ಮಂಗಳೂರು: ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೊಳಿಸುವಲ್ಲಿ ಕಳೆದ ವರ್ಷ ಜಿಲ್ಲೆಯಲ್ಲಿ ಭಾರಿ ಪ್ರಮಾಣದಲ್ಲಿ ಅವ್ಯವಹಾರಗಳು ನಡೆದಿದ್ದು, ಈ ಬಾರಿ ಅದಕ್ಕೆ ಅವಕಾಶ ನೀಡಬಾರದು, ದೊರೆತಿರುವ ಹಣವನ್ನು ಪೂರ್ಣವಾಗಿ ಬಳಸಿಕೊಳ್ಳಬೇಕು ಎಂದು ಸಂಸದ ನಳಿನ್‌ಕುಮಾರ್ ಕಟೀಲ್ ಸೂಚಿಸಿದ್ದಾರೆ.
ಇಲ್ಲಿನ ಜಿ.ಪಂ.ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಲ್ಲಿ 37 ಗ್ರಾ.ಪಂ.ಗಳಲ್ಲಿ 20 ಲಕ್ಷ ರೂಪಾಯಿಗಳ ಅವ್ಯವಹಾರ ನಡೆದಿದೆ. ತನಿಖೆಯ ಬಳಿಕ ಇದುವರೆಗೆ 7.85 ಲಕ್ಷ ರೂಪಾಯಿ ವಸೂಲು ಮಾಡಿಕೊಳ್ಳಲಾಗಿದೆ. ಬಾಕಿ ಉಳಿದ ಹಣವನ್ನು ತಿಂಗಳೊಳಗೆ ವಸೂಲು ಮಾಡಬೇಕು ಎಂದು ಎಲ್ಲಾ ತಾ.ಪಂ.ಕಾಯನಿರ್ವಹಣಾಧಿಕಾರಿಗಳಿಗೆ ತಾಕೀತು ಮಾಡಿದರು.
ಈ ವರ್ಷದ ಕ್ರಿಯಾ ಯೋಜನೆ ಸಿದ್ಧಪಡಿಸುವಾಗ ಕಳೆದ ವರ್ಷ ಅವ್ಯವಹಾರ ನಡೆದ ಗ್ರಾ.ಪಂ.ಗಳತ್ತ ವಿಶೇಷ ಗಮನ ಹರಿಸಬೇಕು. ಪಿಡಿಒಗಳು ಮತ್ತು ಪಂಚಾಯಿತಿ ಕಾರ್ಯದರ್ಶಿಗಳು ಸಮರ್ಪಕವಾಗಿ ಕೆಲಸ ಮಾಡುತ್ತಿದ್ದಾರೆಯೇ ಎಂಬ ಬಗ್ಗೆ ನಿಗಾ ವಹಿಸಬೇಕು. ಉದ್ಯೋಗ ಖಾತರಿಯಲ್ಲಿ ಖಾಸಗಿ ಕೆಲಸಕ್ಕಿಂತ ಸಾರ್ವಜನಿಕ ಕೆಲಸಕ್ಕೆ ಆದ್ಯತೆ ನೀಡಬೇಕು ಎಂದು ಸಂಸದರು ಸೂಚಿಸಿದರು.
ಇದಕ್ಕೆ ಮೊದಲು ಅವರು ಪ್ರತಿ ತಾಲ್ಲೂಕಿನಲ್ಲಿ ಕಳೆದ ವರ್ಷ ನಡೆದ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಗಳು, ಖರ್ಚಾದ ದುಡ್ಡು, ನೀಡಲಾದ ಉದ್ಯೋಗ ಕಾರ್ಡ್, ಕೆಲಸ ಮಾಡಿದವರ ವಿವರ ಸಹಿತ ಇತರ ಹಲವು ಮಾಹಿತಿಗಳನ್ನು ಇಒಗಳಿಂದ ಕೇಳಿ ತಿಳಿದುಕೊಂಡರು.
