ADVERTISEMENT

ಕಾಡಾನೆ ಹಿಂಡು ಬಿಟ್ಟ ಅಸ್ವಸ್ಥ ಮರಿಗೆ ಚಿಕಿತ್ಸೆ

ನಾಗರಹೊಳೆ ತಜ್ಞರಿಂದ ಮಾರ್ಗದರ್ಶನ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 11:04 IST
Last Updated 9 ಏಪ್ರಿಲ್ 2018, 11:04 IST

ಸುಳ್ಯ: ಇಲ್ಲಿಗೆ ಸಮೀಪ ಪಯಸ್ವಿನಿ ಹೊಳೆಯ ಬದಿಯಲ್ಲಿ ಮೂರು 3 ಮರಿ ಆನೆ ಸಹಿತ 8 ಕಾಡಾನೆಗಳ ಹಿಂಡು ಎರಡು ದಿನಗಳಿಂದ ಬೀಡು ಬಿಟ್ಟಿವೆ. ಈ ಪೈಕಿ ಒಂದು ಮರಿ ಅಸ್ವಸ್ಥಗೊಂಡಿದ್ದು, ಇದನ್ನು ಬಿಟ್ಟು ಉಳಿದ ಆನೆಗಳು ಕಾಡಿಗೆ ವಾಪಸಾಗಿವೆ.

ಪಟ್ಟಣದ ಸಮೀಪದ ಭಸ್ಮಡ್ಕ ಪಯ ಸ್ವಿನಿ ಹೊಳೆಬದಿಯಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡನ್ನು ಹಿಮ್ಮೆಟ್ಟಿಸುವಲ್ಲಿ ಅರಣ್ಯ ಇಲಾಖೆಯೊಂದಿಗೆ ಊರವರು ಹರಸಾಹಸ ಪಟ್ಟರು. ಈ ಸಂದರ್ಭ ಒಂದು ಮರಿ ಆನೆಗೆ ಅನಾರೋಗ್ಯ ಬಾಧಿಸಿರುವುದನ್ನು ಅರಣ್ಯ ಅಧಿಕಾ ರಿಗಳು ಪತ್ತೆ ಮಾಡಿದರು. ಎಷ್ಟೇ ಪ್ರಯತ್ನ ಮಾಡಿದರೂ ಕಾಡಾನೆಗಳು ಭಸ್ಮಡ್ಕ ಪ್ರದೇಶದಲ್ಲೇ ಇದ್ದವು. ಸುಳ್ಯ, ಪಂಜ ಮತ್ತು ಸುಬ್ರಹ್ಮಣ್ಯ ವಲಯಗಳ ಅರಣ್ಯ ಸಿಬ್ಬಂದಿ ಪ್ರಯುತ್ನದ ಫಲ ಶನಿವಾರ ರಾತ್ರಿ ಕಾಡಾನೆಗಳು ಅಸ್ವಸ್ಥ ಆನೆ ಮರಿಯನ್ನು ಅಲ್ಲೇ ಬಿಟ್ಟು ಮಂಡೆ ಕೋಲು ಕಾಡಿನ ಕಡೆಗೆ ತೆರಳಿವೆ ಎಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದರು.

ತುರ್ತು ಚಿಕಿತ್ಸೆ: ಆನೆ ಮರಿಗೆ ನಡೆಯ ಲಾಗದೇ ಇದ್ದಾಗ ಅನಿವಾರ್ಯವಾಗಿ ಹಿರಿಯ ಕಾಡಾನೆಗಳು ಬಿಟ್ಟು ಹೋಗಿವೆ. ನಿಶ್ಯಕ್ತಿಯಿಂದ ಆನೆ ಮರಿ ಬಳಲಿದೆ. ಇದಕ್ಕೆ ಸೂಕ್ತ ಚಿಕಿತ್ಸೆಯನ್ನು ಪಶುವೈದ್ಯಾಧಿಕಾರಿಗಳ ಮೂಲಕ ನೀಡಲಾಗುತ್ತಿದೆ. ಅದರೊಂದಿಗೆ ನಾಗರಹೊಳೆ ಮತ್ತು ಸಕ್ರೆಬೈಲು ಆನೆ ಶಿಬಿರದ ತಜ್ಞರನ್ನು ಸಂಪರ್ಕಿಸಿ ಅವರ ನಿರ್ದೇಶನದಂತೆ ಚಿಕಿತ್ಸೆ ನೀಡಲಾಗುತ್ತಿದೆ.

ADVERTISEMENT

‘ಗ್ಲುಕೋಸ್ ಮತ್ತು ಶಕ್ತಿ ನೀಡುವ ಔಷಧಿ ನೀಡಲಾಗಿದೆ. ಇದೀಗ ಆನೆ ಮರಿ ಚೇತರಿಸಿಕೊಳ್ಳುತ್ತಿದೆ. ಅದನ್ನು ಹಿಂಡಿನ ಜತೆ ಸೇರಿಸಬೇಕಾಗುತ್ತದೆ. ರಾತ್ರಿ ಹೊತ್ತಿಗೆ ಕಾಡಾನೆಗಳ ಹಿಂಡು ಮರಿಯನ್ನು ಹುಡುಕಿಕೊಂಡು ಬರುವ ಸಾಧ್ಯತೆ ಇದೆ. ಬಿಸಿಲ ಬೇಗೆಗೆ ನೀರು ಕುಡಿಯಲು ಹಿಂಡು ಬರುವ ಸಾಧ್ಯತೆ ಇದೆ. ಆಗ ಸೇರಿಕೊಳ್ಳಬಹುದು’ ಎಂದು ಅರಣ್ಯ ವಲಯಾಧಿಕಾರಿ ಮಂಜುನಾಥ ತಿಳಿಸಿದ್ದಾರೆ.

ಸುಳ್ಯ ವಲಯ ಅರಣ್ಯಾಧಿಕಾರಿ ಮಂಜುನಾಥ, ಪಂಜ ರೇಂಜರ್ ಪ್ರವೀಣ್ ಶೆಟ್ಟಿ, ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಸೇರಿದಂತೆ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಆನೆ ಮರಿಗೆ ಚಿಕಿತ್ಸೆ ನೀಡುವಲ್ಲಿ ಸಹಕಾರ ನೀಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.