ADVERTISEMENT

ಡೊಂಗರಕೇರಿ, ವಿಟಿ ರಸ್ತೆ; ಶ್ರಮದಾನ

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 11:36 IST
Last Updated 23 ಏಪ್ರಿಲ್ 2018, 11:36 IST

ಮಂಗಳೂರು: ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಜರುಗುತ್ತಿರುವ ಸ್ವಚ್ಛ ಮಂಗಳೂರು ಅಭಿಯಾನದ 27ನೇ ಶ್ರಮದಾನವನ್ನು ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಡಾ.ಸತೀಶ್ ಭಂ‌ಡಾರಿ ಹಾಗೂ ಸಮಾಜಸೇವಕ ಚಂದ್ರಕಾಂತ ಕುಲಕರ್ಣಿ ಪುಣೆ ಉದ್ಘಾಟಿಸಿದರು.

ಡಾ. ಸತೀಶ್ ಭಂಡಾರಿ ಮಾತನಾಡಿ, ‘ಮಂಗಳೂರು ಸ್ಮಾರ್ಟ್ ಸಿಟಿ ಎಂದು ಘೋಷಣೆ ಮಾಡಿದರೆ ಸಾಲದು,  ಎಲ್ಲರೂ ಸ್ವಚ್ಛ ಮತ್ತು ಸ್ಮಾರ್ಟ್ ಮಂಗಳೂರು ಮಾಡಲು ಪಣ ತೊಡುವಂತಾಗಬೇಕು. ಈ ನಿಟ್ಟಿನಲ್ಲಿ ರಾಮಕೃಷ್ಣ ಮಿಷನ್ ಕಳೆದ ನಾಲ್ಕು ವರ್ಷಗಳಿಂದ ಸ್ವಚ್ಛತಾ ಅಭಿಯಾನವನ್ನು ಕೈಗೊಂಡು ಸಾರ್ವಜನಿಕರನ್ನು ಭಾಗಿಗ ಳನ್ನಾಗಿಸುತ್ತಿರುವುದು ಅಭಿ ನಂದನೀಯ’ ಎಂದರು.

ಅಭಿಯಾನದ ಪ್ರಧಾನ ಸಂಯೋ ಜಕ ಉಮಾನಾಥ ಕೋಟೆಕಾರ್, ಡಾ. ವಿಜಯ ಕುಮಾರ, ಶ್ರೀಶ ಬಂಗೇರ, ಪ್ರವೀಣ ಶೆಟ್ಟಿ ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು.

ADVERTISEMENT

ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ವಿದ್ಯಾರ್ಥಿಗಳು ಡಾ. ಶಶಿಕುಮಾರ ಶೆಟ್ಟಿ ಮಾರ್ಗದರ್ಶನದಲ್ಲಿ ನವಭಾರತ ವೃತ್ತದಿಂದ ಡೊಂಗರಕೇರಿಗೆ ಹೋಗುವ ಮಾರ್ಗ ಸ್ವಚ್ಛಗೊಳಿಸಿದರು. ಸುರೇಶ್ ಶೆಟ್ಟಿ ನೇತೃತ್ವದಲ್ಲಿ ಆ ಪರಿಸರದ ಮನೆ ಹಾಗೂ ಅಂಗಡಿಗಳಿಗೆ ತೆರಳಿ ‘ಸ್ವಚ್ಛ ಸಂಕಲ್ಪ’ ಎಂಬ ಕರಪತ್ರ ನೀಡಿ ಜಾಗೃತಿ ಮೂಡಿಸಲಾಯಿತು. ಮತ್ತೊಂದು ಗುಂಪು ಡಾ. ಸತೀಶ್ ರಾವ್ ಜೊತೆಯಲ್ಲಿ ನವಭಾರತ ವೃತ್ತ ಹಾಗೂ ಸಂತ ಅಲೋಶಿಯಸ್ ಕಾಲೇಜಿನತ್ತ ಸಾಗುವ ಮಾರ್ಗ ಹಾಗೂ ಕಾಲುದಾರಿಗಳನ್ನು ಸ್ವಚ್ಛ ಮಾಡಿತು. ಅಲ್ಲಿ ಬಿಸಾಕಿದ್ದ ಕಟ್ಟಡ ತ್ಯಾಜ್ಯವನ್ನು ತೆಗೆದರು. ಪುಟ್‌ಪಾತ್‌ ಸರಿಗೊಳಿಸಿದರು. ಅಲ್ಲಿದ್ದ ಪಿವಿಎಸ್ ರಸ್ತೆ ಎನ್ನುವ ಮಾರ್ಗಸೂಚಕ ಫಲಕ ನೂತನವಾಗಿ ಬಣ್ಣ ಬಳಿದು ಸುಂದರ ಅಕ್ಷರಗಳಿಂದ ಬರೆದು ನವೀಕರಿಸಲಾಯಿತು.

ಕಮಲಾಕ್ಷ ಪೈ ಹಾಗೂ ದಾಮೋದರ ಭಟ್ ಸೇರಿದಂತೆ ಅನೇಕ ಹಿರಿಯ ಕಾರ್ಯಕರ್ತರು ವಿಟಿ ರಸ್ತೆಯಲ್ಲಿರುವ ತ್ಯಾಜ್ಯ ಬಿಸಾಕುವ ಜಾಗದಲ್ಲಿ ಒಂದು ಟಿಪ್ಪರಿಗೂ ಅಧಿಕ ತ್ಯಾಜ್ಯ ತೆರವುಗೊಳಿಸಿದರು. ತದನಂತರ ಅಲ್ಲಿ ಕೆಂಪು ಮಣ್ಣು ಹಾಕಿ, ಗುಂಡಿ ಮುಚ್ಚಿ ಹೂಗಿಡಗಳನ್ನು ಇಟ್ಟು ಸುಂದರಗೊಳಿಸಿದರು. ಕಳೆದ ಕೆಲವಾರು ದಿನಗಳಿಂದ ಅಲ್ಲಿದ್ದ ಮನೆಗಳನ್ನು ಸ್ವಚ್ಛ ಜಾಗೃತಿ ಕಾರ್ಯಕರ್ತರು ಸಂಪರ್ಕಿಸಿ ಅವರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಅನಿರುದ್ಧ ನಾಯಕ್, ಸುಭೋದಯ ಆಳ್ವ. ಸುಜಿತ್ ಪ್ರತಾಪ್, ಮತ್ತಿತರ ಕಾರ್ಯಕರ್ತರು ಈ ಶ್ರಮದಾನದಲ್ಲಿ ಪಾಲ್ಗೊಂಡರು.

ನಿಟ್ಟೆ ವಿವಿ ಫಿಸಿಯೋಥೆರಪಿ ಕಾಲೇಜಿನ ವಿದ್ಯಾರ್ಥಿಗಳು ಕಿರಣ ಫರ್ನಾಂಡಿಸ್, ಅಶೋಕ ಸುಬ್ಬಯ್ಯ ಉಮಾನಾಥ್ ಮಾರ್ನಮಿಕಟ್ಟೆ, ಅಭಿಷೇಕ್ ವಿ. ಎಸ್, ಡಾ. ರಾಕೇಶ್ ಕೃಷ್ಣ, ಶಿವು ಪುತ್ತೂರು, ಧನುಷ್ಯ ಶೆಟ್ಟಿ , ನಲ್ಲೂರು ಸಚಿನ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.