ADVERTISEMENT

ಆಹಾರ ಕಲಬೆರೆಕೆ ತಡೆಗೆ ಕಟ್ಟುನಿಟ್ಟಿನ ಕ್ರಮ

​ಪ್ರಜಾವಾಣಿ ವಾರ್ತೆ
Published 13 ಜುಲೈ 2012, 7:45 IST
Last Updated 13 ಜುಲೈ 2012, 7:45 IST

ಮಂಗಳೂರು: ಆಹಾರ ಸುರಕ್ಷತೆ ಮತ್ತು ಮಾನಕಗಳ ಕಾಯಿದೆಯಡಿ ಆಹಾರ ಕಲಬೆರಕೆಯನ್ನು ತಡೆಗಟ್ಟಲು ಕಟ್ಟು ನಿಟ್ಟಿನ ಕಾನೂನು ಜಾರಿಯಾಗಿದೆ. ಆಹಾರ ಸಂಬಂಧಿ ಉದ್ದಿಮೆ ಅಥವಾ ವ್ಯವಹಾರದಲ್ಲಿ ತೊಡಗಿಸಿ ಡವರು ಆ.4ರೊಳಗಾಗಿ ತಮ್ಮ ವ್ಯವಹಾರಗಳ ಬಗ್ಗೆ ಆಹಾರ ಸುರಕ್ಷತಾ ಅಧಿಕಾರಿ ಅಥವಾ ಜಿಲ್ಲಾ ಸರ್ವೇಕ್ಷಣಾ ಘಟಕ ಕಚೇರಿಯಲ್ಲಿ  ಹೆಸರು ನೋಂದಾಯಿಸಬೇಕು~ ಎಂದು ದಕ್ಷಿಣ ಕನ್ನಡ ಹೆಚ್ಚುವರಿ ಜಿಲ್ಲಾಧಿಕಾರಿ ದಯಾನಂದ ಹೇಳಿದರು.

ಈ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ನಡೆದ ಸಭೆಯ್ಲ್ಲಲಿ ಸಮಿತಿಯ ನ್ಯಾಯನಿರ್ಣಯ ಅಧಿಕಾರಿಗಳಾಗಿರುವ ದಯಾನಂದ ಅವರು ಮಾತನಾಡಿ, `ಅತ್ಯಂತ ಪರಿಣಾಮಕಾರಿ ಕಾಯಿದೆ ಇದು. ಕಾಯ್ದೆ ಬಗ್ಗೆ ತಿಳಿವಳಿಕೆ ಮೂಡಿಸಿ ನೋಂದಾಸುವ ಕಾರ್ಯಕ್ಕೆ ಈಗಾಗಲೇ ವಿವಿಧ ಹಂತಗಳಲ್ಲಿ ಮಾಹಿತಿ ನೀಡಲಾಗುತ್ತಿದೆ. ಕಾನೂನು ಉಲ್ಲಂಘಿಸಿದವರಿಗೆ 6 ತಿಂಗಳ ಜೈಲುವಾಸ, 1 ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿವರೆಗೆ ದಂಡ, ಜೀವಾವಧಿ ಶಿಕ್ಷೆಯನ್ನೂ ವಿಧಿಸಬಹುದಾಗಿದೆ~ ಎಂದರು.

`ಆಹಾರ ಕಲಬೆರಕೆ ತಡೆಗಟ್ಟುವಿಕೆ ಕಾಯ್ದೆ- 1954, ಹಣ್ಣು ಹಂಪಲುಗಳ ಆದೇಶ -1995, ಮಾಂಸಾಹಾರ ಉತ್ಪನ್ನಗಳ ಆದೇಶ 1973, ತರಕಾರಿ ಎಣ್ಣೆಗಳ (ನಿಯಂತ್ರಣ) ಕಾಯ್ದೆ- 1947, ಖಾದ್ಯ ತೈಲಗಳ ಪ್ಯಾಕೇಜಿಂಗ್ (ನಿಯಮಾವಳಿ) ಕಾಯ್ದೆ- 1988, ಸಾಲ್ವೆಂಟ್ ಎಕ್ಸ್ ಟ್ರಾಕ್ಟೆಡ್, ಡೀ ಆಯಿಲ್ಡ್ ಮೀಲ್ ಮತ್ತು ಎಡಿಬಲ್ ಫ್ಲೋರ್ (ನಿಯಂತ್ರಣ) ಆದೇಶ-1967, ಹಾಲು ಮತ್ತು ಹಾಲು ಉತ್ಪನ್ನಗಳ ಆದೇಶ- 1992, ಮೊದಲಾದ ಅನೇಕ ಕೇಂದ್ರೀಯ ಕಾನೂನುಗಳನ್ನು ರದ್ದುಪಡಿಸಿ ಆಹಾರ ಸುರಕ್ಷತೆ ಮತ್ತು ಮಾನಕಗಳ ಕಾಯ್ದೆ- 2006 ರೂಪಿಸಲಾಗಿದೆ.

ಆಹಾರಗಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಸರ್ಕಾರ ರಚಿಸಿದ್ದ ಅನೇಕ ಮಂತ್ರಾಲಯಗಳು ಮತ್ತು ಇಲಾಖೆಗಳು, ಅವುಗಳ ಆದೇಶಗಳು ರದ್ದಾಗಲಿವೆ. ಅವುಗಳ ಬದಲು ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನಕಗಳ ಪ್ರಾಧಿಕಾರವನ್ನು ಸ್ಥಾಪಿಸಲಾಗಿದೆ. ಪ್ರಾಧಿಕಾರವು ಮಾನವನ ಬಳಕೆಗೆ ಸುರಕ್ಷಿತವಾದ ಮತ್ತು ಸಂಪೂರ್ಣವಾದ ಆಹಾರಗಳು ಲಭ್ಯವಾಗುವುದನ್ನು ಖಚಿತಪಡಿಸಲಿದೆ.

ಆಹಾರ ಪದಾರ್ಥಗಳಿಗೆ ವಿಜ್ಞಾನ ಆಧಾರಿತವಾದ ಮಾನಕಗಳನ್ನು ತಯಾರಿಸಲು, ಅವುಗಳ ಉತ್ಪಾದನೆ, ದಾಸ್ತಾನು, ವಿತರಣೆ, ಮಾರಾಟ ಮತ್ತು ಆಮದುಗಳನ್ನು ನಿಯಂತಿಸಲು ಕಾನೂನು ರೂಪಿಸಲಿದೆ~ ಎಂದರು.
`ಬೇಳೆ ಕಾಳು, ಬೇಕರಿ ತಿನಿಸು, ನೀರು, ಹಾಲು, ಮನೆಯಲ್ಲಿ ತಯಾರಿಸುವ ಗೃಹೋತ್ಪನ್ನ ಆಹಾರ ವಸ್ತುಗಳು ಈ ಕಾಯಿದೆಯಡಿ ಒಳಪಡುವುದರಿಂದ ಆಹಾರ ಸುರಕ್ಷತೆ ಅಧಿಕಾರಿಯಿಂದ ಸರ್ಟಿಫಿಕೇಟ್ ಪಡೆಯುವುದು ಅನಿವಾರ್ಯ. ಸರ್ಕಾರದ ಪಡಿತರ ಅಂಗಡಿ, ಬಿಸಿಯೂಟ, ಅಂಗನವಾಡಿಗಳಲ್ಲಿ ಆಹಾರ ಪೂರೈಕೆ, ಬಿಸಿಎಂ ಹಾಸ್ಟೆಲ್‌ಗಳ ಆಹಾರ ಪೂರೈಕೆಯೂ ಈ ಕಾನೂನಿನ ವ್ಯಾಪ್ತಿಗೆ ಬರಲಿದೆ~ ಎಂದರು.

`ಆಹಾರ ಸುರಕ್ಷತೆ ಅಧಿಕಾರಿಗಳ ಪ್ರಮಾಣಪತ್ರ ಇಲ್ಲದೆ ಯಾವುದೇ ವ್ಯಾಪಾರಕ್ಕೆ ಪರವಾನಿಗೆಗೆ (ಟ್ರೇಡ್ ಲೈಸನ್ಸ್) ಮಹಾನಗರ ಪಾಲಿಕೆ ಪರವಾನಗಿ ನೀಡಲಾಗುವುದಿಲ್ಲ~ ಎಂದು ಪಾಲಿಕೆ ಆಯುಕ್ತ ಡಾ.ಹರೀಶ್ ಕುಮಾರ್ ಹೇಳಿದರು.

ಸಭೆಯಲ್ಲಿ ಡಾ ರಾಜೇಶ್, ಆರೋಗ್ಯಾಧಿಕಾರಿ ಶ್ರಿರಂಗಪ್ಪ ಮತ್ತಿತರರಿದ್ದರು. ಪಾರಿಗಳು, ಬೀದಿ ಬದಿ ವ್ಯಾಪಾರಸ್ಥರು, ಹಣ್ಣು ತರಕಾರಿ ಮಾರುವವರು, ವಾಣಿಜ್ಯ ಮಳಿಗೆಗಳ ಮಾಲಕರು, ಆಹಾರಕ್ಕೆ ಸಂಬಂಧಿಸಿದ ಎಲ್ಲಾ ವ್ಯಾಪಾರಸ್ಥರು ಆಹಾರ ಸುರಕ್ಷತೆ ಮತ್ತು ಮಾನಕಗಳ ಕಾಯ್ದೆಯಡಿ ನೋಂದಾವಣಿಗೆ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ. ರಾಜೇಶ್ ಅವರಿಗೆ ಅರ್ಜಿ ಸಲ್ಲಿಸಬಹುದು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ವಿಳಾಸ: ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಕಚೇರಿ, ವೆನ್ಲಾಕ್ ಆಸ್ಪತ್ರೆ ಹಿಂಭಾಗ, ರೈಲ್ವೆ ನಿಲ್ದಾಣ ರಸ್ತೆ, ಐಎಂಎ ಎದುರು, ಮಂಗಳೂರು.

ಮಂಗಳೂರು, ಬೆಳ್ತಂಗಡಿ ವ್ಯಾಪ್ತಿಗೆ ಸುರೇಶ್ (ಮೊ: 9448744168),  ಬಂಟ್ವಾಳ, ಪುತ್ತೂರು, ಸುಳ್ಯ ವ್ಯಾಪ್ತಿಗೆ ದಯಾನಂದ (ಮೊ:9886568180) ಅವರು ಆಹಾರ ಸುರಕ್ಷತಾ ಅಧಿಕಾರಿಯಾಗಿರುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.