ಸುಬ್ರಹ್ಮಣ್ಯ: `ಗ್ರಾಮೀಣ ಜನರಿಗೂ ಶಿಕ್ಷಣದ ಅವಕಾಶ ದೊರೆಯಬೇಕೆಂದು ಸರ್ಕಾರ ಆರಂಭಿಸಿರುವ ಕನ್ನಡ ಮಾಧ್ಯಮ ಶಾಲೆಗಳು ಉಳಿಯಬೇಕು. ಈ ಬಗ್ಗೆ ಸಮಾಜವೂ ಚಿಂತಿಸಬೇಕು~ ಎಂದು ಪುತ್ತೂರು ತಾ.ಪಂ. ಅಧ್ಯಕ್ಷ ಶಂಭು ಭಟ್ ಹೇಳಿದರು.
ಬಿಳಿನೆಲೆ ಗ್ರಾಮದ ಪುತ್ತಿಲ-ಬೈಲಡ್ಕ ಹಿರಿಯ ಪ್ರಾಥಮಿಕ ಶಾಲೆಯ ರಜತಮಹೋತ್ಸವದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಗುರುವಾರ ಅವರು ಮಾತನಾಡಿದರು.
ವಿದ್ಯಾಭ್ಯಾಸದಿಂದ ವಂಚಿತರಾದವರನ್ನು ಶಾಲೆಗಳಿಗೆ ಕರೆತರುವ ಕೆಲಸವಾಗುತ್ತಿದೆ. ಸರ್ಕಾರಿ ಶಾಲೆಗಳ ಉಳಿವಿಗೆ ಸಮಾಜ ಇಂದು ಮುಂದಾಗಬೇಕು ಎಂದರು.
ಸಮಾರಂಭವನ್ನು ಪುತ್ತೂರು ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಭಾಸ್ಕರ ಗೌಡ ಇಚ್ಲಂಪಾಡಿ ಉದ್ಘಾಟಿಸಿ `ಸರ್ಕಾರಿ ಶಾಲೆಗಳಲ್ಲಿ ಇಂದು ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದರೂ, ಸರ್ವಶಿಕ್ಷಣ ಅಭಿಯಾನದ ಮೂಲಕ ಬಹಳಷ್ಟು ಮೂಲ ಸೌಕರ್ಯಗಳನ್ನು ನೀಡಲಾಗುತ್ತಿದೆ~ ಎಂದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಕೊರಗಪ್ಪ ನಾಯ್ಕ, ಪುತ್ತೂರು ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಮಾಮಚ್ಚನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಮಲ್ಲಾರ, ಬಿಳಿನೆಲೆ ಗ್ರಾ.ಪಂ. ಅಧ್ಯಕ್ಷ ಸುಧೀರಕುಮಾರ್ ಶೆಟ್ಟಿ, ತಾ.ಪಂ. ಸದಸ್ಯೆ ಸರೋಜಿನಿ ಜಯಪ್ರಕಾಶ್ ಇದ್ದರು. ಈ ಸಂದರ್ಭದಲ್ಲಿ ಶಾಲೆಗೆ ಸ್ಥಳದಾನ ನೀಡಿದ ದಾನಿಗಳು ಹಾಗೂ ರಜತಮಹೋತ್ಸವಕ್ಕೆ ದೇಣಿಗೆ ನೀಡಿದ ಮಹಾಪೋಷಕರನ್ನು ಗೌರವಿಸಲಾಯಿತು.
ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ಶಶಿಧರ ಬೈಲು, ಗೌರವಾಧ್ಯಕ್ಷ ಗಣಪಯ್ಯ ಗೌಡ ಪುತ್ತಿಲ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಧುಚಂದ್ರ, ಖಜಾಂಜಿ ಹಿರಿಯಣ್ಣ ಗೌಡ ಪುತ್ತಿಲ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಗುಡ್ಡಪ್ಪ ಗೌಡ ಅಮೈ, ಮುಖ್ಯ ಶಿಕ್ಷಕ ತುಕರಾಮ ಗೌಡ ಇದ್ದರು.
ಕಾರ್ಯಕ್ರಮದ ಬಳಿಕ ಅಂಗನವಾಡಿ ಮಕ್ಕಳಿಂದ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕತಿಕ ಕಾರ್ಯಕ್ರಮಗಳು ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.