ADVERTISEMENT

ಜಿಲ್ಲಾ ಪ್ರತಿಭಾ ಕಾರಂಜಿ: ಮೂಡುಬಿದಿರೆ ಪ್ರಥಮ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 10:28 IST
Last Updated 21 ಡಿಸೆಂಬರ್ 2012, 10:28 IST
ಮೂಡುಬಿದಿರೆ: ದ.ಕ.ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಮೂಡುಬಿದಿರೆ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ರೋಟರಿ ಆಂಗ್ಲ ಮಾಧ್ಯಮ ಶಾಲೆ ಜಂಟಿ ಆಶ್ರಯದಲ್ಲಿ ರೋಟರಿ ಶಾಲೆಯ ಆವರಣದಲ್ಲಿ ಗುರುವಾರ ಮುಕ್ತಾಯಗೊಂಡ ಎರಡು ದಿನಗಳ ದ.ಕ.ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ `ವೈಭವ 2012' ಸ್ಪರ್ಧೆಯಲ್ಲಿ ಆತಿಥೇಯ ಮೂಡುಬಿದಿರೆ ವಲಯ 127 ಅಂಕಗಳೊಂದಿಗೆ ತಾಲ್ಲೂಕು ವಾರು ಸಾಧನೆಯಲ್ಲಿ ಅಗ್ರಸ್ಥಾನ ಪಡೆದಿದೆ.

112 ಅಂಕ ಪಡೆದ ಮಂಗಳೂರು ಉತ್ತರ ದ್ವಿತೀಯ ಮತ್ತು 103 ಅಂಕ ಪಡೆದ ಸುಳ್ಯ ತೃತೀಯ ಸ್ಥಾನ ಗೆದ್ದುಕೊಂಡಿದೆ.
ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದ ಶಾಸಕ ಕೆ.ಅಭಯಚಂದ್ರ ಜೈನ್, ವಿದ್ಯಾರ್ಥಿ ಪ್ರತಿಭೆಗಳು ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಮಿಂಚುವಂತೆ ಅವರನ್ನು ರೂಪಿಸಿದ ಶಿಕ್ಷಕ ಸಮುದಾಯದ ಕೆಲಸ ಶ್ಲಾಘನಾರ್ಹ ಎಂದರು.

ಸರ್ವ ಶಿಕ್ಷಣ ಅಭಿಯಾನದ ಡಿವೈಪಿಸಿ ಎನ್.ಶಿವಪ್ರಕಾಶ್, ಬೆಳ್ತಂಗಡಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ,ಜಿಲ್ಲಾ ಪ್ರತಿಭಾ ಕಾರಂಜಿ ನೋಡಲ್ ಅಧಿಕಾರಿ ರಾಧಾ ಕೃಷ್ಣ ಭಟ್, ಕ್ಷೇತ್ರ ಸಮನ್ವಯಾಧಿಕಾರಿ ಸುರೇಖಾ, ಜಿಲ್ಲಾ ವಿಷಯ ಪರಿವೀಕ್ಷರಾದ ನರಸಿಂಹ, ಎ.ಐ. ಖಾಜಿ, ರೋಟರಿ ಎಜುಕೇಶನ್ ಸೊಸೈಟಿ ಸದಸ್ಯರಾದ ಎಚ್.ಉದಯ ಶಂಕರ ಪ್ರಭು , ಶಾಲಾ ಸಂಚಾಲಕ ಯತಿಕುಮಾರ ಸ್ವಾಮಿ ಗೌಡ ಇದ್ದರು.

ಪ್ರತಿಭಾ ಕಾರಂಜಿಯ ವಲಯ ನೋಡಲ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಪಿ.ಪುರುಷೋತ್ತಮ ರಾವ್ ಅವರನ್ನು ರೋಟರಿ ಶಾಲೆಯ ವತಿಯಿಂದ ಮತ್ತು ರೋಟರಿ ಶಾಲಾ ಪ್ರಾಂಶುಪಾಲ ವಿನ್ಸೆಂಟ್ ಡಿಕೊಸ್ತಾ ಅವರನ್ನು ಸನ್ಮಾನಿಸಲಾಯಿತು. ಗಜಾನನ ಮರಾಠೆ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.