ಕಾಸರಗೋಡು: ಪೆರ್ಲದಲ್ಲಿ ಇದೇ 30 ಮತ್ತು 31ರಂದು 6ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಸಿದ್ಧತೆ ಭರದಿಂದ ಸಾಗಿವೆ. ಕೇರಳ ಸರ್ಕಾರ ಮಲೆಯಾಳ ಕಡ್ಡಾಯ ಆದೇಶ ಹೊರಡಿಸಿದ ವಿಷಮ ಸನ್ನಿವೇಶದಲ್ಲಿ ನಡೆಯಲಿರುವ ಈ ಸಾಹಿತ್ಯ ಸಮ್ಮೇಳನಕ್ಕೆ ವಿಶೇಷ ಮಹತ್ವವನ್ನೇ ನೀಡಲಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.
ಕವಿ ಗೋಷ್ಠಿ ಇಲ್ಲ: ಕಾಸರಗೋಡಿನಲ್ಲಿ ಕನ್ನಡದ ಸಾಹಿತಿಗಳು ಗುರುತಿಸಿಕೊಂಡದ್ದೇ ಕವಿಗಳಾಗಿ. ಹಾಗಿದ್ದೂ ಸಮ್ಮೇಳನದಲ್ಲಿ ಕವಿಗೋಷ್ಠಿಯೇ ಇಲ್ಲ ಎಂಬ ಅಸಮಾಧಾನದ ನುಡಿಗಳು ಕೇಳಿಬರುತ್ತಿವೆ.
ಸಮ್ಮೇಳನದ ಸ್ವಾಗತ ಸಮಿತಿ ಸ್ಥಳೀಯ ನಲಂದಾ ಕಾಲೇಜು ಮತ್ತು ಉಪನ್ಯಾಸಕ-ವಿದ್ಯಾರ್ಥಿಗಳನ್ನು ಕಡೆಗಣಿಸಿದೆ. ಕಾಲೇಜಿನ ಕನ್ನಡ ವಿಭಾಗಕ್ಕೆ ಆಮಂತ್ರಣ ಪತ್ರಿಕೆಯನ್ನು ನೀಡುವ ಔದಾರ್ಯವನ್ನೂ ತೋರಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಉನ್ನತ ಶಿಕ್ಷಣದ ಬಾಗಿಲು ತೆರೆದ ವಿದ್ಯಾದಾನಿಗಳನ್ನು ಗೌರವಿಸಲು ಮರೆತಿದೆ.
ಶಿಕ್ಷಣ ಕ್ಷೇತ್ರ ಕಡೆಗಣಿಸಿ ಪರಿಷತ್ ಯಾವ ಸಾಧನೆ ಮಾಡಲು ಹೊರಟಿದೆ ಎನ್ನುವುದು ಅರ್ಥವಾಗುತ್ತಿಲ್ಲ ಎನ್ನುತ್ತಾರೆ ನಲಂದಾ ಕಾಲೇಜಿನ ಹಿಂದಿ ಉಪನ್ಯಾಸಕ ಉದಯರಾಜ ಅರಳಿತ್ತಾಯ. ಸಾಹಿತ್ಯ ಪರಿಷತ್ ಸದಸ್ಯತ್ವ ಹೊಂದಿರುವ ತಮಗೆ ಆಮಂತ್ರಣ ಪತ್ರಿಕೆಯನ್ನೇ ನೀಡಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಎಂಡೋಸಲ್ಫಾನ್ ಕುರಿತು ಮೊದಲು ಧ್ವನಿ ಎತ್ತಿದ ಡಾ. ಮೋಹನ್ ಕುಮಾರ್, ಶ್ರೀಪಡ್ರೆ ಅವರನ್ನು ಸನ್ಮಾನಿಸಬಹುದಿತ್ತು. ಎಂಡೋಸಲ್ಫಾನ್ ಹೋರಾಟ-ಸಾಹಿತ್ಯ ಕುರಿತು ವಿಚಾರಸಂಕಿರಣ ಏರ್ಪಡಿಸಬಹುದಿತ್ತು ಎಂದು ರಾಧಾಕೃಷ್ಣ ಕೆ.ಉಳಿಯತ್ತಡ್ಕ ಗಮನ ಸೆಳೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.