ADVERTISEMENT

ತನಿಖೆ ಚುರುಕು- 30 ಸಾವಿರ ಮರುಪಾವತಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2011, 7:30 IST
Last Updated 24 ಸೆಪ್ಟೆಂಬರ್ 2011, 7:30 IST

ಮಂಗಳೂರು: ಮಂಗಳೂರು ತಾಲ್ಲೂಕಿನ ಹರೇಕಳ ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದ್ದು, ತಾಲ್ಲೂಕು ಪಂಚಾಯಿತಿ ಅಧಿಕಾರಿಗಳ ತಂಡ ಶುಕ್ರವಾರ ದಿನವಿಡೀ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ತನಿಖೆ ನಡೆಸಿತು. ಈ ನಡುವೆ ಅವ್ಯವಹಾರಕ್ಕೆ ಸಂಬಂಧಿಸಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ 29,739 ರೂಪಾಯಿಗಳನ್ನು ಉದ್ಯೋಗ ಖಾತರಿ ಖಾತೆಗೆ ಮರು ಪಾವತಿಸಿದ್ದಾರೆ.

ಹರೇಕಳ ಗ್ರಾಮ ಪಂಚಾಯಿತಿ ಕಳೆದ ವರ್ಷವೇ ಉದ್ಯೋಗ ಖಾತರಿ ಯೋಜನೆ ಅವ್ಯವಹಾರದ ಮೂಲಕ ಅಪಖ್ಯಾತಿಗೆ ಒಳಗಾಗಿತ್ತು. ಲೋಕಾಯುಕ್ತ ಪೊಲೀಸರು ತನಿಖೆಯನ್ನೂ ನಡೆಸಿದ್ದರು. ಈ ಬಾರಿಯಂತೂ ಇನ್ನೂ ಗಂಭೀರ ಸ್ವರೂಪದ ಭ್ರಷ್ಟಾಚಾರಕ್ಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೈಹಾಕಿದ್ದು, ಗ್ರಾಮಸ್ಥರು ಆರೋಪಿಗಳಿಗೆ ಶಿಕ್ಷೆಯಾಗಲೇಬೇಕು ಎಂದು ಪಣ ತೊಟ್ಟಿದ್ದಾರೆ.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೂಚನೆ ಮೇರೆಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ಪೂಜಾರಿ, ಸಹಾಯಕ ಲೆಕ್ಕಾಧಿಕಾರಿ ರಾಜೇಗೌಡ, ಬೆಳುವಾಯಿ ಪಿಡಿಒ ಸದಾನಂದ ಹಾಗೂ ಮತ್ತೊಬ್ಬ ಅಧಿಕಾರಿ ಗ್ರಾ.ಪಂ. ಕಚೇರಿಯಲ್ಲಿ ತನಿಖೆ ನಡೆಸಿದರು. ಗ್ರಾಮಸ್ಥರು ಸ್ಥಳದಲ್ಲಿ ಹಾಜರಿದ್ದು, ತನಿಖೆ `ಸುಸೂತ್ರ~ವಾಗಿ ನಡೆಯುವಂತೆ ನೋಡಿಕೊಂಡರು.

ಎರಡು ಲಕ್ಷ ರೂಪಾಯಿಗೂ ಅಧಿಕ ಮೊತ್ತದ ಅವ್ಯವಹಾರ ನಡೆದಿರುವುದು ಮೇಲ್ನೋಟದ ತನಿಖೆಯಿಂದ ಬಹಿರಂಗಗೊಂಡಿದೆ. `ಜಿ.ಪಂ. ಸೂಚನೆ ಮೇರೆಗೆ ತನಿಖೆ ನಡೆಸುತ್ತಿದ್ದೇವೆ. ಸಮಗ್ರ ತನಿಖೆ ನಡೆಸಿ ಜಿ.ಪಂ.ಗೆ ವರದಿ ಸಲ್ಲಿಸುತ್ತೇವೆ~ ಎಂದು ಅಧಿಕಾರಿಗಳ ತಂಡ `ಪ್ರಜಾವಾಣಿ~ಗೆ ತಿಳಿಸಿತು.

