ಮಂಗಳೂರು: ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ನಗರದಲ್ಲಿ ನಿರ್ಮಿಸಿರುವ ಕಾಂಕ್ರೀಟ್ ರಸ್ತೆ ಕಾಮಗಾರಿಗಳಲ್ಲಿ ಗುರುತಿಸಿರುವ ಕೆಲವು ದೋಷಗಳನ್ನು ಸರಿಪಡಿಸಿದ ತಕ್ಷಣ, ಗುತ್ತಿಗೆದಾರರಿಗೆ ಕಾಮಗಾರಿಗಳ ಬಿಲ್ ಪಾವತಿಗೆ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಪಾಲೆಮಾರ್ ಪಾಲಿಕೆ ಶನಿವಾರ ಅಧಿಕಾರಿಗಳಿಗೆ ಸೂಚಿಸಿದರು.
ಕೆಲವು ಕಾಮಗಾರಿಗಳು ಕಳಪೆಯಾಗಿದ್ದು ಗುತ್ತಿಗೆದಾರರು ‘ಫಿನಿಷಿಂಗ್’ ಕೆಲಸ ಮಾಡಿಲ್ಲ. ಹೀಗಾಗಿ ಬಿಲ್‌ಗಳನ್ನು ಪಾವತಿ ಮಾಡುವುದಕ್ಕೆ ನನ್ನ ಸಹಮತವಿಲ್ಲ ಮಹಾಗರಪಾಲಿಕೆ ತಾಂತ್ರಿಕ ಸಲಹೆಗಾರ ಧರ್ಮರಾಜ್ ಶುಕ್ರವಾರ ಪಾಲಿಕೆ ಸಭಾಂಗಣದಲ್ಲಿ ಕಾಮಗಾರಿಗಳಿಗೆ ಸಂಬಂಧಿಸಿ ನಡೆದ ಪ್ರಗತಿ ಸಭೆಯಲ್ಲಿ ವಾದಿಸಿದ್ದರು. ಇದರಿಂದ ಸಲಹೆಗಾರ- ಗುತ್ತಿಗೆದಾರರ ನಡುವೆ ವಾಗ್ವಾದ ನಡೆದಿತ್ತು.
ಈ ಹಿನ್ನೆಲೆಯಲ್ಲಿ ಕೃಷ್ಣ ಪಾಲೆಮಾರ್ ಶನಿವಾರ ಬೆಳಿಗ್ಗೆ ‘ಕೆಲಸ ಸರಿಯಾಗಿಲ್ಲ ಎಂಬ ದೂರು ಕೇಳಿ ಬಂದ’ ನಗರದ 2-3 ಕಾಂಕ್ರಿಟ್ ರಸ್ತೆಗಳ ಪರಿಶೀಲನೆ ನಡೆಸಿದರು. ಕಾರ್ಯಪಾಲಕ ಎಂಜಿನಿಯರ್ ರಾಜಶೇಖರ್, ಸಲಹೆಗಾರ ಧರ್ಮರಾಜ್, ಕಿರಿಯ ಎಂಜಿನಿಯರ್‌ಗಳ ಜತೆ ಕೆಲಸ ಕೈಗೊಂಡ ಗುತ್ತಿಗೆದಾರರು ಇದ್ದರು. ಬಿಜೈ ಚರ್ಚ್ ರಸ್ತೆ, ಕದ್ರಿ ಕಂಬಳ ರಸ್ತೆ, ಕಂಕನಾಡಿ ರಸ್ತೆ ಪರಿಶೀಲನೆ ನಡೆಯಿತು.
ಪರೀಕ್ಷೆಯಾಗಿಲ್ಲ: ಬಿಜೈ ಚರ್ಚ್ ಬಳಿ ಕಾಂಕ್ರೀಟ್ ರಸ್ತೆಯಲ್ಲಿ ಬರುವ ‘ಗ್ಯಾಪ್’ಗಳನ್ನು ಸಿಲೆಂಟ್ ಮೂಲಕ ‘ಫಿಲ್’ ಮಾಡಿರಲಿಲ್ಲ. ಒಂದು ಕಡೆ ರಸ್ತೆ ಬದಿಯ ಮಣ್ಣು ಕಾಂಕ್ರೀಟ್ ರಸ್ತೆಗೆ ಬಂದಿತ್ತು. ಇನ್ನೊಂದು ಕಡೆ ಖಾಸಗಿ ಟೆಲಿಕಾಂ ಕಂಪನಿಯ ‘ಚೆಂಬರ್’ ಸ್ವಲ್ಪ ಕುಸಿದಿತ್ತು.
