ADVERTISEMENT

ಖಾಸಗಿ ಬ್ಯಾಂಕ್‌ಗಳ ಅನುಕರಣೆ ಅಪಾಯ

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಪ್ರೊ.ಪ್ರಭಾತ್ ಪಟ್ನಾಯಕ್ ಸಲಹೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2016, 5:47 IST
Last Updated 25 ಜನವರಿ 2016, 5:47 IST
ಮಂಗಳೂರಿನಲ್ಲಿ ಭಾನುವಾರ ನಡೆದ ಕಾರ್ಪೋರೇಷನ್‌ ಬ್ಯಾಂಕ್‌ ಅಧಿಕಾರಿಗಳ ಸಂಘದ 20ನೇ ಅಖಿಲ ಭಾರತ ಸಮ್ಮೇಳನ ಉದ್ಘಾಟಿಸಿ ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಪ್ರಭಾತ್ ಪಟ್ನಾಯಕ್‌ ಮಾತನಾಡಿದರು.   ಪ್ರಜಾವಾಣಿ ಚಿತ್ರ
ಮಂಗಳೂರಿನಲ್ಲಿ ಭಾನುವಾರ ನಡೆದ ಕಾರ್ಪೋರೇಷನ್‌ ಬ್ಯಾಂಕ್‌ ಅಧಿಕಾರಿಗಳ ಸಂಘದ 20ನೇ ಅಖಿಲ ಭಾರತ ಸಮ್ಮೇಳನ ಉದ್ಘಾಟಿಸಿ ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಪ್ರಭಾತ್ ಪಟ್ನಾಯಕ್‌ ಮಾತನಾಡಿದರು. ಪ್ರಜಾವಾಣಿ ಚಿತ್ರ   

ಮಂಗಳೂರು: ಯಾವುದೇ ರೀತಿಯ ಸಾಮಾಜಿಕ ಹೊಣೆಗಾರಿಕೆಯನ್ನು ಹೊಂದಿರದ ಖಾಸಗಿ ಬ್ಯಾಂಕ್‌ಗಳ ಕಾರ್ಯವೈಖರಿಯನ್ನು ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಅನುಕರಣೆ ಮಾಡಬಾರದು ಎಂದು ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲ ಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಪ್ರಭಾತ್ ಪಟ್ನಾಯಕ್‌ ಸಲಹೆ ನೀಡಿದರು.

ನಗರದ ಟಿ.ಎಂ.ಎ. ಪೈ ಸಭಾಂಗಣ ದಲ್ಲಿ ಭಾನುವಾರ ನಡೆದ ಕಾರ್ಪೋ ರೇಷನ್‌ ಬ್ಯಾಂಕ್‌ ಅಧಿಕಾರಿಗಳ ಸಂಘದ 20ನೇ ಅಖಿಲ ಭಾರತ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ‘ಖಾಸಗಿ ಬ್ಯಾಂಕ್‌ಗಳ ಮಾದರಿಯನ್ನು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳೂ ಅನುಸರಿಸಿದರೆ ದೇಶದ ಆರ್ಥಿಕತೆ ಅಪಾಯಕ್ಕೆ ಸಿಲುಕುತ್ತದೆ. ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು ಖಾಸಗೀಕ ರಣದ ದಾಳಿಯಿಂದ ರಕ್ಷಿಸಿಕೊಳ್ಳ ಬೇಕಾದ ಸವಾಲು ದೇಶದ ಜನತೆಯ ಮುಂದಿದೆ’ ಎಂದರು.

ಖಾಸಗಿ ಬ್ಯಾಂಕ್‌ಗಳ ಪ್ರಾಬಲ್ಯ ಹೊಂದಿರುವ ಅಮೆರಿಕದಂತಹ ದೇಶ ಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಆರ್ಥಿಕ ಹಿಂಜರಿಕೆಯಿಂದ ಆಗಿರುವ ಅನಾ ಹುತಗಳು ಭಾರತದಂತಹ ರಾಷ್ಟ್ರಗಳಿಗೆ ಪಾಠವಾಗಬೇಕಿದೆ. ಖಾಸಗಿ ಬ್ಯಾಂಕ್‌ ಗಳನ್ನು ಸಂಕಷ್ಟದಿಂದ ಪಾರು ಮಾಡಲು 13 ಲಕ್ಷ ಕೋಟಿ ಡಾಲರ್‌ಗಳ ನೆರವು ನೀಡಿದ ಅಮೆರಿಕ ಸರ್ಕಾರ ಭಾರತವು ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ನೆರವು ನೀಡದಂತೆ ಒತ್ತಡ ಹೇರುತ್ತಿದೆ. ಇಂತಹ ಒತ್ತಡಗಳಿಗೆ ಕೇಂದ್ರ ಸರ್ಕಾರ ಮಣಿಯಬಾರದು ಎಂದು ಆಗ್ರಹಿಸಿದರು.

‘ಭಾರತದಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡ ಲು ಅಮೆರಿಕ ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ. ಅಮೆರಿಕದ ಖಜಾನೆ ಅಧಿಕಾರಿಗಳು ಈ ವಿಚಾರದಲ್ಲಿ ನಮ್ಮ ಹಣಕಾಸು ಸಚಿವಾಲಯದ ಮೇಲೆ ಆಗಾಗ ಒತ್ತಡ ಹೇರುತ್ತಲೇ ಇರುತ್ತಾರೆ ಎಂಬುದನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ನ ನಿವೃತ್ತ ಗವರ್ನರ್‌ ಒಬ್ಬರು ನನ್ನ ಬಳಿ ಹೇಳಿದ್ದರು. ಬ್ಯಾಂಕ್‌ಗಳ ರಾಷ್ಟ್ರೀಕರಣವನ್ನು ಈ ದೇಶದ ಜನತೆ ಒಪ್ಪಿಕೊಂಡಿದ್ದಾರೆ. ಅದರ ವಿರುದ್ಧ ಹೋಗುವ ಧೈರ್ಯ ಯಾವ ರಾಜಕೀಯ ಪಕ್ಷಗಳಿಗೂ ಬಂದಿಲ್ಲ. ಹೀಗಾಗಿ ನಮ್ಮ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಸುರಕ್ಷಿತವಾಗಿ ಉಳಿದಿವೆ’ ಎಂದರು.

