ADVERTISEMENT

ಖಾಸಗಿ ದೇಣಿಗೆಯಲ್ಲಿ ದುರಸ್ತಿ ಭಾಗ್ಯ

ನಾಗರಾಜ ಶೆಟ್ಟಿಗಾರ್
Published 11 ಜುಲೈ 2012, 5:05 IST
Last Updated 11 ಜುಲೈ 2012, 5:05 IST

ಸುರತ್ಕಲ್: ಸುರತ್ಕಲ್ ಹೋಬಳಿ ವೇಗವಾಗಿ ಬೆಳೆಯುತ್ತಿದೆ. ಹಣಕಾಸು ಕ್ರೋಡೀಕರಣ ಕೇಂದ್ರವಾಗಿ ಗಮನ ಸೆಳೆಯುತ್ತಿರುವ ಸುರತ್ಕಲ್ ಹೋಬಳಿಯ ಕಂದಾಯ ಕಚೇರಿ ಮಾತ್ರ ಇನ್ನೂ ಸುಸಜ್ಜಿತ ಕಟ್ಟಡವನ್ನು ಪಡೆಯುವ ಭಾಗ್ಯದಿಂದ ವಂಚಿತವಾಗಿದೆ. ಹಲವು ವರ್ಷಗಳಿಂದ ಸೋರುತ್ತಿದ್ದ ಕಂದಾಯ ಕಚೇರಿ ಈ ಬಾರಿ ದುರಸ್ತಿ ಭಾಗ್ಯ ಮಾತ್ರ ಕಂಡಿದೆ. ಅದೂ ಸರ್ಕಾರಿ ಅನುದಾನದಿಂದಲ್ಲ, ಖಾಸಗಿ ಕಂಪೆನಿಯ ದೇಣಿಗೆಯಲ್ಲಿ!

ಸುರತ್ಕಲ್ ಮಾರುಕಟ್ಟೆಯ ಪಕ್ಕದಲ್ಲಿ ವಿಸ್ತಾರವಾದ ನಿವೇಶನದಲ್ಲಿ ಕಂದಾಯ ಅಧಿಕಾರಿಯ ಕಚೇರಿಐಯಿದೆ. ಸುರತ್ಕಲ್ ಗ್ರಾಮಕರಣಿಕರ ಕಚೇರಿಯೂ ಈ ಕಟ್ಟಡದಲ್ಲೇ ಇದೆ. ಪಕ್ಕದಲ್ಲಿರುವ ರೈತ ಸಂಪರ್ಕ ಕೇಂದ್ರ ಹಲವು ದಿನಗಳ ಬೇಡಿಕೆಯ ಫಲವಾಗಿ ಹೊಸ ಕಟ್ಟಡವನ್ನು ಪಡೆದರೂ, ಹಣಕಾಸು ಕೇಂದ್ರವಾಗಿರುವ ಕಂದಾಯ ಕಚೇರಿ ಮಾತ್ರ ಹಳೆಯ ಕಟ್ಟಡದಲ್ಲೇ ಮುಂದುವರಿಯುವ ಅನಿವಾರ್ಯತೆ ಇದೆ.

ಜನಸಂಪರ್ಕ ಸಭೆಗಳಲ್ಲಿ ಹಲವು ಭಾರಿ ಈ ಕಟ್ಟಡದ ಬಗ್ಗೆ ಪ್ರಸ್ತಾವವಾಗಿದ್ದರೂ ಸರ್ಕಾರಿ ಖಜಾನೆಯಲ್ಲಿ ಮಾತ್ರ ಕಟ್ಟಡ ನಿರ್ಮಾಣಕ್ಕೆ ಹಣವಿಲ್ಲವಂತೆ. ಆದ್ದರಿಂದ ಜಿಲ್ಲಾಡಳಿತ ಎಂಆರ್‌ಪಿಎಲ್ ಕಂಪೆನಿಯ ನೆರವು ಪಡೆದು ರಿಪೇರಿ ಕೆಲಸಕ್ಕೆ ಕೈಹಾಕಿದೆ.

 ಎಂಆರ್‌ಪಿಎಲ್ ರೂ. 6ಲಕ್ಷ 20 ಸಾವಿರ ಅನುದಾನವನ್ನು ಕಂದಾಯ ಕಚೇರಿಯ ಕಟ್ಟಡ ರಿಪೇರಿಗೆ ನೀಡಿದೆ. ಇಲ್ಲಿನ ವಹಿವಾಟುಗಳನ್ನು ತಾತ್ಕಾಲಿಕವಾಗಿ ಪಕ್ಕದ ರೈತಸಂಪರ್ಕ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಕಟ್ಟಡದ ರಿಪೇರಿ ಜವಾಬ್ದಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದೆ. ನಿರ್ಮಿತಿ ಕೇಂದ್ರ ಆಮೆಗತಿಯಲ್ಲಿ ಕೆಲಸ ನಿರ್ವಹಿಸುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ.

 ಈಗಿರುವ ಕಟ್ಟಡವನ್ನು ಎತ್ತರಿಸಲಾಗಿದೆ. ಕೆಲವಡೆಗೆ ಹಳೆಯ ಪಕ್ಕಾಸುಗಳನ್ನು ಬಳಸಲಾಗಿದೆ. ಕಟ್ಟಡದ ಮುಂಭಾಗಕ್ಕೆ ಹೊಸ ಹೆಂಚನ್ನು ಹಾಕಲಾಗಿದ್ದರೆ ಹಿಂಭಾಗದಲ್ಲಿ ಹಳೆಯ ಹೆಂಚನ್ನೇ ಅಳವಡಿಸಲಾಗಿದೆ.

