ADVERTISEMENT

ಆಟಿ ಬಂದರೂ ತುಳುನಾಡಿನಲ್ಲಿ ಚುರುಕುಗೊಳ್ಳದ ನಾಟಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2012, 10:35 IST
Last Updated 19 ಜುಲೈ 2012, 10:35 IST

ಮಂಗಳೂರು: ಆಟಿ ತಿಂಗಳು ಎಂದರೆ ಕರಿ ಮೋಡದೊಂದಿಗೆ ಮಳೆ ಬರುವ ಕಾಲ ಎಂದೇ ವಾಡಿಕೆ. ತುಳುನಾಡಿನಲ್ಲಿ ದಟ್ಟ ಮಳೆಗಾಲದ ಸಂಕೇತವಾದ ಆಟಿ ತಿಂಗಳು ಆರಂಭವಾದರೂ ಬಿರುಸಿನ ಮಳೆ ಜಿಲ್ಲೆಯಿಂದ ದೂರವೇ ಉಳಿದಿದ್ದು, ಕೃಷಿ ಕಾರ್ಯಗಳು ವಿಳಂಬವಾಗುವಂತಾಗಿದೆ.

ಕರಾವಳಿ ಭಾಗದಂತೆ ಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಸಹ ಈ ಬಾರಿ ಬಿರುಸಿನ ಮಳೆ ಸುರಿದಿಲ್ಲ. ಹೀಗಾಗಿ ಸುಬ್ರಹ್ಮಣ್ಯ, ಬೆಳ್ತಂಗಡಿ ಸಹಿತ ಇತರ ಕಡೆಗಳಲ್ಲಿ ಸಣ್ಣಪುಟ್ಟ ಹೊಳೆ, ಹಳ್ಳಗಳಲ್ಲಿ ರಭಸದ ನೀರು ಹರಿದಿಲ್ಲ. ಹೊಳೆ ಬದಿಯ ಕೆಲವೊಂದು ತೋಟಗಳಿಗೆ ಪ್ರವಾಹ ಬಂದು ಗೊಬ್ಬರ ಕೊಚ್ಚಿಕೊಂಡು ಹೋಗುವ ಮತ್ತು ಫಲವತ್ತಾದ ಮಣ್ಣು ತೋಟದಲ್ಲಿ ನಿಂತುಕೊಳ್ಳುವ ಪ್ರಮೇಯವೂ ಈ ಬಾರಿ ಎದುರಾಗಿಲ್ಲ. ಧೋ ಎಂದು ಮಳೆ ಸುರಿಯಬೇಕಾದಲ್ಲಿ ಉರಿ ಬಿಸಿಲು ಸುಡುತ್ತಿದೆ.

ಕಳೆದ ವರ್ಷ ಜುಲೈ 18ರವರೆಗೆ ಜಿಲ್ಲೆಯಲ್ಲಿ 1917.17 ಮಿ.ಮೀ. ಮಳೆ ಸುರಿದಿತ್ತು. ಈ ಬಾರಿ ಕೇವಲ 1289.09 ಮಿ.ಮೀ.ಮಳೆ ಮಾತ್ರ ಸುರಿದಿದೆ. ಪ್ರತಿದಿನದ ಮಳೆ ಗಮನಿಸಿದರೆ ದಿನಕ್ಕೆ ಒಂದೋ, ಎರಡೋ ಬಾರಿ ಮಳೆ ಸುರಿಯುತ್ತಿದೆ. ಆದರೆ ದಿನವಿಡೀ ಮಳೆ ಸುರಿಯುವುದು ಈ ಬಾರಿ ಒಂದೆರಡು ದಿನ ಬಿಟ್ಟರೆ ಕಳೆದ ಒಂದೂವರೆ ತಿಂಗಳಲ್ಲಿ ಇಲ್ಲವೇ ಇಲ್ಲ.

