ADVERTISEMENT

ಆನೆ ದಾಳಿ– ಗದ್ದೆ, ತೋಟಕ್ಕೆ ಹಾನಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 9:42 IST
Last Updated 19 ಸೆಪ್ಟೆಂಬರ್ 2013, 9:42 IST

ಸುಬ್ರಹ್ಮಣ್ಯ: ನಾಲ್ಕೂರು ಗ್ರಾಮದ ಪಂಜಿಪಳ್ಳ, ಅಮೆ ಮನೆ, ಪರಿಸರದಲ್ಲಿ ಕಾಡಾನೆಗಳ ಹಾವಳಿ ತೀವ್ರವಾಗಿ ಕಂಡು ಬಂದಿದೆ. ಹಲವಾರು ದಿನಗಳಿಂದ ಕೃಷಿ ತೋಟಗಳಿಗೆ ನಿರಂತರವಾಗಿ ದಾಳಿಯಿಡುತ್ತಿರುವ ಕಾಡಾನೆಗಳು ತೋಟಗಳನ್ನು ದ್ವಂಸ ಮಾಡುತ್ತಿವೆ. ಕಾಡಾನೆಗಳ ಹಿಂಡು ನಿರಂತರವಾಗಿ ರೈತರ ಗದ್ದೆ , ತೋಟಗಳಿಗೆ ನುಗ್ಗಿ ಕೃಷಿ ತೋಟಗಳನ್ನು ಪುಡಿ ಮಾಡಿವೆ.

ಮೋಹನ ಅಮೆಯವರ ಗದ್ದೆ ಹಾಗೂ ಪ್ರವೀಣ್ ಪಂಜಿಪಳ್ಳ, ಮೋನಪ್ಪ ಗೌಡ ಪಂಜಿಪಳ್ಳ ಅವರ ಅಡಿಕೆ ತೋಟಕ್ಕೆ ನುಗ್ಗಿ ಕೃಷಿಯನ್ನು ಹಾಳು ಮಾಡಿವೆ.

ಈ ಭಾಗದಲ್ಲಿ ಕಾಡಾನೆಗಳು ಕಳೆದ ಕೆಲವು ದಿನಗಳಿಂದ ನಿರಂತರವಾಗಿ ತೋಟಗಳಿಗೆ ಲಗ್ಗೆಯಿಡುತ್ತಿದ್ದು, ಹುಲುಸಾಗಿ ಬೆಳೆದ ಕೃಷಿ ಬೆಳೆ ನಾಶವಾಗುತ್ತಿರುವುದರಿಂದ ಇಲ್ಲಿನ ರೈತರು ಕಂಗೆಟ್ಟಿದ್ದಾರೆ. ಕತ್ತಲು ಆವರಿಸುತ್ತಿದ್ದಂತೆ ತೋಟಕ್ಕೆ ನುಗ್ಗಿ ನಿರಂತರವಾಗಿ ಕೃಷಿ ಬೆಳೆ ಹಾಗೂ ಉತ್ಪನ್ನಗಳನ್ನು ಹಾಳು ಮಾಡುವುದರಿಂದ ಬೇಸತ್ತ ಕೃಷಿಕರು ಅರಣ್ಯ ಇಲಾಖೆಯವರಿಗೆ ಮನವಿ ಸಲ್ಲಿಸಿದ್ದರು. ಆದರೂ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಡಾನೆಗಳು ಒಂದು ಕಡೆ ಜೀವ ಭಯ ಉಂಟುಮಾಡುತ್ತಿದ್ದರೆ ಇನ್ನೊಂದು ಕಡೆ ಅಮೂಲ್ಯ ಸಂಪತ್ತನ್ನು ಲೂಟಿ ಮಾಡುತ್ತಿದೆ. ಕಾಡಾನೆಯ ದಾಳಿಗೆ ಸಿಲುಕಿ ನಾಶವಾದ ಬೆಳೆಗಳಿಗೆ ಪರಿಹಾರ ನೀಡುವಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ್ಯ ತೋರುತ್ತಿದೆ. ಕಾಡಾನೆಗಳನ್ನು ಹಿಡಿದು ಆನೆ ಶಿಬಿರಕ್ಕೆ ಸೇರಿಸುವ ಬದಲು ಕಾಡಾನೆಗಳನ್ನು ಕಾಡಿನತ್ತ ಓಡಿಸುವ ಕಾರ್ಯಾಚರಣೆಯನ್ನು ಕೆಲ ದಿನಗಳ ಹಿಂದೆ ನಡೆಸಿ ಕೃಷಿಕರನ್ನು ಸಮಧಾನ ಪಡಿಸುವ ಕೆಲಸಕ್ಕೆ ಸೀಮಿತಗೊಳಿಸಿದ್ದಾರೆ. ಶಾಶ್ವತ ಪರಿಹಾರಕ್ಕೆ ಶ್ರಮಿಸದೆ ಕೃಷಿಕರನ್ನು ಹಗುರವಾಗಿ ಕಾಣಲಾಗುತ್ತಿದೆ ಎಂದು ಕೃಷಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಪಿ.ಆರ್.ಪದ್ಮನಾಭ ಗೌಡ, ಸದಸ್ಯ ದಿನೇಶ್ ಹಾಲೆಮಜಲು, ಉಪವಲಯ ಅರಣ್ಯಧಿಕಾರಿ ಅಜಿತ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಈ ಭಾಗದಲ್ಲಿ ಕೂಡಲೇ ಆನೆ ಕಂದಕ ನಿರ್ಮಿಸುವಂತೆ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.