ಆದರೆ ಬಂಟ್ವಾಳ ಮತ್ತು ಮಂಗಳೂರು ಇಒಗಳ ಉತ್ತರದಿಂದ ಅವರು ಸಿಟ್ಟಿಗೆದ್ದರು. ಉದ್ಯೋಗ ಖಾತರಿ ಯೋಜನೆಗಾಗಿಯೇ ಪ್ರತ್ಯೇಕ ಸಹಾಯಕ ನಿರ್ದೇಶಕರ ಹುದ್ದೆಯನ್ನು ಸೃಷ್ಟಿಸಲಾಗಿದೆ, ಹೀಗಿದ್ದರೂ ಸಮರ್ಪಕ ಮಾಹಿತಿ ಕೊಡದೆ ಇರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಮಂಗಳೂರು ಇಒ ಮಾತ್ರವಲ್ಲ, ಸಹಾಯಕ ನಿರ್ದೇಶಕರು ಸಹ ಯಾವುದೇ ಮಾಹಿತಿಯೊಂದಿಗೆ ಸಭೆಗೆ ಬಾರದೆ ಇದ್ದುದನ್ನು ಸಹ ಅವರು ತರಾಟೆಗೆ ತೆಗೆದುಕೊಂಡರು.
ಈ ವರ್ಷ ಜಿಲ್ಲೆಗೆ ಉದ್ಯೋಗ ಖಾತರಿ ಯೋಜನೆಗಾಗಿ 29.29 ಕೋಟಿ ರೂಪಾಯಿ ಬಜೆಟ್ ಮಂಜೂರಾಗಿದೆ ಎಂದು ಯೋಜನಾ ನಿರ್ದೇಶಕಿ ಸೀತಮ್ಮ ತಿಳಿಸಿದರು.
ವೃದ್ಧಾಪ್ಯ ವೇತನ: ವೃದ್ಧಾಪ್ಯ ವೇತನ, ವಿಧವಾ ವೇತನ ಸಹಿತ ಇತರ ಮಾಸಾಶನ ವಿಚಾರದಲ್ಲಿದ್ದ ಗೊಂದಲಗಳು ನಿವಾರಣೆಯಾಗಿದ್ದು, ಯಾರದಾದರೂ ಹೆಸರು ಬಿಟ್ಟುಹೋಗಿದ್ದರೆ ಮತ್ತೆ ಅವರು ಅರ್ಜಿ ಸಲ್ಲಿಸಿದರೆ ಅವರಿಗೆ ಮಾಸಾಶನ ದೊರಕಲಿದೆ ಎಂದು ಸಭೆಗೆ ತಿಳಿಸಲಾಯಿತು.
ಕೆಲವು ತಿಂಗಳ ಹಿಂದೆ ಈ ನಿಟ್ಟಿನಲ್ಲಿ ಉಂಟಾದ ಬಿಕ್ಕಟ್ಟನ್ನು ಸಂಸದರು ಕೇಳಿ ತಿಳಿದುಕೊಂಡರು. ಜಿಲ್ಲೆಯಲ್ಲಿ 62,722 ಮಂದಿ ವೃದ್ಧಾಪ್ಯ, ವಿಧವಾ ಮತ್ತಿತರ ವೇತನ ಪಡೆಯುತ್ತಿದ್ದು, ಹೊಸದಾಗಿ 7,182 ಮಂದಿ ಸೇರ್ಪಡೆಗೊಂಡಿದ್ದಾರೆ. ಸರ್ಕಾರದ ಮಾರ್ಗಸೂಚಿಗಳಂತೆ ಕೆಲವರ ಹೆಸರು ಕೈಬಿಟ್ಟಿದ್ದರೂ ಯಾರು ನಿಜವಾಗಿ ಈ ಮಾಸಾಶನಕ್ಕೆ ಅರ್ಹರೋ ಅವರಿಗೆ ಅದನ್ನು ನೀಡಲಾಗುವುದು, ಮತ್ತೆ ಅರ್ಜಿ ಸಲ್ಲಿಸಿದರೆ ಸಾಕು ಎಂದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸಭೆಗೆ ತಿಳಿಸಿದರು.
ಇಂದಿರಾ ಆವಾಸ್ ಯೋಜನೆಯಡಿಯಲ್ಲಿ ನಿರ್ಮಾಣವಾದ ಮನೆಗಳ ವಿವರ ಕೇಳಿದ ಸಂಸದರು, ಇನ್ನಷ್ಟು ತ್ವರಿತವಾಗಿ ಯೋಜನೆ ಪೂರ್ಣಗೊಳಿಸಲು ಸೂಚಿಸಿದರು.