ಬತ್ತ ಕೃಷಿ ವಿಳಂಬ: ಜಿಲ್ಲೆಯಲ್ಲಿ 33,500 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬತ್ತದ ಕೃಷಿಯ ಗುರಿ ಇದ್ದು, ಇದುವರೆಗೆ 10,942 ಹೆಕ್ಟೇರ್‌ನಲ್ಲಿ ಮಾತ್ರ ನಾಟಿ ಕಾರ್ಯ ನಡೆದಿದೆ. ಕಳೆದ ವರ್ಷ ಇದೇ ಸಮಯಕ್ಕೆ 19,396 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಕಾರ್ಯ ಕೊನೆಗೊಂಡಿತ್ತು. ಒಟ್ಟಾರೆ ನಾಟಿಯಲ್ಲಿ ಶೇ 33ರಷ್ಟು ಮಾತ್ರ ಸಾಧನೆಯಾಗಿದೆ. ಮಳೆ ಕೊರತೆಯಿಂದ ಬಂಟ್ವಾಳ ತಾಲ್ಲೂಕಿನಲ್ಲಿ ಶೇ 27ರಷ್ಟು ಪ್ರದೇಶದಲ್ಲಿ ಮತ್ತು ಬೆಳ್ತಂಗಡಿ ತಾಲ್ಲೂಕಿನಲ್ಲಿ ಶೇ 27ರಷ್ಟು ಪ್ರದೇಶದಲ್ಲಿ ಮಾತ್ರ ಬತ್ತದ ನಾಟಿ ನಡೆದಿದೆ. 2010ರಲ್ಲಿ ಇದೇ ಸಮಯಕ್ಕೆ ಜಿಲ್ಲೆಯಲ್ಲಿ 17,068 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಕಾರ್ಯ ನಡೆದಿತ್ತು.

`ಮಳೆಯ ಕೊರತೆಯಿಂದ ಜಿಲ್ಲೆಯಲ್ಲಿ ಬತ್ತದ ಕೃಷಿ ವಿಳಂಬವಾಗಿರುವುದು ನಿಜ. 2002ರಲ್ಲೂ ಇದೇ ರೀತಿಯ ಸ್ಥಿತಿ ನಿರ್ಮಾಣವಾಗಿತ್ತು. ಮಳೆ ಇಲ್ಲವೇಇಲ್ಲ ಎಂದು ಗಾಬರಿಗೊಳ್ಳಬೇಕಾದ ಅಗತ್ಯ ಇಲ್ಲ. ಇನ್ನೂ ಮಳೆಗಾಲ ಮುಗಿದಿಲ್ಲ. ಬೆಟ್ಟು ಗದ್ದೆಗಳ (ಎತ್ತರದ ಭಾಗದ ಹೊಲಗಳು) ಹೊರತು ಉಳಿದೆಡೆ ಈಗ ಕೃಷಿ ಕಾರ್ಯ ಆರಂಭವಾಗಿದೆ. ಬೆಟ್ಟುಗದ್ದೆಗಳಲ್ಲಿ ಆಗಸ್ಟ್‌ನವರೆಗೂ ನಾಟಿ ಕಾರ್ಯ ನಡೆಯುವುದಿದೆ~ ಎಂದು ಜಿಲ್ಲಾ ಕೃಷಿ ಅಧಿಕಾರಿ ಕೆ.ಜಿ.ಫಾಲಿಚಂದ್ರ ಅವರು ಬುಧವಾರ `ಪ್ರಜಾವಾಣಿ~ಗೆ ತಿಳಿಸಿದರು.
 
ಜಿಲ್ಲೆಯಲ್ಲಿ ಇದುವರೆಗೆ 364 ಕ್ವಿಂಟಾಲ್ ಬಿತ್ತನೆ ಬೀಜವನ್ನು ರೈತ ಸಂಪರ್ಕ ಕೇಂದ್ರಗಳಿಂದ ರೈತರು ಖರೀದಿಸಿದ್ದಾರೆ. ಇನ್ನೂ 147 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನಿದೆ. ಕ್ವಿಂಟಾಲ್ ಒಂದರ 950 ರೂಪಾಯಿ ಸಬ್ಸಿಡಿಯಲ್ಲಿ ಬಿತ್ತನೆ ಬೀಜ ಪೂರೈಸಲಾಗುತ್ತಿದೆ. ರಸಗೊಬ್ಬರದ ಸಮಸ್ಯೆಯೂ ಇಲ್ಲ ಎಂದು ಅವರು ಹೇಳಿದರು.
ಸದ್ಯ ಜಿಲ್ಲೆಯಲ್ಲಿ ರೈತರು ಬಿರುಸಿನ ಮಳೆಗಾಗಿ ಎದುರು ನೋಡುತ್ತಿದ್ದಾರೆ. ಇದೀಗ ವಿಳಂಬವಾದ ಮಳೆ ಬತ್ತದ ಕಟಾವು ಸಮಯದವರೆಗೂ ವಿಸ್ತರಿಸದಿರಲಿ ಎಂದೂ ಹಾರೈಸುತ್ತಿದ್ದಾರೆ. ಮಳೆ ಕಡಿಮೆಯಾಗಿರುವುದರಿಂದ ಈ ಬಾರಿ ಅಡಿಕೆ ತೋಟಗಳಲ್ಲಿ ಕೊಳೆ ರೋಗ ಅಷ್ಟಾಗಿ ಕಾಣಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.