ADVERTISEMENT

ಅಬ್ದುಲ್‌ ರವೂಫ್‌ಗೆ ಭಾಸ್ಕರ್ ಪೈಪೋಟಿ

ಮಂಗಳೂರು ಮೇಯರ್–ಉಪಮೇಯರ್ ಚುನಾವಣೆ ಇಂದು

ಚಿದಂಬರ ಪ್ರಸಾದ್
Published 8 ಮಾರ್ಚ್ 2018, 8:45 IST
Last Updated 8 ಮಾರ್ಚ್ 2018, 8:45 IST
ಮಂಗಳೂರು ಮಹಾನಗರ ಪಾಲಿಕೆ ಕಟ್ಟಡ
ಮಂಗಳೂರು ಮಹಾನಗರ ಪಾಲಿಕೆ ಕಟ್ಟಡ   

ಮಂಗಳೂರು: ಪಾಲಿಕೆ ಮೇಯರ್‌– ಉಪಮೇಯರ್‌, ಸ್ಥಾಯಿ ಸಮಿತಿ ಸದಸ್ಯ ಸ್ಥಾನಗಳಿಗೆ ಗುರುವಾರ (ಇದೇ 8) ಚುನಾವಣೆ ನಡೆಯಲಿದ್ದು, ಮೇಯರ್‌ ಸ್ಥಾನಕ್ಕೆ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ತೀವ್ರ ಪೈಪೋಟಿ ಎದುರಾಗಿದೆ. ಒಂದೆಡೆ ಪಕ್ಷದ ಮುಸ್ಲಿಂ ಮುಖಂಡರು ಮೇಯರ್‌ ಸ್ಥಾನವನ್ನು ತಮಗೇ ನೀಡಬೇಕು ಎನ್ನುವ ಒತ್ತಡ ಹೇರುತ್ತಿದ್ದರೆ, ಇನ್ನೊಂದೆಡೆ ಭಾಸ್ಕರ್ ಮೊಯಿಲಿ ಕೂಡ ರಾಜ್ಯ, ರಾಷ್ಟ್ರ ನಾಯಕರಿಂದ ಒತ್ತಡ ತಂದಿದ್ದಾರೆ.

ಪ್ರಸಕ್ತ ಆಡಳಿತ ಮಂಡಳಿ ಕೊನೆಯ ಅವಧಿಯ ಮೇಯರ್‌–ಉಪಮೇಯರ್ ಚುನಾವಣೆ ಇದಾಗಿದ್ದು, ಈಗಾಗಲೇ ಮೇಯರ್‌ ಹುದ್ದೆ ಅಲಂಕರಿಸಿರುವ ಸಮುದಾಯಗಳನ್ನು ಬಿಟ್ಟು, ಇತರರಿಗೆ ಅವಕಾಶ ಮಾಡಿಕೊಡಬೇಕು. ನಮ್ಮ ಸಮುದಾಯಕ್ಕೆ ಈ ಬಾರಿ ಮೇಯರ್‌ ಸ್ಥಾನ ನೀಡಲೇಬೇಕು ಎನ್ನುವ ಒತ್ತಡವನ್ನು ಮುಸ್ಲಿಂ ಮುಖಂಡರು ನಿರಂತರವಾಗಿ ಹೇರು ತ್ತಲೇ ಬಂದಿದ್ದಾರೆ. ಇತ್ತೀಚೆಗೆ ಪ್ರತ್ಯೇಕ ಸಭೆ ನಡೆಸಿದ್ದ ಮುಖಂಡರು, ಈಗಾಗಲೇ ಸಚಿವ ಬಿ. ರಮಾನಾಥ ರೈ, ಶಾಸಕರಾದ ಮೊಯಿದ್ದೀನ್‌ ಬಾವ ಹಾಗೂ ಜೆ.ಆರ್. ಲೋಬೊ ಅವರನ್ನು ಭೇಟಿ ಮಾಡಿ, ಸದ್ಯಕ್ಕೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿರುವ ಅಬ್ದುಲ್‌ ರವೂಫ್‌ ಅವರಿಗೆ ಮೇಯರ್‌ ಸ್ಥಾನ ನೀಡುವಂತೆ ಹಕ್ಕೊತ್ತಾಯವನ್ನೂ ಮಂಡಿಸಿದ್ದಾರೆ.

ಇನ್ನೊಂದೆಡೆ ಭಾಸ್ಕರ್‌ ಮೊಯಿಲಿ ಕೂಡ ಪಕ್ಷದ ರಾಜ್ಯ ನಾಯಕರೊಂದಿಗೆ ಒಡನಾಟ ಹೊಂದಿದ್ದು, ಹಿರಿಯ ಮುಖಂಡ ವೀರಪ್ಪ ಮೊಯಿಲಿ ಅವರಿಗೂ ಆಪ್ತರಾಗಿದ್ದಾರೆ. ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಹಲವು ವರಿಷ್ಠರು ಭಾಸ್ಕರ್‌ ಮೊಯಿಲಿ ಪರ ಒಲವು ವ್ಯಕ್ತಪಡಿಸಿರುವುದು ಕಾಂಗ್ರೆಸ್‌ ಜಿಲ್ಲಾ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ.

