ADVERTISEMENT

ಧರ್ಮ ಸಂಸದ್‌ ಹಿಂದೂ ಸಮಾಜದ ದಿಕ್ಸೂಚಿ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2017, 9:00 IST
Last Updated 23 ಅಕ್ಟೋಬರ್ 2017, 9:00 IST

ಮಂಗಳೂರು: ‘ಉಡುಪಿಯಲ್ಲಿ ಮುಂದಿನ ತಿಂಗಳು ನಡೆಯುವ ಧರ್ಮ ಸಂಸದ್‌ ಹಿಂದೂ ಸಮಾಜದ ದಿಕ್ಸೂಚಿಯಾಗಲಿದೆ. ಅಲ್ಲಿ ಹೊರಬೀಳುವ ಠರಾವು ರಾಮ ಮಂದಿರ ನಿರ್ಮಾಣಕ್ಕೆ ನಾಂದಿ ಆಗಲಿದೆ’ ಎಂದು ಗುರು‍ಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.

ಕದ್ರಿ ಮಲ್ಲಿಕಟ್ಟೆಯ ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ಆರಂಭಿಸಲಾಗಿರುವ ಧರ್ಮ ಸಂಸದ್‌ ಕಾರ್ಯಾಲಯದ ಉದ್ಘಾಟನಾ ಸಮಾರಂಭದಲ್ಲಿ  ಭಾನುವಾರ ಅವರು ಮಾತನಾಡಿದರು.

‘ಹಿಂದೂಗಳಿಗೆ ಹಿಂದೂಎಂದು ಹೇಳಿಕೊಳ್ಳುವುದಕ್ಕೆ ಶಕ್ತಿ ತುಂಬುತ್ತಿರುವ ಹಿಂದೂ ಸಂಘಟನೆಯೇ ಪ್ರಮುಖ ವೇದಿಕೆ. ಧರ್ಮ ಸಂಸದ್‌ನಲ್ಲಿ 2 ಲಕ್ಷಕ್ಕೂ ಅಧಿಕ ಸಂಖ್ಯೆಯ ಹಿಂದೂಗಳು ಪಾಲ್ಗೊಳ್ಳುವ ಮೂಲಕ ಹಿಂದೂ ಸಂಘಟನೆಯ ಶಕ್ತಿಯನ್ನು ಬಿಂಬಿಸಬೇಕು. ಧರ್ಮ ಸಂಸದ್‌ನಲ್ಲಿ ಬಾಬಾ ರಾಮ್‌ದೇವ್‌, ಯೋಗಿ ಆದಿತ್ಯನಾಥ ಸೇರಿದಂತೆ ಧರ್ಮ ಸಂತರು, ಮಠಾಧೀಶರು  ಪಾಲ್ಗೊಳ್ಳಲಿದ್ದಾರೆ’ ಎಂದು ಅವರು ಹೇಳಿದರು.

ADVERTISEMENT

ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸಹ ಸಂಘಚಾಲಕ ಡಾ.ವಾಮನ್‌ ಶೆಣೈ, ‘ಧರ್ಮ ಸಂಸದ್‌ನಲ್ಲಿ 3 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಪೀಠಾಧಿಶರು, ಸಂತರು ಪಾಲ್ಗೊಳ್ಳಲಿದ್ದು. ಇದೊಂದು ಚಾರಿತ್ರಿಕ ಕಾರ್ಯಕ್ರಮವಾಗಲಿದೆ. ಪೇಜಾವರ ಸ್ವಾಮೀಜಿ ಶಕ್ತಿಯ ಕೇಂದ್ರ ಬಿಂದುವಾಗಿ ನಿಂತಿದ್ದಾರೆ. ಜಾತ್ಯತೀತದ ಹೆಸರಿನಲ್ಲಿ ರಾಜಕಾರಣ ಮಾಡುವ ವಿರೋಧಿಗಳಿಗೆ ಇದರಿಂದ ಉತ್ತಮ ಸಂದೇಶ ರವಾನೆ ಆಗಲಿದೆ’ ಎಂದರು.

ಬಜರಂಗದಳದ ಪ್ರಾಂತ ಸಂಯೋಜಕ ಶರಣ್‌ ಪಂಪವೆಲ್‌ ಪ್ರಾಸ್ತಾವಿಕ ಮಾತನಾಡಿ, ‘ನವೆಂಬರ್‌ 24 ಮತ್ತು 25ರಂದು ಸಂತರ ಸಭೆಗಳು ನಡೆಯಲಿವೆ. 26 ರಂದು ಎಲ್ಲ ಜಾತಿಯ ಪ್ರಮುಖರ ಸಭೆ ನಡೆಯಲಿದ್ದು, ಮಧ್ಯಾಹ್ನ  ವಿರಾಟ್‌ ಹಿಂದೂ ಸಮಾಜೋತ್ಸವ  ಜರುಗಲಿದೆ.

1 ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ ಇದೆ. ಉಡುಪಿಯಲ್ಲಿ ನಡೆಯುತ್ತಿರುವ 2ನೇ ಧರ್ಮ ಸಂಸದ್‌ ಇದಾಗಿದ್ದು, ಇಲ್ಲಿ ತೆಗೆದುಕೊಳ್ಳುವ ಎಲ್ಲ ನಿರ್ಣಯಗಳು ಹಿಂದೂಗಳ ಉನ್ನತಿಗೆ ಸಾಕ್ಷಿ ಆಗಲಿವೆ’ ಎಂದರು. ವಿಎಚ್‌ಪಿ ಜಿಲ್ಲಾ ಅಧ್ಯಕ್ಷ ಜಗದೀಶ್‌ ಶೇಣವ, ಸುನೀಲ್‌ ಆಚಾರ್ಯ, ನಾಗರಾಜ ಆಚಾರ್ಯ, ಬಾಲಕೃಷ್ಣ ಕೊಟ್ಟಾರ, ಪುರುಷೋತ್ತಮ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.