ಅವ್ಯವಹಾರ ಬೆಳಕಿಗೆ ಬಂದ ಕೂಡಲೇ ಒಂಬುಡ್ಸ್‌ಮನ್ ಶೀನ ಶೆಟ್ಟಿ ನೇತೃತ್ವದಲ್ಲಿ ತಂಡ ಸೋಮವಾರ ಗ್ರಾಮಕ್ಕೆ ಭೇಟಿ ನೀಡಿ ತನಿಖೆ ನಡೆಸಿತ್ತು. ಈ ಎರಡೂ ತಂಡಗಳು ಪರ್ಯಾಯವಾಗಿ ತನಿಖೆ ನಡೆಸಲಿವೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿ ಅಮಾನತಿಗೆ ಸಿದ್ಧತೆ ನಡೆದಿದೆ. ಅವ್ಯವಹಾರದ ಪೂರ್ತಿ ಹಣವನ್ನು ಉದ್ಯೋಗ ಖಾತರಿ ಖಾತೆಗೆ ಮರಳಿಸಲು ಕ್ರಮ ಕೈಗೊಳ್ಳಲಾಗುತ್ತದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ ಎಂದು ಜಿ.ಪಂ. ಮೂಲಗಳು ತಿಳಿಸಿವೆ. 

ಶುಕ್ರವಾರದ ತನಿಖೆಗೆ ಸಂದರ್ಭ ಅವ್ಯವಹಾರದ ವಿವಿಧ ಮುಖಗಳು ಬಯಲಿಗೆ ಬಂದವು. ಕೆಲವು ಕಾಮಗಾರಿ ನಿರ್ವಹಣೆ ಬಗ್ಗೆ ಸರಿಯಾದ ದಾಖಲೆಗಳೇ ಇರಲಿಲ್ಲ. ಪಿಡಿಒ, ಕಾರ್ಯದರ್ಶಿ ಬದಲಿಗೆ ಗ್ರಾ.ಪಂ. ಕಚೇರಿ ಸಹಾಯಕನೇ ಚೆಕ್‌ಗಳಿಗೆ ಸಹಿ ಹಾಕಿರುವ ಅಂಶವೂ ಬೆಳಕಿಗೆ ಬಂತು. ದಾಖಲೆಗಳನ್ನು ಸಮರ್ಪಕವಾಗಿ ಇಡದ ಬಗ್ಗೆ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡರು. ಉದ್ಯೋಗ ಚೀಟಿಯ ಪುಸ್ತಕ ಕ್ರಮಬದ್ಧವಾಗಿ ನಿರ್ವಹಿಸಿಲ್ಲ.

ಗ್ರಾಮಸ್ಥರಿಗೆ ಸರಿಯಾಗಿ ಉದ್ಯೋಗ ಕಾರ್ಡ್ ಕೊಟ್ಟಿಲ್ಲ. ಉದ್ಯೋಗ ಚೀಟಿಗೆ 218 ಮಂದಿ ನೋಂದಣಿ ಮಾಡಿದ್ದು, 42 ಮಂದಿಗೆ ಮಾತ್ರ ಉದ್ಯೋಗ ಚೀಟಿ ನೀಡಲಾಗಿದೆ. ತನಿಖಾಧಿಕಾರಿಗಳು ಕೇಳಿದ ಮೇಲೆ ಕೆಲವು ಮಂದಿಯ ಉದ್ಯೋಗ ಚೀಟಿಯನ್ನು ತಂದು ಕೊಡಲಾಯಿತು.

ಉದ್ಯೋಗ ಖಾತರಿ ದಾಖಲೆಯೊಂದನ್ನು ತನಿಖಾ ತಂಡಕ್ಕೆ ಸಂಜೆ ವೇಳೆಗೆ ಗ್ರಾ.ಪಂ. ಕಾರ್ಯದರ್ಶಿ ತಂದುಕೊಟ್ಟರು. ಇದೆಲ್ಲಿತ್ತು. ನಮಗೆ ಮೊದಲೇ ಏಕೆ ಕೊಟ್ಟಿಲ್ಲ ಎಂದು ತನಿಖಾಧಿಕಾರಿ ಪ್ರಶ್ನಿಸಿದಾಗ `ಅಲ್ಲೆಲ್ಲೋ ಇತ್ತು. ಈಗ ಸಿಕ್ಕಿತು. ತಗೊಳ್ಳಿ~ ಎಂದು ಕಾರ್ಯದರ್ಶಿ ವಿನಂತಿಸಿದರು. ಈ ದಾಖಲೆಗಳು ನಮಗೆ ಬೇಡ. ನೀವೇ ಇಟ್ಟುಕೊಳ್ಳಿ ಎಂದು ತನಿಖಾಧಿಕಾರಿ ತರಾಟೆಗೆ ತೆಗೆದುಕೊಂಡರು.

ಖಾತೆಗೆ ವಾಪಸ್: ಪತ್ರಿಕೆಯಲ್ಲಿ ಅವ್ಯವಹಾರದ ವರದಿ ಪ್ರಕಟವಾದ ಕೂಡಲೇ ಅವ್ಯವಹಾರದ ರೂ. 29,739 ಮೊತ್ತವನ್ನು ವಿಜಯ ಬ್ಯಾಂಕ್‌ನ ಮಂಗಳಗಂಗೋತ್ರಿ ಶಾಖೆಯಲ್ಲಿರುವ ಉದ್ಯೋಗ ಖಾತರಿ ಖಾತೆಗೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮರು ಪಾವತಿಸಿದ್ದಾರೆ.