ADVERTISEMENT

ಇಕ್ಕಟ್ಟಿನಲ್ಲಿ ಕಾಂಗ್ರೆಸ್‌ ನಾಯಕರು: ಒಂದೆಡೆ ಮುಸ್ಲಿಂ ಮುಖಂಡರ ಒತ್ತಡ, ಇನ್ನೊಂದೆಡೆ ರಾಜ್ಯ ನಾಯಕರ ಸೂಚನೆ. ಇದೆಲ್ಲದರ ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವರೂ ಸೇರಿದಂತೆ ಜಿಲ್ಲೆಯ ಮುಖಂಡರು, ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.

ಶೀಘ್ರದಲ್ಲಿಯೇ ವಿಧಾನಸಭೆ ಚುನಾವಣೆ ಬರಲಿದ್ದು, ಯಾವ ಸಮುದಾ ಯವನ್ನು ಎದುರು ಹಾಕಿಕೊಂಡರೂ ಸಂಕಷ್ಟ ತಪ್ಪಿದ್ದಲ್ಲ ಎನ್ನುವ ಮಾತುಗಳು ಪಕ್ಷದಲ್ಲಿ ಕೇಳಿ ಬರುತ್ತಿವೆ. ಒಂದು ವೇಳೆ ಮೇಯರ್‌ ಸ್ಥಾನವನ್ನು ಮುಸ್ಲಿಮರಿಗೆ ನೀಡಿದರೆ, ಬಿಜೆಪಿಗೆ ಮತ್ತೊಂದು ಅಸ್ತ್ರ ಸಿಕ್ಕಂತಾಗುತ್ತದೆ. ಅಲ್ಪಸಂಖ್ಯಾತರ ತುಷ್ಟೀಕರಣ ಮಾಡಲಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬರಬಹುದು ಎನ್ನುವ ಆತಂಕ ಮುಖಂಡರನ್ನು ಕಾಡುತ್ತಿದೆ.

ಇನ್ನೊಂದೆಡೆ ಕಾಂಗ್ರೆಸ್‌ನಲ್ಲಿ ಮುಸ್ಲಿಂ ನಾಯಕರೂ ತಮ್ಮ ಪಟ್ಟನ್ನು ಬಿಗಿಗೊಳಿಸಿದ್ದು, ಮೇಯರ್‌ ಸ್ಥಾನ ನೀಡದೇ ಇದ್ದರೆ, ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವುದಾಗಿ ಘೋಷಣೆ ಯನ್ನೂ ಮಾಡಿದ್ದಾರೆ. ಇಷ್ಟೇ ಅಲ್ಲದೇ ಮೇಯರ್ ಸ್ಥಾನ ತಮಗೇ ನೀಡಬೇಕು ಎಂದು ಮುಸ್ಲಿಂ ನಿಯೋಗ ಈಗಾಗಲೇ ಪಕ್ಷದ ಹಲವು ಮುಖಂಡರನ್ನು ಭೇಟಿ ಮಾಡಿ ಒತ್ತಾಯಿಸಿದೆ. ಮುಸ್ಲಿಂ ಸಮುದಾಯಕ್ಕೆ ಮೇಯರ್ ಸ್ಥಾನ ನೀಡದೇ ಇದ್ದರೆ, ಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆ ಆಗುವುದು ನಿಶ್ಚಿತ ಎನ್ನುವ ವಾದಗಳು ಪಕ್ಷದೊಳಗೆ ತೀವ್ರವಾಗಿವೆ.

ಒಮ್ಮತಕ್ಕೆ ಬಾರದ ಸಭೆ: ಬುಧವಾರ ಬೆಳಿಗ್ಗೆಯಿಂದಲೇ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ನೇತೃತ್ವದಲ್ಲಿ ಸರಣಿ ಸಭೆಗಳನ್ನು ನಡೆಸಿದರೂ, ಅಭ್ಯರ್ಥಿಯ ಹೆಸರು ಅಂತಿಮವಾಗಿಲ್ಲ.

