ಮೂಡುಬಿದಿರೆ: ‘ಆಗಸ್ಟ್‌ನಲ್ಲಿ ಹಾಲೆಂಡ್ ಮತ್ತು ಸ್ಪೇನ್‌ಗೆ ಹಾಕಿ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲು ಭಾರತ ತಂಡದೊಂದಿಗೆ ಹೋಗುತ್ತಿದ್ದೇನೆ. ಮುಂದಿನ ಒಲಿಂಪಿಕ್ಸ್ ನಲ್ಲಿ ತಂಡ ಪದಕ ಗೆಲ್ಲುವ ಗುರಿ ಹೊಂದಿದೆ’ ಎಂದು ಭಾರತ ತಂಡದ ಪ್ರಮುಖ ಹಾಕಿ ಆಟಗಾರರಲ್ಲೊಬ್ಬರಾ ಗಿರುವ ಎಸ್.ವಿ ಸುನಿಲ್ ಹೇಳಿದರು.
ತಮ್ಮ ಹುಟ್ಟೂರಾದ ಕಾರ್ಕಳ ತಾಲ್ಲೂಕಿನ ಸಾಣೂರಿನಲ್ಲಿರುವ ತಮ್ಮ ಕುಟುಂಬದ ನಾಗಸನ್ನಿಧಿಗೆ ಭೇಟಿ ನೀಡುವ ನಿಮಿತ್ತ ಅವರು ಭಾನುವಾರ ಇಲ್ಲಿನ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು.
‘ಈ ಕ್ಷೇತ್ರಕ್ಕೆ ಮೊದಲ ಬಾರಿ ಭೇಟಿ ನೀಡಿದ್ದೇನೆ. ದೇವರ ದರ್ಶನ ಮನಸ್ಸಿಗೆ ಮುದ ನೀಡಿದೆ. ಮುಂದಿನ ಕ್ರೀಡಾ ಸಾಧನೆಗೆ ಇದು ಸ್ಫೂರ್ತಿ ನೀಡಲಿದೆ. ಮುಂದೆ ಪ್ರತಿ ವರ್ಷವೂ ಇಲ್ಲಿಗೆ ಭೇಟಿ ನೀಡುತ್ತೇನೆ ಎಂದರು.
ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿದ ಅವರು ನಿತ್ಯಪೂಜಾ ನಿಧಿ ಹಾಗೂ ಅನ್ನದಾನ ನಿಧಿಗೆ ದೇಣಿಗೆ ನೀಡಿದರು. ಕ್ಷೇತ್ರದ ಆಡಳಿತ ಮೊಕ್ತೇಸರ ಸುಂದರ ಜಿ. ಆಚಾರ್ಯ ಸುನಿಲ್ ಅವರನ್ನು ಕ್ಷೇತ್ರದ ಪರವಾಗಿ ಗೌರವಿಸಿದರು.
ಮೊಕ್ತೇಸರ ರಾದ ಜಯಕರ, ಪುರೋಹಿತ ಎಂ.ಕೆ. ಬಾಲಕೃಷ್ಣ ಆಚಾರ್ಯ, ಕಾಳಿಕಾಂಬಾ ಸೇವಾ ಸಮಿತಿ ಯ ಅಧ್ಯಕ್ಷ ಶಿವರಾಮ ಆಚಾರ್ಯ, ಕಾಳಿಕಾಂಬಾ ಮಹಿಳಾ ಸಮಿತಿಯ ಮಾಜಿ ಅಧ್ಯಕ್ಷೆ ಸುರೇಖಾ ಹರಿಶ್ಚಂದ್ರ ಆಚಾರ್ಯ ಮತ್ತಿತರರು ಇದ್ದರು.
ಮುಖ್ಯಾಂಶಗಳು
* ಹುಟ್ಟೂರು ಸಾಣೂರಿಗೆ ಸುನಿಲ್ ಭೇಟಿ
* ಕಾಲಿಗೆ ಗಾಯ– 3 ತಿಂಗಳ ವಿಶ್ರಾಂತಿ
* ಮುಂದಿನ ಒಲಿಂಪಿಕ್ಸ್‌ನತ್ತ ಸುನಿಲ್ ಕಣ್ಣು
ಆಟದ ಸಮಯದಲ್ಲಿ ಕಾಲಿಗೆ ಗಾಯವಾದ ಕಾರಣ ವೈದ್ಯರ ಸಲಹೆಯಂತೆ ವಿಶ್ರಾಂತಿಗಾಗಿ ಮೂರು ತಿಂಗಳ ರಜೆಯಲ್ಲಿ ಊರಿಗೆ ಬಂದಿದ್ದೇನೆ’
ಎಸ್.ವಿ ಸುನಿಲ್, ಹಾಕಿ ಆಟಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.