ಒಡ್ಡದಗುರಿ ಇಸ್ಮಾಯಿಲ್ ಮನೆಯಿಂದ ಐತಪ್ಪ ಶೆಟ್ಟಿ ಮನೆವರೆಗೆ ಚರಂಡಿ ಹಾಗೂ ಬದಿ ಕಟ್ಟುವ ಕಾಮಗಾರಿ (ರೂ 80 ಸಾವಿರ) ಯಲ್ಲಿ ಪೂರ್ತಿ ಹಣ ಗೋಲ್‌ಮಾಲ್ ನಡೆದಿತ್ತು. ಸೆ. 2ರಂದು ರೂ 38,680 ಮೌಲ್ಯದ ಸಾಮಗ್ರಿಗಳನ್ನು ಖರೀದಿಸಲಾಗಿತ್ತು. ಈ ಕೆಲಸಕ್ಕೆ ದಿನಕ್ಕೆ 77 ಮಂದಿಯಂತೆ ಎಂಟು ದಿನ, 76 ಮಂದಿಯಂತೆ ನಾಲ್ಕು ದಿನ ಕೆಲಸ ಮಾಡಲಾಗಿದೆ. 109 ಮಂದಿ ಹೆಸರು ನೋಂದಾಯಿಸಿ ರೂ 13,625 ಹಣ ಪಡೆಯಲಾಗಿತ್ತು. ಆದರೆ ಆ ಸ್ಥಳದಲ್ಲಿ ಕಾಮಗಾರಿಯೇ ಆಗಿರಲಿಲ್ಲ.

`ಇಲ್ಲಿಗೆ ಪಿಡಿಒ ಆಗಿ ನಿಯೋಜನೆಗೊಂಡು 85 ದಿನ ಆಯಿತು. ತಲಪಾಡಿ ಹಾಗೂ ಹರೇಕಳದಲ್ಲಿ ಎರಡೂ ಕಡೆ ಕರ್ತವ್ಯ ನಿರ್ವಹಿಸಬೇಕಾಗಿದೆ. ಇಲ್ಲಿ ಎರಡು ದಿನ ಮಾತ್ರ ಬರುತ್ತೇನೆ. ಅವ್ಯವಹಾರ ಗ್ರಾ.ಪಂ. ಸದಸ್ಯರ ಮೂಲಕ ಆಗಿದೆ. ಅವರನ್ನು ಕರೆದು ತರಾಟೆಗೆ ತೆಗೆದುಕೊಂಡು ಹಣ ವಾಪಸ್ ಮಾಡುವಂತೆ ಸೂಚಿಸಿದೆ. ರೂ 29,739 ತಂದುಕೊಟ್ಟರು. ಅದನ್ನು ಖಾತೆಗೆ ಹಾಕಿದ್ದೇನೆ. ತನಿಖೆಗೆ ಪೂರ್ಣ ಸಹಕಾರ ನೀಡುತ್ತೇನೆ~ ಎಂದು ಪಿಡಿಒ ಚಂದ್ರಹಾಸ್ `ಪ್ರಜಾವಾಣಿ~ಗೆ ತಿಳಿಸಿದರು.

`ಸದಸ್ಯರೇ ಚೆಕ್ ತೆಗೆದುಕೊಂಡು ಹೋಗುತ್ತಿದ್ದರು. ಎಲ್ಲಿಗಾದರೂ ಹೊರಡಲಿಕ್ಕೆ ಗಡಿಬಿಡಿ ಆಗುವಾಗ ಚೆಕ್ ತಂದು ಸಹಿ ಹಾಕುವಂತೆ ಒತ್ತಡ ಹೇರುತ್ತಿದ್ದರು. ಅವ್ಯವಹಾರ ನಡೆದ ಮೇಲೆ ಅವರೆಲ್ಲ ನಾಪತ್ತೆಯಾಗಿದ್ದಾರೆ. ಅವ್ಯವಹಾರ ನಡೆಸದ ನಾನೀಗ ಬಲಿಪಶು ಆಗಿದ್ದೇನೆ. ಕಾಮಗಾರಿ ನೋಡಲು ಕಾರ್ಯದರ್ಶಿಗೆ ಮೌಖಿಕವಾಗಿ ತಿಳಿಸಿದ್ದೆ. ಅವರು ನೋಡದೆ ನಿರ್ಲಕ್ಷ್ಯ ಮಾಡಿದ್ದರಿಂದ ಹೀಗಾಗಿದೆ~ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.