ಬೆಳಿಗ್ಗೆ ಇಲ್ಲಿನ ಕಾಂಗ್ರೆಸ್ ಕಚೇರಿ ಯಲ್ಲಿ ಸಚಿವರಾದ ರಮಾನಾಥ ರೈ, ಯು.ಟಿ. ಖಾದರ್, ಶಾಸಕ ಜೆ.ಆರ್. ಲೋಬೊ ಅವರು ಪಾಲಿಕೆಯ ಕಾಂಗ್ರೆಸ್ ಸದಸ್ಯರೊಂದಿಗೆ ಪ್ರಾಥಮಿಕ ಸುತ್ತಿನ ಮಾತುಕತೆ ನಡೆಸಿದ್ದಾರೆ. ಈ ಸಭೆಯಲ್ಲಿ ಶಾಸಕ ಮೊಯಿದ್ದೀನ್‌ ಬಾವ ಹಾಗೂ ವಿಧಾನ ಪರಿಷತ್‌ ಮುಖ್ಯ ಸಚೇತಕ ಐವನ್ ಡಿಸೋಜ ಭಾಗವಹಿಸದೇ ಇದ್ದುದರಿಂದ, ರಾತ್ರಿ ಮತ್ತೊಂದು ಸುತ್ತಿನ ಸಭೆ ನಡೆಸಲಾಯಿತು.

ಆದರೆ, ಎರಡೂ ಸಭೆಗಳಲ್ಲಿ ಭಾಸ್ಕರ್‌ ಮೊಯಿಲಿ ಬಣ ಹಾಗೂ ಅಬ್ದುಲ್‌ ರವೂಫ್‌ ಬಣಗಳು ತಮ್ಮ ಪಟ್ಟನ್ನು ಸಡಿಲಿಸದೇ ಇರುವುದರಿಂದ ಯಾವುದೇ ಹೆಸರನ್ನು ಅಂತಿಮ ಗೊಳಿಸುವುದು ಸಾಧ್ಯವಾಗಿಲ್ಲ. ಹೀಗಾಗಿ ಗುರುವಾರ ಬೆಳಿಗ್ಗೆಯೇ ಅಭ್ಯರ್ಥಿಯ ಹೆಸರನ್ನು ಸೂಚಿಸಲು ನಿರ್ಧರಿಸಲಾಗಿದೆ.

ಈ ಕುರಿತು ಸಚಿವರಾದ ರೈ ಹಾಗೂ ಖಾದರ್ ಅವರು ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ ಅವರ ಜತೆಗೂ ಚರ್ಚೆ ನಡೆಸಿದ್ದು, ಯಾವ ಅಭ್ಯರ್ಥಿ ಪರ ಒಲವು ಹೊಂದಿದ್ದಾರೆ ಎಂಬುದನ್ನು ಮಾತ್ರ ಗೌಪ್ಯವಾಗಿ ಇಟ್ಟಿದ್ದಾರೆ. ರಾತ್ರಿಯೂ ರಾಜಕೀಯ ಒತ್ತಡ ಮುಂದುವರಿದಿದ್ದು, ಯಾರ ಕೈ ಮೇಲಾಗಲಿದೆ ಎಂಬುದು ಗುರುವಾರವೇ ಸ್ಪಷ್ಟವಾಗಲಿದೆ ಎಂಬುದು ಪಕ್ಷದ ಮೂಲಗಳು ನೀಡಿರುವ ಮಾಹಿತಿ.

ಅಪ್ಪಿಗೆ ಉಪಮೇಯರ್ ಸ್ಥಾನ: ಮೇಯರ್ ಸ್ಥಾನವನ್ನು ಪುರುಷರಿಗೆ ನೀಡುವುದು ಬಹುತೇಕ ಖಚಿತವಾಗಿದೆ. ಉಪಮೇಯರ್ ಸ್ಥಾನವನ್ನು ಮಹಿಳೆ ಯರಿಗೆ ನೀಡುವ ಮೂಲಕ ಮಹಿಳಾ ದಿನಾಚರಣೆ ಉಡುಗೊರೆ ನೀಡುವ ಉದ್ದೇಶವನ್ನು ಪಕ್ಷದ ವರಿಷ್ಠರು ಮಾಡಿದ್ದಾರೆ.

ಈ ನಿಟ್ಟಿನಲ್ಲಿ ಈಗಾಗಲೇ ಚರ್ಚೆ ಯನ್ನು ಅಂತಿಮಗೊಳಿಸಲಾಗಿದ್ದು, ಉಪಮೇಯರ್ ಹುದ್ದೆಗೆ ಪೈಪೋಟಿ ಇಲ್ಲದೇ ಇರುವುದರಿಂದ ಹಿರಿಯ ಸದಸ್ಯೆ ಅಪ್ಪಿ ಅವರನ್ನು ಆ ಸ್ಥಾನದಲ್ಲಿ ಕೂರಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ.

**

ಮೇಯರ್‌–ಉಪಮೇಯರ್ ಸ್ಥಾನದ ಅಭ್ಯರ್ಥಿಗಳ ಆಯ್ಕೆಯ ಸಂಪೂರ್ಣ ಜವಾಬ್ದಾರಿಯನ್ನು ಪಕ್ಷದ ವರಿಷ್ಠರಿಗೆ ನೀಡಲು ತೀರ್ಮಾನಿಸಲಾಗಿದೆ.

-ಎಂ. ಶಶಿಧರ್‌ ಹೆಗ್ಡೆ, ಪಾಲಿಕೆ ಸಚೇತಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.