ADVERTISEMENT

ಅವ್ಯವಸ್ಥೆ: ಚುನಾವಣಾ ತರಬೇತಿ ವೇಳೆ ಗೊಂದಲ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 6:37 IST
Last Updated 25 ಏಪ್ರಿಲ್ 2013, 6:37 IST

ಬಂಟ್ವಾಳ: ತಾಲ್ಲೂಕಿನ ಮೊಡಂಕಾಪು ಇನಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಚುನಾವಣಾ ಅಧಿಕಾರಿಗಳು ಮತ್ತು ಸಿಬ್ಬಂದಿಗಾಗಿ ಬುಧವಾರ ನಡೆದ ತರಬೇತಿ ಸಂದರ್ಭದಲ್ಲಿ ಕೆಲಹೊತ್ತು ಅಲ್ಲಿನ ಅವ್ಯವಸ್ಥೆಯಿಂದಾಗಿ ಗೊಂದಲ ಉಂಟಾದ ಪ್ರಸಂಗ ಬೆಳಕಿಗೆ ಬಂದಿದೆ.

ತಾಲ್ಲೂಕಿನ ವಿವಿಧ ಇಲಾಖೆ ಸಹಿತ ಬಹುತೇಕ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಕಾಲೇಜಿನ ಶಿಕ್ಷಕ-ಶಿಕ್ಷಕಿಯರು ಮತ್ತು ಉಪನ್ಯಾಸಕರು ಬುಧವಾರ ಬೆಳಿಗ್ಗೆ 9.30 ಗಂಟೆಗೆ ಸರಿಯಾಗಿ ಮೊಡಂಕಾಪು ಇನ್‌ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತರಬೇತಿಗಾಗಿ ಹಾಜರಾಗಿದ್ದರು.

ಸೆಕ್ಟರ್ ಅಧಿಕಾರಿ, ಪ್ರಿಸೈಂಡಿಗ್ ಅಧಿಕಾರಿ ಮತ್ತು ಸಹಾಯಕ ಪ್ರಿಸೈಡಿಂಗ್ ಅಧಿಕಾರಿ ಸೇರಿದಂತೆ ಒಟ್ಟು 940 ಮಂದಿಗೆ ತರಬೇತಿಗೆ ಹಾಜರಾಗಲು ಆದೇಶ ಬಂದಿತ್ತು. ಈ ಪೈಕಿ ಕೆಲವರಿಗೆ ಮಧ್ಯಾಹ್ನ ಬಳಿಕ ತರಬೇತಿ ನಿಗದಿಯಾಗಿದ್ದರೂ ಮಾಹಿತಿ ಕೊರತೆಯಿಂದಾಗಿ ಬೆಳಿಗ್ಗೆ ಬಂದಿದ್ದರು. ಇನ್ನೊಂದೆಡೆ 10 ತಿಂಗಳಿಗಿಂತಲೂ ಪುಟ್ಟ ಮಕ್ಕಳನ್ನು ಹೊಂದಿದ್ದ ಶಿಕ್ಷಕಿಯರಿಗೂ ಮಾನವೀಯ ನೆಲೆಯಲ್ಲಿ ರಿಯಾಯಿತಿ ನೀಡದೇ ಚುನಾವಣಾ ಕರ್ತವ್ಯಕ್ಕೆ ಹೆಸರು ಸೇರ್ಪಡೆಗೊಳಿಸಿರುವ ಬಗ್ಗೆಯೂ ಟೀಕೆಗಳು ವ್ಯಕ್ತವಾಗಿದ್ದವು.

ತರಬೇತಿಗಾಗಿ ಬಂದಿದ್ದ ಹಲವಾರು ಮಂದಿ ಶಿಕ್ಷಕರ ಹೆಸರು ಸೂಚನಾ ಪಟ್ಟಿಯಲ್ಲಿ ಬಿಟ್ಟು ಹೋಗಿರುವ ಪರಿಣಾಮ ಅವರೆಲ್ಲರೂ ಸುಮಾರು 12 ಗಂಟೆಯವರೆಗೂ ಹೊರಗೆ ಕಾಯುವಂತಾಯಿತು. ಇನ್ನೊಂದೆಡೆ ಸೆಕ್ಟರ್ ಅಧಿಕಾರಿಗಳಿಗೆ ತರಬೇತಿ ನೀಡಲು ಲ್ಯಾಪ್‌ಟಾಪ್ ಮತ್ತು ಪರದೆ ವ್ಯವಸ್ಥೆ ಇರಲಿಲ್ಲ. ಮತ್ತೊಂದೆಡೆ ವಿದ್ಯುತ್ ಕೈಕೊಡುತ್ತಿರುವ ಬಗ್ಗೆ ಮಾಹಿತಿ ಇದ್ದರೂ ಜನರೇಟರ್ ಅಳವಡಿಸಿಲ್ಲ ಎಂಬ ಆಕ್ಷೇಪ ತರಬೇತಿಗೆ ಹಾಜರಾಗಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ವ್ಯಕ್ತವಾಗಿದೆ.

ತಾಲ್ಲೂಕಿನ ವಾಮದಪದವು ಮತ್ತು ವಿಟ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ನಡೆಯುತ್ತಿದ್ದರೂ ಅಲ್ಲಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕರನ್ನು ಕೂಡಾ ತರಬೇತಿಗೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಲಾಗಿದೆ.

ಈ ನಡುವೆ ಕಾಂಗ್ರೆಸ್ ಅಭ್ಯರ್ಥಿ ಬಿ.ರಮಾನಾಥ ರೈ ಮತ್ತು ಬಿಜೆಪಿ ಅಭ್ಯರ್ಥಿ ಉಳಿಪಾಡಿಗುತ್ತು ರಾಜೇಶ ನಾಯ್ಕ ಅವರು ತರಬೇತಿ ಕೊಠಡಿ ಬಳಿ ಬಂದು ಶಿಕ್ಷಕರು ಮತ್ತು ಇತರ ಅಧಿಕಾರಿಗಳಿಂದ ಮತಯಾಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.