ಮ್ಯೂಸಿಯಂ ರಸ್ತೆಯಿಂದ ಕದ್ರಿ ಪಾರ್ಕ್‌ಗೆ ತಿರುವು ಪಡೆಯುವ (ಕದ್ರಿ ಕಂಬಳ ಕ್ರಾಸ್ ಸೇರುವ ಒಂದು ಮೂಲೆಯಲ್ಲಿ) ಪರಿಶೀಲನೆ ನಡೆಸಲಾಯಿತು. ಅಲ್ಲಿ ರಸ್ತೆಯ ಜಲ್ಲಿ ಕೆಲಮಟ್ಟಿಗೆ ಕಾಣುತ್ತಿದ್ದವು. ‘ಕೋರ್ ಟೆಸ್ಟ್’ ಮಾಡಿಸಿಲ್ಲ. ಪರೀಕ್ಷಾ ವರದಿ ಕೊಟ್ಟ ನಂತರ ಹಾಗೂ ಚಿಲ್ಲರೆ ಕೆಲಸ ಮುಗಿಸಿದ ನಂತರ ಬಿಲ್ ಪಾವತಿಗೆ ಅಭ್ಯಂ ತರ ಇಲ್ಲ ಎಂದು ಸಲಹೆಗಾರರು ಹೇಳಿದರು.
‘ಏನೇನು ಕೆಲಸವಾಗಬೇಕೊ, ಅದನ್ನು 4-5 ದಿನಗಳಲ್ಲಿ ಮಾಡುತ್ತೇವೆ’ ಎಂದು ಗುತ್ತಿಗೆದಾರರು ಭರವಸೆ ನೀಡಿದರು.
ಕಾಂಕ್ರೀಟ್ ರಸ್ತೆ ಬಿರುಕು: ಕದ್ರಿ ಕಂಬಳ ರಸ್ತೆಯಲ್ಲೂ ಪರಿಶೀಲನೆ ನಡೆಯಿತು. ಅಲ್ಲೂ ಕೆಲವು ದೋಷಗಳು ಕಾಣಿಸಿದ್ದವು. ಒಂದೆರಡು ಕಡೆ ಬಿರುಕುಗಳು ಎದ್ದಿದ್ದು ಗಮನಕ್ಕೆ ಬಂತು. ಪರಿಪೂರ್ಣವಾಗಿ ಕೆಲಸ ಮಾಡಿದರೆ, ಕಾಮಗಾರಿ ಪೂರೈಸಿದ ವರದಿ ನೀಡಲು ನನ್ನದೇನೂ ಅಭ್ಯಂತರವಿಲ್ಲ. ಬಿಲ್ ಪಾವತಿಗೆ ತಡವೂ ಆಗುವುದಿಲ್ಲ ಎಂದು ಧರ್ಮರಾಜ್ ಹೇಳಿದರು.
‘ಮುಂದಿನ ಶನಿವಾರದೊಳಗೆ ನಿಮ್ಮ ಚೆಕ್ ಸಿದ್ಧವಿರುತ್ತದೆ. ಆದರೆ ಸಲಹೆಗಾರರು ಏನೇನು ಸೂಚಿಸಿದ್ದಾರೆಯೊ, ಅವುಗಳನ್ನು ಪೂರೈಸಬೇಕು. ನಂತರ ಹಣ ಪಡೆಯುವುಕ್ಕೆ ಯಾವುದೇ ಅಡ್ಡಿಯಿಲ್ಲ’ ಎಂದು ಸಚಿವರು ಸೂಚಿಸಿದರು.
ಪಾಲಿಕೆ ಸದಸ್ಯ ರಂಗನಾಥ ಕಿಣಿ, ಎಂಜಿನಿಯರ್‌ಗಳಾದ ಲಕ್ಷ್ಮಣ ಪೂಜಾರಿ, ಗಣಪತಿ, ಅರುಣ್ ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.