ರಸ್ತೆ ದುರಸ್ತಿ: ಮೂಡುಬಿದಿರೆ ಸಮೀಪ ಬೆಳ್ಳೆಚ್ಚಾರು ಸೇತುವೆ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಉಳಿದಂತೆ ವಿವಿಧ ಕಡೆಗಳಲ್ಲಿ 27 ಕಿ.ಮೀ. ರಸ್ತೆಯನ್ನು 14 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು.
ಈಗಾಗಲೇ 14 ಕಿ.ಮೀ. ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಗಳನ್ನು ಮಳೆಗಾಲದ ನಂತರ ಕೊನೆಗೊಳಿಸುವುದಾಗಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ತಿಳಿಸಿದರು.
ನಂತೂರು-ಮೂಡುಬಿದಿರೆ ರಸ್ತೆಯ ಬದಿಗೆ ಹಾಕಿದ ಮಣ್ಣು ಕೊಚ್ಚಿಹೋಗಿ ವಾಹನ ಸಂಚಾರಕ್ಕೆ ತೊಂದರೆ ಆಗಿರುವುದನ್ನು ಜಾಗೃತ ಸಮಿತಿಯ ಸದಸ್ಯ ರಾಜೀವ್ ಶೆಟ್ಟಿ ಸಭೆಯ ಗಮನಕ್ಕೆ ತಂದರು.
ಪುತ್ತೂರು-ನಿಂತಿಕಲ್ ರಸ್ತೆಯ ಭಕ್ತಕೋಡಿ-ಪುಣ್ಚತ್ತಾರು ನಡುವೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಅದನ್ನು ದುರಸ್ತಿ ಮಾಡುವುದು ಯಾವಾಗ ಎಂದು ಇನ್ನೊಬ್ಬ ಸದಸ್ಯ ಕೃಷ್ಣ ನಾಯ್ಕ ಪ್ರಶ್ನಿಸಿದರು. ರಸ್ತೆ ಬದಿಯಲ್ಲಿ ಮಣ್ಣು ಹಾಕಿ ತೇಪೆ ಕಾರ್ಯ ನಡೆಸುವುದಕ್ಕೆ ನಿಯಮದಲ್ಲಿ ಅವಕಾಶ ಇಲ್ಲ, ಆದರೂ ಹೊಂಡಗಳನ್ನು ಮುಚ್ಚುವ ಕಾರ್ಯ ತಕ್ಷಣ ನಡೆಸಿ, ಮಳೆಗಾಲದ ಬಳಿಕ ರಸ್ತೆಯನ್ನು ಅಗಲಗೊಳಿಸುವ ಕಾರ್ಯ ಕೈಗೊಳ್ಳುವುದಾಗಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಭರವಸೆ ನೀಡಿದರು. ಅವರು ಇದೇ ಸಂದರ್ಭದಲ್ಲಿ ಗುತ್ತಿಗೆದಾರರಿಗೆ ಬಿಲ್ ಪಾವತಿ ವಿಳಂಬವಾಗುವುದರಿಂದ ಆಗುತ್ತಿರುವ ತೊಂದರೆಗಳನ್ನು ಸಭೆಯ ಗಮನಕ್ಕೆ ತಂದರು.
ಮಾಣಿ-ಸಂಪಾಜೆ ಹೆದ್ದಾರಿಯ ಬಾಕಿ ಉಳಿದ ಕಾಮಗಾರಿಯನ್ನು ಮಳೆಗಾಲದ ನಂತರ ಪುನರಾರಂಭಿಸುವುದಾಗಿ ಕೆಆರ್‌ಡಿಸಿಎಲ್ ಅಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಜಿ.ಪಂ.ಅಧ್ಯಕ್ಷೆ ಕೆ.ಟಿ.ಶೈಲಜಾ ಭಟ್, ಸಿಇಒ ಕೆ.ಎನ್.ವಿಜಯಪ್ರಕಾಶ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ದಯಾನಂದ, ಜಿ.ಪಂ.ಉಪಕಾರ್ಯದರ್ಶಿ ಶಿವರಾಮೇಗೌಡ, ಯೋಜನಾಧಿಕಾರಿ ಮೊಹಮ್ಮದ್ ನಜೀರ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.