ಕೆಡವಲಾದ ಆವರಣ ಗೋಡೆಯನ್ನು ಮರುನಿರ್ಮಿಸಲಾಗಿದ್ದು, ಕಾಮಗಾರಿಯಲ್ಲಿ ಕಂಪೆನಿ ನೀಡಿರುವ ಅನುದಾನ ಸಮರ್ಪಕವಾಗಿ ಬಳಕೆಯಾಗಿಲ್ಲ ಎಂದು ರೈತ ಮುಖಂಡ ರಾಮಯ್ಯ ಪೂಜಾರಿ ಅನುಮಾನ ವ್ಯಕ್ತಪಡಿಸಿದ್ದಾರೆ.

 ವಿಸ್ತಾರವಾದ ನಿವೇಶನ ಇರುವುದರಿಂದ ಸುಸಜ್ಜಿತ ಕಟ್ಟಡ ನಿರ್ಮಿಸಬಹುದು. ಕಂದಾಯ ಇಲಾಖೆಗೆ ಸಂಬಂಧ ಪಟ್ಟ ಇತರ ಕಚೇರಿಗಳನ್ನೂ ಇಲ್ಲಿಯೇ ಕಾರ್ಯಾಚರಿಸುವಂತೆ ಮಾಡಬಹುದು. ಮಂಗಳೂರಿನಲ್ಲಿ ಆಗುವ ಸರ್ಕಾರಿ ಕೆಲಸವನ್ನು ಸುರತ್ಕಲ್ ಜನತೆ ಇಲ್ಲಿಂದಲೇ ಮಾಡುವಂತೆ ಯೋಜನೆ ರೂಪಿಸಬಹುದು.

ಸಭೆಗಳನ್ನು ನಡೆಸಲು ಸುಸಜ್ಜಿತ ಸಭಾಂಗಣ ನಿರ್ಮಿಸಬಹುದು. ಆದರೆ ಜಿಲ್ಲಾಡಳಿತ ಈ ಬಗ್ಗೆ ಇಚ್ಛಾಶಕ್ತಿ ಹೊಂದಿಲ್ಲ. ಕಂದಾಯ ಇಲಾಖೆಯ ಕಟ್ಟಡಕ್ಕೇ ಹಣಕಾಸು ನೆರವು ನೀಡಲು ಹಿಂದೇಟು ಹಾಕುತ್ತಿದೆ. ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರವೂ ನೆರವು ನೀಡಿದಲ್ಲಿ ಉತ್ತಮ ಸೌಲಭ್ಯಗಳ  ಸುಸಜ್ಜಿತ ಕಟ್ಟಡ ನಿರ್ಮಿಸಬಹುದು ಎನ್ನುತ್ತಾರೆ ರಾಮಯ್ಯ ಪೂಜಾರಿ.

ನೆಮ್ಮದಿ ಕೇಂದ್ರ ಕಂದಾಯ ಕಚೇರಿಗೆ: ದುರಸ್ಥಿಯಾಗುತ್ತಿರುವ ಕಂದಾಯ ಕಚೇರಿಗೆ ತಾಗಿಕೊಂಡೇ ನೆಮ್ಮದಿ ಕೇಂದ್ರಕ್ಕೆ ಕೊಠಡಿಯೊಂದನ್ನು ನಿರ್ಮಿಸಲಾಗುತ್ತಿದೆ. ನೆಮ್ಮದಿ ಕೇಂದ್ರವಿರುವ ಈಗಿರುವ ಪ್ರದೇಶ ಇಕ್ಕಟ್ಟಾಗಿದ್ದು ಸ್ಥಳಾವಕಾಶದ ಕೊರತೆಯಿದೆ.
 
ನೆಮ್ಮದಿ ಕೇಂದ್ರ ಕಂದಾಯ ಕಚೇರಿಗೆ ಸ್ಥಳಾಂತರವಾಗುವುದರಿಂದ ಸಾರ್ವಜನಿಕರಿಗೆ ಲಾಭವಾಗಲಿದೆ. ಆದರೆ ಕಾಮಗಾರಿ ಮಾತ್ರ ಸಮರ್ಪಕವಾಗಿಲ್ಲ ಎಂದು ರಾಮಯ್ಯ ಪೂಜಾರಿ ದೂರಿದ್ದಾರೆ.

3 ಲಕ್ಷದಲ್ಲಿ ಆರ್‌ಸಿಸಿ ಹಾಕಬಹುದು:  `ಕಟ್ಟಡ ದುರಸ್ತಿ ಕುರಿತಂತೆ ಖಾಸಗಿ ಎಂಜಿನಿಯರ್ ಒಬ್ಬರಲ್ಲಿ ವಿಚಾರಿಸಿದಾಗ ಈಗಿರುವ ಕಟ್ಟಡಕ್ಕೆ ರೂ. 3 ಲಕ್ಷ ವೆಚ್ಚದಲ್ಲಿ ಆರ್‌ಸಿಸಿ ಛಾವಣಿ ಹಾಕಿಸಬಹುದು ಎಂದು ವಿವರ ನೀಡಿದ್ದಾರೆ~ ಎನ್ನುವ ರಾಮಯ್ಯ ಪೂಜಾರಿ, `ನಿರ್ಮಿತಿ ಕೇಂದ್ರ ಹಳೆಯ ಮತ್ತು ಹೊಸ ಹೆಂಚುಗಳನ್ನೇ ಕಟ್ಟಡಕ್ಕೆ ಅಳವಡಿಸಿರುವುದು ಕಾಮಗಾರಿಯಲ್ಲಿ ನಿರ್ಮಿತಿ ಕೇಂದ್ರಕ್ಕಿರುವ ಮುತುವರ್ಜಿ ಏನು? ಎಂಬುದನ್ನು ತೋರಿಸುತ್ತದೆ~ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.