ದೊಡ್ಡ ಪ್ರಮಾಣದ ಲಾಭದ ಮೇಲೆ ಕಣ್ಣಿಟ್ಟಿರುವ ಖಾಸಗಿ ಬ್ಯಾಂಕ್‌ಗಳು ಊಹೆಯನ್ನು ಆಧರಿಸಿದ ಯೋಜನೆ ಗಳಿಗೆ ಹೆಚ್ಚು ಸಾಲ ನೀಡುತ್ತಿವೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಕೂಡ ಇಂತಹ ನೀತಿಯನ್ನು ಅನುಸರಿಸಬೇಕೆಂಬ ಒತ್ತಡ ಹೆಚ್ಚುತ್ತಿದೆ. ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಕಾರ್ಪೋ ರೇಟ್‌ ಉದ್ದಿಮೆಗಳಿಗೆ ದೊಡ್ಡ ಪ್ರಮಾ ಣದ ಸಾಲ ನೀಡಬೇಕೆಂದು ಕೇಂದ್ರ ಸರ್ಕಾರವೇ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಮೇಲೆ ಒತ್ತಡ ಹೇರುತ್ತಿದೆ. ಆಸ್ಟ್ರೇಲಿಯಾದಲ್ಲಿ ಗಣಿಗಾರಿಕೆ ನಡೆಸಲು ಅದಾನಿ ಕಂಪೆನಿಗೆ ಭಾರತೀಯ ಸ್ಟೇಟ್‌ ಬ್ಯಾಂಕ್‌ ಸಾಲ ಮಂಜೂರು ಮಾಡಿದ ಪ್ರಕರಣ ಇದಕ್ಕೊಂದು ಉದಾಹರಣೆ ಎಂದು ಹೇಳಿದರು.

ಅನ್ಯ ಉದ್ದೇಶಕ್ಕೆ ಒತ್ತಡ: ಮುಖ್ಯ ಅತಿಥಿ ಯಾಗಿದ್ದ ಅಖಿಲ ಭಾರತ ಬ್ಯಾಂಕ್‌ ಅಧಿಕಾರಿಗಳ ಸಂಘದ ಅಧ್ಯಕ್ಷ ವೈ. ಸುದರ್ಶನ್ ಮಾತನಾಡಿ, ‘ಬ್ಯಾಂಕಿಂಗ್‌ಗೆ ಹೊರತಾದ ಮ್ಯೂಚ್ಯುವಲ್‌ ಫಂಡ್‌ಗಳ ಮಾರಾಟ, ವಿಮಾ ಪಾಲಿಸಿಗಳ ಮಾರಾಟದಂತಹ ಕೆಲಸಗಳಿಗೆ ಆಡಳಿತ ಮಂಡಳಿಗಳು ಬ್ಯಾಂಕ್‌ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿರುವುದು ಹೆಚ್ಚುತ್ತಿದೆ. ಬ್ಯಾಂಕ್‌ಗಳಿಗೆ ಅಗತ್ಯವಿರುವ ಬಂಡವಾಳ ಒದಗಿಸುವಲ್ಲಿಯೂ ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎರಡು ಮತ್ತು ನಾಲ್ಕನೇ ಶನಿವಾರ ಗಳಂದು ರಜೆ ಪಡೆಯುವಲ್ಲಿ ಸಂಘಟನೆ ಯಶಸ್ವಿಯಾಗಿದೆ. ಎಲ್ಲ  ಶನಿವಾರ ಗಳಂದು ರಜೆ ಘೋಷಿಸುವಂತೆ ಒತ್ತಡ ಹೇರಲಾಗುತ್ತಿದೆ. ಪಿಂಚಣಿಯಲ್ಲಿನ ಅಸ ಮಾನತೆ, ಶಿಸ್ತು ಕ್ರಮಕ್ಕೆ ಸಂಬಂಧಿಸಿದ ಕೈಪಿಡಿ ರಚನೆಯಂತಹ ವಿಷಯಗಳಲ್ಲಿ ಬ್ಯಾಂಕರುಗಳ ಸಂಘಟನೆಯೊಂದಿಗೆ ಮಾತುಕತೆ ಪ್ರಗತಿಯಲ್ಲಿದೆ ಎಂದರು.

ಕಾರ್ಪೋರೇಷನ್‌ ಬ್ಯಾಂಕ್‌ ಅಧಿಕಾರಿಗಳ ಸಂಘದ ಉಪಾಧ್ಯಕ್ಷ ಜಿ. ರಘುರಾಮ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಏಕ ನಾಥ ಬಾಳಿಗ, ಸ್ವಾಗತ ಸಮಿತಿ ಅಧ್ಯಕ್ಷ ಜಯಪ್ರಕಾಶ್ ರಾವ್, ಕಾರ್ಯದರ್ಶಿ ಕೆ.ಎಸ್‌.ಕಾರ್ತಿಕ್‌  ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.