ADVERTISEMENT

ಜಲ್ಲಿ ಕ್ರಷರ್ ಪರವಾನಗಿ ನವೀಕರಣಕ್ಕೆ ಗ್ರಾಮಸ್ಥರ ವಿರೋಧ

ನೆಲ್ಲಿಕಾರು ಗ್ರಾಮ ಸಭೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2013, 6:56 IST
Last Updated 23 ಜೂನ್ 2013, 6:56 IST

ಮೂಡುಬಿದಿರೆ: ಗ್ರಾಮಸ್ಥರಿಗೆ ತೊಂದರೆ ನೀಡುತ್ತಿರುವ ಎರಡು ಜಲ್ಲಿ ಕ್ರಷರ್‌ಗಳ ಪರವಾನಗಿ ನವೀಕರಿಸಬಾರದು ಎಂದು ಶುಕ್ರವಾರ ನಡೆದ ನೆಲ್ಲಿಕಾರು ಗ್ರಾಮಸಭೆಯಲ್ಲಿಗ್ರಾಮಸ್ಥರು ಆಗ್ರಹಿಸಿದರು.

ಪಂಚಾಯತಿ ಅಧ್ಯಕ್ಷೆ ಸರೋಜಾ ಅವರ ಅಧ್ಯಕ್ಷತೆಯಲ್ಲಿ ಗ್ರಾಮಸಭೆ ನಡೆಯಿತು.  ಪಂಚಾಯತಿ ವ್ಯಾಪ್ತಿಯಲ್ಲಿ 5 ಜಲ್ಲಿ ಕ್ರಷರ್‌ಗಳಿದ್ದು ಈ ಪೈಕಿ ರೋಬೊ ಸಿಲಿಕಾನ್ ಮತ್ತು ಶ್ರಿನಿವಾಸ ಪ್ರಸಾದ್ ಕ್ರಷರ್‌ಗಳಿಂದ ಪರಿಸರಕ್ಕೆ ತೊಂದರೆಯಾಗುತ್ತಿದ್ದು, ಗ್ರಾಮ ಪಂಚಾಯತಿಗೆ ಈ ಹಿಂದೆಯೆ ದೂರು ನೀಡಲಾಗಿದೆ. ಈ ಎರಡು ಕ್ರಷರ್‌ಗಳನ್ನು ಮುಚ್ಚಬೇಕು ಮತ್ತು ಪರವಾನಿಗೆಯನ್ನು ಪಂಚಾಯತಿ ನವೀಕರಿಸಬಾರದು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಉಪಾಧ್ಯಕ್ಷ ಶಶಿಧರ್, ಗ್ರಾಮಸ್ಥರ ವಿರೋಧವಿದ್ದರೆ ಈ ಎರಡು ಕ್ರಷರ್‌ಗಳ ಪರವಾನಗಿ ನವೀಕರಿಸುವುದಿಲ್ಲ. ಅಲ್ಲದೆ ಮುಂದೆ ಈ ಪ್ರದೇಶದಲ್ಲಿ ಹೊಸ ಗಣಿಗಾರಿಕೆಗೆ ಪರವಾನಗಿ ನೀಡದಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಪತ್ರ ಬರೆಯಲಾಗುವುದು ಎಂದರು.

ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಯೋಜನೆ ಇನ್ನೂ ಹಳ್ಳಿಯನ್ನು  ತಲುಪುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳನ್ನು ಮಾತನಾಡಿಸಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥ ರಮೇಶ್ ಬೋಧಿ ಆರೋಪಿಸಿದರು. ಈ ಆರೋಪಕ್ಕೆ ಪ್ರತಿಕ್ರಿಯಿಸಿದ ಪ್ರಭಾರ ಅಭಿವೃದ್ಧಿ ಅಧಿಕಾರಿ ಡಾ. ಮನೋಹರ ಉದ್ಯೋಗ ಖಾತ್ರಿ ಯೋಜನೆ, ಮಾರ್ಗಸೂಚಿ ಪ್ರಕಾರ ಕೆಲಸ ನಡೆಯುತ್ತಿದೆ.
ಯೋಜನೆ ಅನುಷ್ಠಾನ ವಿಳಂಬದ ಬಗ್ಗೆ ಸಂಬಂಧಪಟ್ಟ ಇಲಾಖಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.

ಶಿಕ್ಷಣ ಇಲಾಖೆಯ ಬಗ್ಗೆ ಮಾಹಿತಿ ನೀಡಿದ ಮಾರ್ಗರೇಟ್ ಪಿಂಟೊ ಜುಲೈನಲ್ಲಿ ಪ್ರಾಥಮಿಕ ಶಿಕ್ಷಕಕರ ಕೌನ್ಸಿಲಿಂಗ್ ನಡೆಯಲಿದ್ದು, ಶಿಕ್ಷಕರ ಕೊರೆತೆಯಿರುವ ಶಾಲೆಗಳ ಸಮಸ್ಯೆ ಬಗೆಹರಿಯಲಿದೆ. ಶಿಕ್ಷಕರ ಕೊರತೆ ನೀಗಿಸಲು ಗುತ್ತಿಯಾಧಾರದಲ್ಲೂ ನೇಮಕ ನಡೆಯಲಿದೆ. ಭುವನಜ್ಯೋತಿ ರೆಸಿಡೆನ್ಸಿಯಲ್ ಶಾಲೆಯವರು ಕೂಡ ಶಿಕ್ಷಕರನ್ನು ಒದಗಿಸುತ್ತಿದ್ದಾರೆ ಎಂದರು.

ಇಂಟರ್‌ನೆಟ್ ಸಮಸ್ಯೆಯಿಂದಾಗಿ ಪಡಿತರ ಚೀಟಿ ಅನ್‌ಲೈನ್ ನೋಂದಾಣಿ ಪ್ರಕ್ರಿಯೆ ವಿಳಂಬವಾಗುವುದನ್ನು ತಪ್ಪಿಸಲು ಶೀಘ್ರದಲ್ಲಿ ಬ್ರಾಡ್‌ಬ್ಯಾಂಡ್ ಸೌಲಭ್ಯ ಒದಗಿಸಿ ಅವ್ಯವಸ್ಥೆ ಸರಿಪಡಿಸಲಾಗುವುದು ಎಂದು ಅಭಿವೃದ್ಧಿ ಅಧಿಕಾರಿ ಸಭೆಗೆ ತಿಳಿಸಿದರು.

ಜಿಲ್ಲಾ ಪಂಚಾಯತಿ ಸದಸ್ಯೆ ಅಂಬಿಕಾ.ಡಿ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಸದಸ್ಯ ರುಕ್ಕಯ್ಯ ಪೂಜಾರಿ, ನೋಡೆಲ್ ಅಧಿಕಾರಿ ಜಲಾನಯನ ಇಲಾಖೆಯ ಯುವರಾಜ್, ಕಾರ್ಯದರ್ಶಿ ಸುನಂದ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.