ADVERTISEMENT

ಜೋಕಟ್ಟೆ ಮಕ್ಕಳಿಗೆ ಕೋಕ್‌ ಬೂದಿಯ ಕಾಟ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2017, 19:48 IST
Last Updated 25 ಅಕ್ಟೋಬರ್ 2017, 19:48 IST

ಮಂಗಳೂರು: ಎಂಆರ್‌ಪಿಎಲ್‌ನ ವಿಷಕಾರಿ ಕೋಕ್‌ ಬೂದಿಯು ಜೋಕಟ್ಟೆ ಪರಿಸರದ ಅಂಗನವಾಡಿ ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇತ್ತೀಚೆಗೆ ಕಡಿಮೆಯಾಗಿದ್ದ ಬೂದಿಯ ಹಾವಳಿ, ಇದೀಗ ಮತ್ತೆ ಆರಂಭವಾಗಿದೆ.

ಇದು ರಾಸಾಯನಿಕದಿಂದ ಕೂಡಿದ್ದು, ಮಕ್ಕಳ ಶ್ವಾಸಕೋಶಕ್ಕೆ ತೊಂದರೆ ಉಂಟು ಮಾಡಲಿದೆ. ಸರ್ಕಾರದ ಆದೇಶಗಳಿಗೆ ಇಲ್ಲಿ ಯಾವುದೇ ಬೆಲೆ ಇಲ್ಲದಂತಾಗಿದೆ ಎಂದು ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ಮುಖಂಡ ಮುನೀರ್‌ ಕಾಟಿಪಳ್ಳ ತಿಳಿಸಿದ್ದಾರೆ.

ನಿಯಮ ಮೀರಿ ಜನವಸತಿ ಪ್ರದೇಶದಲ್ಲಿ ಕೋಕ್‌ ಸಲ್ಫರ್‌ ಘಟಕ ಸ್ಥಾಪಿಸಲಾಗಿದೆ. ಜನರ ಹೋರಾಟದ ಫಲವಾಗಿ ಸರ್ಕಾರ 2016 ರಲ್ಲಿ ಹೊರಡಿಸಿದ ಗೆಜೆಟ್‌ ಅಧಿಸೂಚನೆಗೂ ಯಾವುದೇ ಬೆಲೆ ಇಲ್ಲದಂತಾಗಿದೆ. ಸರ್ಕಾರದ ನಿರ್ದೇಶನಗಳನ್ನು ಜಾರಿಗೊಳಿಸದೇ, ಎಂಆರ್‌ಪಿಎಲ್‌ ಉದ್ಧಟತನ ತೋರುತ್ತಿದೆ. ಇದರಿಂದ ಜೋಕಟ್ಟೆ ಭಾಗದ ಮನೆಗಳಲ್ಲಿ ಬೂದಿಯ ಮಳೆ ಸುರಿಯುತ್ತಿದೆ ಎಂದು ಅವರು ದೂರಿದ್ದಾರೆ.

ADVERTISEMENT

ಸತತ ಒಂದೂವರೆ ವರ್ಷ ಹೋರಾಟ ನಡೆಸಿದ ಪರಿಣಾಮ ಸರ್ಕಾರ 2016 ರ ಏಪ್ರಿಲ್‌ನಲ್ಲಿ ಗೆಜೆಟ್‌ ಅಧಿಸೂಚನೆ ಹೊರಡಿಸಿತ್ತು. ಈ ಆದೇಶದ ಪ್ರಕಾರ 2017 ರ ಜೂನ್‌ ಒಳಗಾಗಿ ಕೋಕ್‌ ಡಂಪಿಂಗ್‌ ಮತ್ತು ಲೋಡಿಂಗ್ ಯಾರ್ಡ್‌ ಅನ್ನು ಜನವಸತಿ ಪ್ರದೇಶದಿಂದ ಸ್ಥಳಾಂತರಿಸಬೇಕಿತ್ತು. ಅಲ್ಲದೇ ಈ ಪ್ರದೇಶದಲ್ಲಿ ಹಸಿರು ವಲಯ ನಿರ್ಮಾಣ ಮಾಡಬೇಕಿತ್ತು. ಇದುವರೆಗೆ ಅದಾವುದೂ ಆಗಿಲ್ಲ ಎಂದು ಹೇಳಿದ್ದಾರೆ.

ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿರುವ ಎಂಆರ್‌ಪಿಎಲ್‌ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೋಕ್‌ ಸಲ್ಫರ್‌ ಘಟಕಕ್ಕೆ ಜಿಲ್ಲಾಡಳಿತ ಬೀಗ ಹಾಕಬೇಕು. ಪರಿಹಾರ ಕ್ರಮ ಕೈಗೊಳ್ಳಲು ಸೂಚನೆ ನೀಡಬೇಕು. ಈ ಮೂಲಕ ಪ್ರದೇಶದ ಜನರ ಆರೋಗ್ಯ ಕಾಪಾಡಲು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.