ADVERTISEMENT

ಕೊಂಕಣಿ ಭಾಷೆಗೆ ಗೌರವ ತಂದ ಚಿನ್ನಾ: ಉಮಾಶ್ರೀ ಶ್ಲಾಘನೆ

`ಉಜ್ವಾಡು'ಗೆ ಪ್ರಪ್ರಥಮ ರಾಜ್ಯಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2013, 9:41 IST
Last Updated 3 ಏಪ್ರಿಲ್ 2013, 9:41 IST

ಕಾಸರಗೋಡು: ಕೊಂಕಣಿ ಚಿತ್ರೋದ್ಯಮದಲ್ಲಿ ಪ್ರಪ್ರಥಮ ರಾಜ್ಯಪ್ರಶಸ್ತಿ ಗಳಿಸುವ ಮೂಲಕ ಕಾಸರಗೋಡು ಚಿನ್ನಾ `ಉಜ್ವಾಡು' ಚಿತ್ರದ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ. ಇದು ಅಭಿಮಾನದ ವಿಷಯವಾಗಿದೆ ಎಂದು ಚಿತ್ರ ನಟಿ ಉಮಾಶ್ರೀ ಶ್ಲಾಘಿಸಿದರು.

`ಉಜ್ವಾಡು' ಚಿತ್ರದಲ್ಲಿ ನಟಿಸಿದ್ದ ಅವರು ನಿರ್ದೇಶಕ ಕಾಸರಗೋಡು ಚಿನ್ನಾ ಅವರ ನಿವಾಸದಲ್ಲಿ ಮಂಗಳವಾರ ಅಭಿನಂದಿಸಿದ ಬಳಿಕ ಅತಿಥಿಮಂದಿರದಲ್ಲಿ ಪತ್ರಕರ್ತರ ಜತೆ ಮಾತನಾಡಿದರು.

ಒಂದು ಸಮುದಾಯದೊಳಗಿನ ಚಿತ್ರಣವನ್ನು ಬಿಂಬಿಸುವ ನಿಟ್ಟಿನಲ್ಲಿ ಸಾಮಾಜಿಕ, ಧಾರ್ಮಿಕ, ಆರ್ಥಿಕ ಮತ್ತು ಕೌಟುಂಬಿಕ ಆಯಾಮಗಳ ವ್ಯವಸ್ಥೆ ಉಜ್ವಾಡು ಚಿತ್ರದಲ್ಲಿ ಪರಿಣಾಮಕಾರಿಯಾಗಿ ಮೂಡಿಬಂದಿದೆ.

ನಿರ್ಲಕ್ಷಿತ ಭಾಷೆಗಳತ್ತ ಚಿತ್ತ: ಕೊಂಕಣಿ ಭಾಷೆಯ ಚಿತ್ರ ಸೀಮಿತವಾಗಿದ್ದರೂ ಕರ್ನಾಟಕದೊಳಗಿರುವ ಲಂಬಾಣಿ ಮೊದಲಾದ ಹಲವಾರು ನಿರ್ಲಕ್ಷಿತ ಭಾಷೆ-ಉಪಭಾಷೆ-ಅರೆಭಾಷೆಗಳಲ್ಲಿಯೂ ಸಿನಿಮಾ ಮಾಡಬಹುದು ಎಂಬ ವಿಚಾರದ ಕಡೆಗೆ ಗಮನಹರಿಸುವಂತೆ ಮಾಡಿದ್ದಾರೆ.

ಕನ್ನಡ ಸಹಿತ ತುಳು, ತಮಿಳು, ತೆಲುಗು, ಹಿಂದಿ ಮತ್ತು ಕೊಂಕಣಿ ಭಾಷೆಯಲ್ಲಿ ನಟಿಸಿದ ಬಗ್ಗೆ ಹೆಮ್ಮೆ ಇದೆ. ಸಿನಿಮಾದಲ್ಲಿ ಹಾಸ್ಯ ಮತ್ತು ಗಂಭೀರ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಬಗ್ಗೆ ತೃಪ್ತಿ, ಖುಷಿ ಇದೆ. 1994ರಲ್ಲಿ ಪುಟ್ನಂಜ ಚಿತ್ರದ ಬಳಿಕ ಗಂಭೀರ ಪಾತ್ರಕ್ಕೂ ಸೈ ಎಂಬ ಹೆಗ್ಗಳಿಕೆಗೆ ಪಾತ್ರಳಾದೆ ಎಂದರು. ಅದರ ಬಳಿಕ ಗಂಭೀರ ಪಾತ್ರಗಳನ್ನು ಮಾಡಲು ಅವಕಾಶಗಳು ಒದಗಿಬಂತು ಎಂದು ಸ್ಮರಿಸಿದರು.

ಐದು ಬಾರಿ ಅತ್ಯುತ್ತಮ ನಟಿಯಾಗಿ ರಾಜ್ಯ ಪ್ರಶಸ್ತಿ ಮತ್ತು 400ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ ಉಮಾಶ್ರೀ ಓರ್ವ ಕಲಾವಿದೆಯಾಗಿ ಅತ್ಯಂತ ಸರಳ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿದ್ದಾರೆ. ರಂಗಭೂಮಿಯಲ್ಲಿ ಪಳಗಿದ್ದರಿಂದಲೇ ಈ ಮನೋಭಾವ ಮೂಡಿಬಂದಿದೆ. ಇದರಿಂದಲೇ ಅವರಿಗೆ ಅಪರಿಚಿತವಾದ ಕೊಂಕಣಿ ಭಾಷೆಯಲ್ಲಿ ಹಮ್ಮುಬಿಮ್ಮು ಇಲ್ಲದೆ ನಟಿಸಲು ಸಾಧ್ಯವಾಗಿದೆ ಎಂದು `ಉಜ್ವಾಡು' ಚಿತ್ರದ ನಿರ್ದೇಶಕ  ಕಾಸರಗೋಡು ಚಿನ್ನಾ ಹೇಳಿದರು.

`ಉಜ್ವಾಡು' ನನ್ನ ಆತ್ಮೀಯ ಗೆಳೆಯರ ತಂಡದಿಂದ ಮೈವೆತ್ತ ಕನಸು. ಗೆಳೆತನದಿಂದ ಕಡಿಮೆ ಬಜೆಟ್ ಮತ್ತು ಯಶಸ್ವಿ ಚಿತ್ರ ನಿರ್ಮಿಸಬಹುದು ಎಂಬುದಕ್ಕೆ `ಉಜ್ವಾಡು' ಅತ್ಯುತ್ತಮ ನಿದರ್ಶನವಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.