ನು ಸುತ್ತುವರಿದ ‘ಆಮ್ ಆದ್ಮಿ’ಗಳ ಗುಂಪು, ‘ ಇವ ನಮ್ಮ ಪಕ್ಷದವನೇ ಅಲ್ಲ. ಇವನಿಗೆ ಪಕ್ಷದ ಟೋಪಿ ನೀಡಿದ್ದು ಯಾರು?’ ಎಂದು ಅವರ ಟೋಪಿಯನ್ನು ಹಾಗೂ ಕನ್ನಡಕವನ್ನು ಕಿತ್ತು ತೆಗೆದು ಹಲ್ಲೆಗೆ ಮುಂದಾಯಿತು. ಅಷ್ಟರಲ್ಲಿ ಪಕ್ಷದ ಮುಖಂಡರು ಸಿಟ್ಟಿಗೆದ್ದ ಬೆಂಬಲಿಗರನ್ನು ಸಮಾಧಾನ ಪಡಿಸಿದರು.
‘ರಾಬರ್ಟ್ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ. ಅವರ ಮಾತಿಗೆ ಬೆಲೆ ಕೊಡಬೇಕಿಲ್ಲ. ಅವರಿಗೆ ಟಿಕೆಟ್ ಸಿಕ್ಕಿಲ್ಲ ಎಂಬ ಹತಾಶೆಯಿಂದ ಅವರು ಹೀಗೆ ಮಾತನಾಡುತ್ತಿದ್ದಾರೆ’ ಎಂದು ಪಕ್ಷದ ಪ್ರಚಾರ ಅಭಿಯಾನದ ವ್ಯವಸ್ಥಾಪಕ ಜಯಪ್ರಕಾಶ್ ರಾವ್ ಸುದ್ದಿಗಾರರಿಗೆ ತಿಳಿಸಿದರು.
ಈ ಗೊಂದಲಗಳ ನಡುವೆಯೇ ಎಂ.ಆರ್.ವಾಸುದೇವ ಅವರು ನಾಮಪತ್ರ ಸಲ್ಲಿಸಿದರು. ‘ನಾನು ಈ ಹಿಂದೆ ಆರ್ಥಿಕ ಅಭಿವೃದ್ಧಿ ಕುರಿತು ನಮೋ ಬ್ರಿಗೇಡ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನಿಜ. ಆಗ ಪಕ್ಷದ ಕಾರ್ಯಕರ್ತನಲ್ಲ. ಸಾಮಾನ್ಯ ಪ್ರಜೆಯ ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದೂ ತಪ್ಪಲ್ಲ. ಪಕ್ಷಕ್ಕೆ ಸೇರಿದ ಬಳಿಕ ಅದರ ಸಿದ್ಧಾಂತಕ್ಕೆ ಬದ್ಧನಾಗಿದ್ದೇನೆ.
ಭ್ರಷ್ಟಾಚಾರ ನಿರ್ಮೂಲನೆ, ಸೌಜನ್ಯಾ ಕೊಲೆ ಪ್ರಕರಣದ ಹೋರಾಟದ ವಿಷಯದಲ್ಲಿ ಪಕ್ಷದ ಹಿಂದಿನ ನಿಲುವಿನಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಜಿಲ್ಲೆಯಲ್ಲಿ ಕೋಮು ಸಾಮರಸ್ಯ ಕಾಪಾಡುವ ವಿಚಾರದಲ್ಲಿ ರಾಜಿ ಇಲ್ಲ. ನೈತಿಕ ಪೊಲೀಸ್ಗಿರಿಗೆ ಬೆಂಬಲವಿಲ್ಲ. ಸಂವಿಧಾನದ ಆಡಳಿತ ನಡೆಯಬೇಕು’ ಎಂದರು.
‘ಅಪಸ್ವರ ಎಲ್ಲ ಪಕ್ಷದಲ್ಲೂ ಇದ್ದದ್ದೇ. ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಎಲ್ಲರನ್ನೂ ಒಗ್ಗೂಡಿಸಿ ಸಾಮರಸ್ಯದಿಂದ ಪಕ್ಷ ಕಟ್ಟುತ್ತೇನೆ. ಇದೇ 26ರ ಒಳಗೆ ಬಿ–ಫಾರ್ಮ್ ಅನ್ನೂ ಸಲ್ಲಿಸುತ್ತೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.