ADVERTISEMENT

ನಕ್ಸಲ್ ಬೆಂಬಲ ನೆಪದಲ್ಲಿ ಅಮಾಯಕರ ಬಂಧನ; ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2012, 9:00 IST
Last Updated 8 ಮಾರ್ಚ್ 2012, 9:00 IST

ಬೆಳ್ತಂಗಡಿ: ಪೊಲೀಸರು ನಕ್ಸಲರನ್ನು ನಿಗ್ರಹಿಸುವ ಬದಲು ನಕ್ಸಲರನ್ನು ಸೃಷ್ಟಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಬುಡಕಟ್ಟು ಆದಿವಾಸಿಗಳ ಸಮಾನ್ವಯ ಸಮಿತಿಯ ರಾಜ್ಯ ಸಂಚಾಲಕ ಭರತ್ ಆರೋಪಿಸಿದ್ದಾರೆ.
ಇಲ್ಲಿನ ತಾಲ್ಲೂಕು ಕಚೇರಿ ಎದುರು ಬುಧವಾರ ನಡೆದ ಶಂಕಿತ ನಕ್ಸಲ್ ಬೆಂಬಲಿಗರ ಬಂಧನ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಅಮಾಯಕ ಆದಿವಾಸಿಗಳ ಮೇಲೆ ಸರ್ಕಾರ ನಿರಂತರ ದೌರ್ಜನ್ಯ ನಡೆಸುತ್ತಿದೆ. ಇದೀಗ ನಕ್ಸಲರ ಹೆಸರಿನಲ್ಲಿ ಆದಿವಾಸಿಗಳ ಹಕ್ಕುಗಳನ್ನು ಸರ್ಕಾರ ಕಸಿದುಕೊಳ್ಳುತ್ತಿದೆ ಎಂದು ಅವರು ದೂರಿದರು. ಅರಣ್ಯ ಹಕ್ಕುಗಳ ಅಡಿಯಲ್ಲಿ ಮೂಲ ನಿವಾಸಿಗಳಿಗೆ ಜಮೀನು ಹಂಚುವ ಬದಲು ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಅಮಾಯಕ ವಿದ್ಯಾರ್ಥಿ ವಿಠಲ ಮಲೆಕುಡಿಯ ಅವರನ್ನು ನಕ್ಸಲ್ ಎಂದು ಚಿತ್ರಿಸಿ ಹಿಂಸೆ ನೀಡುತ್ತಿರುವುದನ್ನು ಅವರು ತೀವ್ರವಾಗಿ ಖಂಡಿಸಿದರು.

ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಮಾತನಾಡಿ, ವಿಠಲ ಮಲೆಕುಡಿಯ ಮತ್ತು ಕುಟುಂಬದವರಿಗೆ ನ್ಯಾಯ ದೊರಕದಿದ್ದಲ್ಲಿ ಮುಂದಿನ ವಾರ ಮಂಗಳೂರಿನಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ವಕೀಲ ಬಿ.ಎಂ ಭಟ್, ಶಿವಕುಮಾರ್, ಎಲ್.ಶೇಖರ್, ಸುಕನ್ಯಾ ಮೊದಲಾದವರು ಮಾತನಾಡಿ ಪೊಲೀಸರ ದೌರ್ಜನ್ಯ ಖಂಡಿಸಿದರು.ಅಮಾಯಕರ ಮೇಲೆ ಹಾಕಿದ ಸುಳ್ಳು ಮೊಕದ್ದಮೆ ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿದರು.ಬೆಳ್ತಂಗಡಿ ತಹಶೀಲ್ದಾರ್ ಮೂಲಕ ಐಜಿಪಿ ಅವರಿಗೆ ಮನವಿ ಸಲ್ಲಿಸಲಾಯಿತು.

ತಾಯಿಯ ಅಳಲು: ವಿದ್ಯಾರ್ಥಿ ವಿಠಲ ಮಲೆಕುಡಿಯ ಅವರ ತಾಯಿ ಹೊನ್ನಮ್ಮ ಮಾಧ್ಯಮದವರೊಂದಿಗೆ ಮಾತನಾಡಿ, ಸುಳ್ಳು ಪ್ರಕರಣ ದಾಖಲಿಸಿ ಅಮಾಯಕನಾದ ತಮ್ಮ ಮಗನ ಭವಿಷ್ಯವನ್ನು ಪೊಲೀಸರು ಹಾಳು ಮಾಡುತ್ತ್ದ್ದಿದಾರೆ ಎಂದು ದುಃಖಿಸಿದರು.

ವಿದ್ಯಾರ್ಥಿ ಪರ ಐಜಿಪಿಗೆ ಮನವಿ
ಮಂಗಳೂರು:
ನಕ್ಸಲರಿಗೆ ಬೆಂಬಲ ನೀಡಿದ ಆರೋಪದಲ್ಲಿ ಪೊಲೀಸರು ಬಂಧಿಸಿರುವರ ಮಂಗಳೂರು ವಿವಿ ವಿದ್ಯಾರ್ಥಿ ವಿಠಲ ಅವರನ್ನು ತಕ್ಷಣ ಬಿಡುಗಡೆಗೊಳಿಸಿ ಅವರ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಿಕೊಡಬೇಕು ಎಂದು ವಿವಿ ವಿದ್ಯಾರ್ಥಿಗಳು ಐಜಿಪಿ ಪ್ರತಾಪ ರೆಡ್ಡಿ ಅವರಲ್ಲಿ ಮನವಿ ಮಾಡಿದ್ದಾರೆ.

ಎಸ್‌ಎಫ್‌ಐ ರಾಜ್ಯ ಸಹಕಾರ್ಯದರ್ಶಿ ಜೀವನ್‌ರಾಜ್ ಕುತ್ತಾರ್ ನೇತೃತ್ವದಲ್ಲಿ ಐಜಿಪಿ ಬಳಿಗೆ ಬುಧವಾರ ತೆರಳಿದ ವಿದ್ಯಾರ್ಥಿಗಳ ನಿಯೋಗ, ವಿಠಲ ಅವರು ಉತ್ತಮ ವಿದ್ಯಾರ್ಥಿಯಾಗಿದ್ದು, ಕಡು ಬಡತನದಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ, ಅವರ ಮೇಲಿನ ಆರೋಪಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ಕೂಡಲೇ ಅವರನ್ನು ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.