ADVERTISEMENT

ಕೋಟ್ಯಂತರ ಮೌಲ್ಯದ ದಾಖಲೆ ಪತ್ರ ವಶ

ಕುಂದಾಪುರ: ಮೀನುಗಾರಿಕಾ ಇಲಾಖೆಯ ಎಂಜಿನಿಯರ್‌ ಮನೆ ಮೇಲೆ ಲೋಕಾಯುಕ್ತ ದಾಳಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2013, 4:47 IST
Last Updated 21 ಡಿಸೆಂಬರ್ 2013, 4:47 IST

ಕುಂದಾಪುರ: ಕುಂದಾಪುರ ತಾಲ್ಲೂಕಿನ ಕೋಟೇಶ್ವರ ಸಮೀಪದ ಬೀಜಾಡಿ–ಕೋಡಿ ರಸ್ತೆಯಲ್ಲಿನ ಮೀನುಗಾರಿಕಾ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ನಾರಾಯಣ ಖಾರ್ವಿ ಅವರ ಮನೆಗೆ ಶುಕ್ರವಾರ ಮುಂಜಾನೆ ದಾಳಿ ನಡೆಸಿದ ಮಂಗಳೂರಿನ ಲೋಕಾಯುಕ್ತ ಎಸ್‌.ಪಿ ವೇದಮೂರ್ತಿ ಅವರ ನೇತೃತ್ವದ ತಂಡ ಚಿನ್ನ, ಬೆಳ್ಳಿ, ನಗದು ಹಾಗೂ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದೆ.

ಉಡುಪಿ ಜಿಲ್ಲೆಯ ಮೀನುಗಾರಿಕಾ ಇಲಾಖೆಯಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಅವರು ಸಂಪಾದನೆಗಿಂತ ಹೆಚ್ಚಿನ ಆಸ್ತಿಯನ್ನು ಆಕ್ರಮವಾಗಿ ಸಂಪಾದಿಸಿದ್ದಾರೆ ಎನ್ನುವ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಗುರುವಾರ ಪ್ರಕರಣ ದಾಖಲಿಸಿದ್ದ ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ಬೆಳಿಗ್ಗೆ 6 ಗಂಟೆಗೆ ಬೀಜಾಡಿ–ಕೋಡಿ ರಸ್ತೆಯಲ್ಲಿನ ಅವರ ಮನೆಗೆ ದಾಳಿ ನಡೆಸಿದ್ದಾರೆ.

ಉಡುಪಿ ಜಿಲ್ಲಾ ಪ್ರಭಾರ ಲೋಕಾಯುಕ್ತ ಡಿವೈಎಸ್‌ಪಿ ಉಮೇಶ್‌ ಶೇಟ್‌, ಇನ್ಸ್‌ಪೆಕ್ಟರ್‌ಗಳಾದ ಮೋಹನ್‌ ಕೊಟ್ಟಾರಿ ಹಾಗೂ ದಿಲೀಪ್‌ಕುಮಾರ ಅವರ ನೇತೃತ್ವದಲ್ಲಿ ದಾಳಿ ಸಂಘಟಿಸಿದ್ದ ಲೋಕಾಯುಕ್ತ ಪೊಲೀಸರು ದಾಳಿಯ ವೇಳೆ ₨1.8 ಲಕ್ಷ, 400 ಗ್ರಾಂ ಚಿನ್ನ, 500 ಗ್ರಾಂ ಬೆಳ್ಳಿ ಸೇರಿದಂತೆ ಬೆಲೆ ಬಾಳುವ ಆಸ್ತಿಗಳ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪುತ್ರನ ಹೆಸರಿನಲ್ಲಿರುವ ಸ್ಕೋಡಾ ಕಾರು ಹಾಗೂ 3 ಪರ್ಸಿನ್‌ ಬೋಟ್‌ನ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿರುವ ತನಿಖಾ ತಂಡ ರಾತ್ರಿ 8 ಗಂಟೆಯ ವರೆಗೂ ತಮ್ಮ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ. ವಶಕ್ಕೆ ಪಡೆದುಕೊಂಡಿರುವ ನಗದು, ವಸ್ತು ಹಾಗೂ ಆಸ್ತಿ ದಾಖಲೆಗಳ ನಿಖರ ಮೌಲ್ಯ ಇನ್ನೂ ಅಧಿಕೃತವಾಗಿ ತಿಳಿದು ಬಂದಿಲ್ಲ. ಒಂದು ಮೂಲಗಳ ಪ್ರಕಾರ ಆದಾಯಕ್ಕಿಂತ ಶೇ.140 ರಷ್ಟು ಹೆಚ್ಚು ಆದಾಯ ಪತ್ತೆಯಾಗಿದೆ ಎನ್ನಲಾಗುತ್ತಿದೆ.

ನಂದನವನ, ಉಪ್ಪುಂದ ಹಾಗೂ ಕಾರವಾರಗಳಲ್ಲಿ ಇರುವ ಸೈಟ್‌ಗಳ ಬಗ್ಗೆಯೂ ಮಾಹಿತಿ ದೊರಕಿದ್ದು, ವಿವರಗಳನ್ನು ಸಂಗ್ರಹಿಸಲಾಗುತ್ತಿದೆ. ಉಡುಪಿಯಲ್ಲಿನ ಕಚೇರಿಗೂ ದಾಳಿ ನಡೆಸಿ ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ದಾಳಿಯ ವೇಳೆ ನಾರಾಯಣ ಖಾರ್ವಿ ಇಲಾಖಾ ಕಾರ್ಯ ನಿಮಿತ್ತ ಬೆಂಗಳೂರಿಗೆ ತೆರಳಿದ್ದು, ಪತ್ನಿ ಹಾಗೂ ಕುಟುಂಬಿಕರು ಮನೆಯಲ್ಲಿ ಇದ್ದರು.

ನಿವೃತ್ತಿಗೆ ಇನ್ನೂ 1 ತಿಂಗಳು: ಕಳೆದ 33 ವರ್ಷಗಳಿಂದ ಬಂದರು ಹಾಗೂ ಮೀನುಗಾರಿಕಾ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಎನ್‌.ಎಂ ಖಾರ್ವಿ ಇನ್ನೂ 1 ತಿಂಗಳಲ್ಲಿ ಇಲಾಖಾ ಸೇವೆಯಿಂದ ನಿವೃತ್ತಿಯಾಗಲಿದ್ದರು ಎಂದು ಮೂಲಗಳು ತಿಳಿಸಿವೆ.

ಉಡುಪಿ ಜಿಲ್ಲಾ ಲೋಕಾಯುಕ್ತ ಪೊಲೀಸರಾದ ಸುದರ್ಶನ, ಶರತ್‌, ನಾಗೇಶ್‌ ಉಡುಪ, ಶಿವರಾಯ, ಸಂತೋಷ, ಶ್ರೀಧರ, ದಿವಾಕರ ಶರ್ಮಾ, ರಘುರಾಮ, ಆಶೋಕ, ದಿನೇಶ್‌, ರಿಯಾಜ್‌ ಹಾಗೂ ಸತ್ಯವತಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.