ಉಡುಪಿ: ಸತತ ಎರಡು ಸೋಲಿನಿಂದಲೇ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ ಕೆ.ಜಯಪ್ರಕಾಶ್ ಹೆಗ್ಡೆ ಸತತ ಮೂರು ಬಾರಿ ಶಾಸಕರಾಗಿ ಗೆಲುವಿನ ಸವಿ ಕಂಡವರು. ಬಳಿಕ ಮತ್ತೆರಡು ಬಾರಿ ಸೋತರೂ ಆತ್ಮವಿಶ್ವಾಸ ಕಳೆದುಕೊಳ್ಳದ ಅವರು ಫೀನಿಕ್ಸ್ ಹಕ್ಕಿಯಂತೆ ಎದ್ದು ಬಂದು ಈ ಬಾರಿ ಮತ್ತೆ ಗೆಲುವಿನ ನಗೆ ಬೀರಿದ್ದಾರೆ.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಭೇರಿ ಬಾರಿಸಿರುವ ಹೆಗ್ಡೆ ಜನತಾದಳ ದಿಂದ ರಾಜಕೀಯ ಆರಂಭಿಸಿ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ವಲಸೆ ಬಂದವರು. ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಜನತಾದಳದಿಂದ ಸ್ಪರ್ಧಿಸಿ ಸೋಲುಂಡಿದ್ದ ಹೆಗ್ಡೆ, 1994ರಲ್ಲಿ ಮೊದಲ ಬಾರಿ ಶಾಸಕರಾದರು. ಜೆ.ಎಚ್. ಪಟೇಲ್ ಸಂಪುಟದಲ್ಲಿ ಬಂದರು ಮತ್ತು ಮೀನುಗಾರಿಕಾ ಸಚಿವರಾದರು. ಜನತಾದಳ ಇಬ್ಭಾಗವಾದ ಬಳಿಕ 1999ರಲ್ಲಿ ಹಾಗೂ 2004ರಲ್ಲಿ ಬ್ರಹ್ಮಾವರ ಕ್ಷೇತ್ರದಿಂದ ಪಕ್ಷೇತರರಾಗಿ ಗೆದ್ದಿದ್ದರು. 2008ರಲ್ಲಿ ಕ್ಷೇತ್ರ ಪುನರ್ವಿಂಗಡಣೆಯಿಂದಾಗಿ ಬ್ರಹ್ಮಾವರ ಕ್ಷೇತ್ರ ಉಡುಪಿ ಕ್ಷೇತ್ರದೊಂದಿಗೆ ವಿಲೀನವಾಯಿತು. ಬಳಿಕ ಕಾಂಗ್ರೆಸ್ ಸೇರಿದ ಅವರು, ಕುಂದಾಪುರ ಕ್ಷೇತ್ರದಿಂದ ಸ್ಪರ್ಧಿಸಿ ಸುಮಾರು 28 ಸಾವಿರ ಮತಗಳ ಅಂತರದಿಂದ ಸೋತಿದ್ದರು. 2009ರ ಲೋಕಸಭಾ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಹೆಗ್ಡೆ ಡಿ.ವಿ.ಸದಾನಂದ ಗೌಡ ವಿರುದ್ಧ 27 ಸಾವಿರ ಮತಗಳಿಂದ ಸೋತರು. ಈ ಬಾರಿ ಬಿಜೆಪಿ ಅಭ್ಯರ್ಥಿ ವಿ. ಸುನೀಲ್ ಕುಮಾರ್ ವಿರುದ್ಧ 45 ಸಾವಿರ ಮತಗಳ ಅಂತರದಿಂದ ವಿಜಯಿಯಾಗಿದ್ದಾರೆ.
ನಿವೃತ್ತ ನ್ಯಾಯಾಧೀಶ ಕೆ.ಚಂದ್ರಶೇಖರ ಹೆಗ್ಡೆ ಅವರ ಪುತ್ರನಾಗಿ 1952ರ ಅ. 16ರಂದು ಕುಂದಾಪುರದ ಕೊರ್ಗಿಯಲ್ಲಿ ಜನಿಸಿದ ಜಯಪ್ರಕಾಶ್ ಹೆಗ್ಡೆ ಬಿ.ಎ.ಮತ್ತು ಎಲ್‌ಎಲ್‌ಬಿ ಪದವೀಧರರ. ಈಗಲೂ ವಕೀಲರಾಗಿ ಕೆಲಸ ಮಾಡುತ್ತಿದ್ದು ಬ್ರಹ್ಮಾವರದಲ್ಲಿ ಕಚೇರಿ ಹೊಂದಿದ್ದಾರೆ. ಬಂಟ ಸಮುದಾಯದ ಹೆಗ್ಡೆ ಹಲವು ವರ್ಷಗಳಿಂದ ರಾಜಕೀಯ ಅನುಭವ ಪಡೆದವರು. ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತ ಬಂದಿರುವ ಹೆಗ್ಡೆ, ಕರ್ನಾಟಕ ಪ್ರಿಮಿಯರ್ ಲೀಗ್ ಫ್ರಾಂಚೈಸಿಯನ್ನೂ ಹೊಂದಿದ್ದಾರೆ. ಪತ್ನಿ ಶೋಭಾ (ವೀಣಾ) ಹೆಗ್ಡೆ, ಪುತ್ರಿ ದಿವ್ಯಾ ಹೆಗ್ಡೆ ಹಾಗೂ ಪುತ್ರ ನಿಶಾಂತ್ ಹೆಗ್ಡೆ ಅವರನ್ನೊಳಗೊಂಡ ಪುಟ್ಟ ಸಂಸಾರ ಹೆಗ್ಡೆ ಅವರದ್ದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.