ADVERTISEMENT

ದೇವರು, ಮತಾಂತರದ ಹೆಸರಲ್ಲಿ ಜಗಳ ಸಲ್ಲ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 10:40 IST
Last Updated 6 ಫೆಬ್ರುವರಿ 2012, 10:40 IST
ದೇವರು, ಮತಾಂತರದ ಹೆಸರಲ್ಲಿ ಜಗಳ ಸಲ್ಲ
ದೇವರು, ಮತಾಂತರದ ಹೆಸರಲ್ಲಿ ಜಗಳ ಸಲ್ಲ   

ಪುತ್ತೂರು: `ದೇವರ ಹೆಸರಿನಲ್ಲಿ ಮತ್ತು ಮತಾಂತರದ ಹೆಸರಿನಲ್ಲಿ ಜಗಳವಾಗಬಾರದು ಎನ್ನುವುದು ಹಾಗೂ ಹಿಂದೂ ,ಮುಸ್ಲಿಂ ,ಕ್ರಶ್ಚಿಯನ್ ತಾರತಮ್ಯ ನೋಡದೆ ಮನುಷ್ಯನ ಕಥೆಯನ್ನು ಹೇಳುವುದೇ ನನ್ನ ಕಾದಂಬರಿಯ ಉದ್ದೇಶವಾಗಿತ್ತು. ಮಾತುಗಳು ಯಾವತ್ತೂ ಉಳಿಯುವುದಿಲ್ಲ. ಕೊನೆಗೂ ಉಳಿಯುವುದು ಕೃತಿ ಮಾತ್ರ~ ಎಂದು ಸಾಹಿತಿ ಗೋಪಾಲಕೃಷ್ಣ ಪೈ ಹೇಳಿದರು.

ಪುತ್ತೂರಿನ ಅನುರಾಗ ವಠಾರದಲ್ಲಿ ಭಾನುವಾರ ಸಂಜೆ ಕರ್ನಾಟಕ ಸಂಘದ ಆಶ್ರಯದಲ್ಲಿ ನಡೆದ ಸಾಹಿತ್ಯ -ಕಲಾ ಕುಶಲೋಪರಿ ಸಂಸ್ಕೃತಿ -ಸಲ್ಲಾಪ ಕಾರ್ಯಕ್ರಮದಲ್ಲಿ ಪುತ್ತೂರಿನ ಬೊಳುವಾರು ಗೌರಿ ಮಾಧವ ಚಾರಿಟೆಬಲ್ ಟ್ರಸ್ಟ್ ವತಿಯಿಂದ ನೀಡಲಾಗುವ `ಉಗ್ರಾಣ~ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.

ತಮ್ಮ ಕಾದಂಬರಿ `ಸ್ವಪ್ನ ಸಾರಸ್ವತ ` ದಲ್ಲಿ ಮನುಷ್ಯನ ಹುಟ್ಟು ಸಾವಿನ ನಡುವಿನ ಚಿತ್ರಣವಿದ್ದು, ಇದು ಒಂದು ಸಮುದಾಯಕ್ಕೆ ಸೇರಿದ ಕಥಾ ವಸ್ತುವನ್ನೊಳಗೊಂಡಿದ್ದರೂ ಎಲ್ಲೆಡೆಯ ಓದುಗರಿಂದ ಅಭೂತಪೂರ್ವ ಬೆಂಬಲ ದೊರಕಿದೆ. ತನ್ನ ಪರಿಶ್ರಮಕ್ಕೆ ಬೆಲೆ ಬಂದಿದೆ. ಫಲ ಸಿಕ್ಕಿದೆ ಎಂದು ಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಡಂತ್ಯಾರು ಸೆಕ್ರೇಟ್ ಹಾರ್ಟ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಬಿ.ಮಧುಕರ ಮಲ್ಯ ಅವರು ಗೋಪಾಲಕೃಷ್ಣ ಪೈ ಅವರಿಗೆ `ಸ್ವಪ್ನ ಸಾರಸ್ವತ` ಕೃತಿಗಾಗಿ ಈ ಪ್ರಶಸ್ತಿ ಪ್ರದಾನ ಮಾಡಿದರು.

ವಿವೇಕಾನಂದ ಕಾಲೇಜಿನ ಉಪನ್ಯಾಸಕ ರೋಹಿಣಾಕ್ಷ ಅಭಿನಂದನಾ ಭಾಷಣ ಮಾಡಿದರು. ಗೋವಾಕ್ಕೆ ಪೂರ್ಚುಗೀಸರು ದಾಳಿ ನಡೆಸಿದ ಮತ್ತು ಅವರ ವಸಾಹತು ನೀತಿಯ ಬಳಿಕ ಅಲ್ಲಾದ ರಾಜಕೀಯ ಮತ್ತು ಸಾಂಸ್ಕೃತಿಕ ಸ್ಥಾನಪಲ್ಲಟ, ತಮ್ಮ ಧರ್ಮ ಮತ್ತು ನಂಬಿಕೆಯನ್ನು ಉಳಿಸಿಕೊಳ್ಳಲು ಅಲ್ಲಿನ ಸಾರಸ್ವತ ಸಮಾಜದ ವಲಸೆ, ಅವರು ಅನುಭವಿಸಿದ ಯಾತನಾಮಯ ಚರಿತ್ರೆ ಮತ್ತು ವರ್ತಮಾನದ ಸ್ವರೂಪವನ್ನು ಗೋಪಾಲಕೃಷ್ಣ ಪೈ ಅವರ ಕಾದಂಬರಿಯಲ್ಲಿ ಕಾಣಬಹುದು ಎಂದರು.

ಕರ್ನಾಟಕ ಸಂಘದ ವತಿಯಿಂದಲೂ  ಪ್ರಶಸ್ತಿ ಪುರಸ್ಕೃತ ಗೋಪಾಲಕೃಷ್ಣ ಪೈ ಅವರನ್ನು ಸನ್ಮಾನಿಸಲಾಯಿತು.  ಕರ್ನಾಟಕ ಸಂಘದ ಅಧ್ಯಕ್ಷ ಬಿ.ಪುರಂದರ ಭಟ್ , ಗೌರಿ ಮಾಧವ ಚಾರಿಟೆಬಲ್ ಟ್ರಸ್ಟ್‌ನ ಅಧ್ಯಕ್ಷ ರಮಾನಂದ ನಾಯಕ್ , ಟ್ರಸ್ಟ್‌ನ ಗಣಪತಿ ನಾಯಕ್ , ಕರ್ನಾಟಕ ಸಂಘದ ಕಾರ್ಯದರ್ಶಿ ಡಾ.ಎಚ್,ಜಿ.ಶ್ರೀಧರ್, ಉಪನ್ಯಾಸಕ ರಾಕೇಶ್ ಕುಮಾರ್ ಕಮ್ಮಾಜೆ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.