
ಉಳ್ಳಾಲ: `ನಾಗೇಂದ್ರ ಹರಾಯ ತ್ರಿಲೋಚನಾಯ
ಭಸ್ಮ-ಅಂಗ-ರಾಗಾಯ ಮಹೇಶ್ವರಾಯ
ನಿತ್ಯಾಯ ಶುದ್ಧಾಯ ದಿಗಂಬರಾಯ
ತಸ್ಮೈ ನಕಾರಾಯ ನಮ: ಶಿವಾಯ....
ಈ ಶಿವ ಪಂಚಾಕ್ಷರಿ ಸ್ತೋತ್ರ ಗುರುವಾರ ಶಿವರಾತ್ರಿಯ ಪ್ರಯುಕ್ತ ಬಹುತೇಕ ದೇವಾಲಯಗಳಲ್ಲಿ ಮೊಳಗುತ್ತಲೇ ಇರಲಿದೆ. ಶಿವಾಲಯಗಳಲ್ಲಿ ಜಾಗರಣೆಯೊಂದಿಗೆ ಇಂತಹ ಸಂಭ್ರಮ ನಡೆಯುತ್ತಿದ್ದರೆ, ತೊಕ್ಕೊಟ್ಟಿನಲ್ಲಿ ಥರ್ಮಾಕೋಲ್‌ಗಳಿಗೆ ಶಿವಲಿಂಗವಾಗುವ ‘ಭಾಗ್ಯ’ ಒಲಿದು ಬಂದಿದೆ.
ತೊಕ್ಕೊಟ್ಟು ಲಿಟ್ಲ್ ಬರ್ಡ್ ಗ್ರಾಫಿಕ್ಸ್ ತಂಡ ಕಳೆದ ಒಂದು ವಾರದಿಂದ ಜಾಗರಣೆ ನಡೆಸಿ, ಶಿವರಾತ್ರಿಯ ಕಾರ್ಯಕ್ರಮ ಅಚ್ಚುಕಟ್ಟಾಗಿ, ವಿಭಿನ್ನ ಶೈಲಿಯಲ್ಲಿ ನಡೆಸುವ ಸಲುವಾಗಿ 108 ಶಿವಲಿಂಗಗಳನ್ನು ಸಿದ್ಧಪಡಿಸಿದೆ.
ಅಪ್ಪಟ ಶಿಲೆಯ ಕೆತ್ತನೆಯಂತೆಯೇ ಕಂಡುಬರುವ ಶಿವಲಿಂಗಗಳು, ಅಸಲಿಯಾಗಿ ಥರ್ಮಾಕೋಲಿನ ಕೆತ್ತನೆಗಳು. ತೊಕ್ಕೊಟ್ಟುವಿನಲ್ಲಿ ಡಿಟಿಪಿ ಸೆಂಟರ್‍ಅನ್ನು ನಡೆಸುತ್ತಿರುವ ವಿಶ್ವನಾಥ್ ಪಿಲಾರ್ ಅವರ ಕೈಚಳಕದಿಂದ 108 ಶಿವಲಿಂಗಗಳು ರೂಪ ಕಂಡಿದೆ. ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದವರ ತೊಕ್ಕೊಟ್ಟು ಕೇಂದ್ರದಲ್ಲಿ ಶಿವಲಿಂಗಗಳ ತಯಾರಿ ಭರದಿಂದ ಸಾಗಿ ಬುಧವಾರ ಕೆಲಸ ಕೊನೆಗೊಂಡಿದೆ.
ಶಿವರಾತ್ರಿ ಪ್ರಯುಕ್ತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಈ ಬಾರಿ ಮಡಿಕೇರಿ ಕೇಂದ್ರದವರು 108 ಶಿವಲಿಂಗಗಳ ಪ್ರಾತ್ಯಕ್ಷಿಕೆಗಳನ್ನಿಟ್ಟು ವಿಭಿನ್ನ ತರದ ಕಾರ್ಯಕ್ರಮ ನಡೆಸುವುದರೊಂದಿಗೆ ಜನರನ್ನು ಆಕರ್ಷಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ಧಗೊಂಡ 108 ಶಿವಲಿಂಗಗಳನ್ನು ಮಡಿಕೇರಿಗೆ ಸಾಗಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.