ADVERTISEMENT

ನಗದಾಗದ ಪರಿಹಾರ ಚೆಕ್: ಫಲಾನುಭವಿಗೇ ರೂ. 155 ದಂಡ!

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 6:15 IST
Last Updated 13 ಜನವರಿ 2012, 6:15 IST

ಬಡಗಎಡಪದವು (ಮೂಡುಬಿದಿರೆ): ಸರ್ಕಾರದ ಖಜಾನೆಯಲ್ಲಿ ಹಣವಿಲ್ಲದೆ ಬಡಗಎಡಪದವು ಗ್ರಾಮದ ವೃದ್ಧೆ ಚೆನ್ನಮ್ಮ  ಎಂಬವರಿಗೆ ಮಂಗಳೂರು ತಾಲ್ಲೂಕು ತಹಶೀಲ್ದಾರ್ ಅವರು ಪ್ರಾಕೃತಿಕ ವಿಕೋಪ ಪರಿಹಾರದಡಿಯಲ್ಲಿ ನೀಡಿದ್ದ 1500 ರೂಪಾಯಿ ಮೊತ್ತದ ಚೆಕ್ ಬ್ಯಾಂಕ್‌ನಲ್ಲಿ ನಗದೀಕರಣವಾಗದೆ ವಾಪಾಸು ಬಂದಿದ್ದು, ಈ ಕಾರಣಕ್ಕಾಗಿ  ಫಲಾನುಭವಿಯೇ ಬ್ಯಾಂಕಿಗೆ 155 ರೂಪಾಯಿ ದಂಡ ಪಾವತಿಸಿದ ಅಪರೂಪದ ಘಟನೆ ನಡೆದಿದೆ.

ಬಡಗ ಎಡಪದವು ಗ್ರಾಮದ ಚೆನ್ನಮ್ಮ(70) ಎಂಬವರ ಮನೆ ಎರಡು ವರ್ಷದ ಹಿಂದೆ ಗಾಳಿ ಮಳೆಗೆ ಹಾನಿಗೊಂಡಿತ್ತು. ಬಿಪಿಎಲ್ ಚೀಟಿ ಹೊಂದಿರುವ ಅವರ ಮನೆಯಲ್ಲಿ ಮಗಳು ಹಾಗೂ ಮೂವರು ಸಣ್ಣ ಪ್ರಾಯದ ಮೊಮ್ಮಕ್ಕಳಿದ್ದಾರೆ. ಬಡಗ ಎಡಪದವು ಗ್ರಾಮದ ಗ್ರಾಮ ಲೆಕ್ಕಿಗರು ಇವರ ಮನೆಗೆ ಹಾನಿಯಾದ ಬಗ್ಗೆ ಸಮೀಕ್ಷೆ ನಡೆಸಿ ತಹಶೀಲ್ದಾರರಿಗೆ ವರದಿ ಸಲ್ಲಿಸಿದ್ದರು.

ಈ ವರದಿಯ ಆಧಾರದಲ್ಲಿ  ಮಂಗಳೂರು ತಹಶೀಲ್ದಾರ್ ಅವರು ಕಳೆದ ನವೆಂಬರ್ 30ರಂದು 1500 ರೂಪಾಯಿಯ ಚೆಕ್ಕನ್ನು ಚೆನ್ನಮ್ಮ ಹೆಸರಿಗೆ ಕಳುಹಿಸಿದ್ದರು.

ಡಿಸೆಂಬರ್ 27ಕ್ಕೆ ಗ್ರಾಮಕರಣಿಕರ ಕಚೇರಿ ಸಿಬ್ಬಂದಿ ಈ ಚೆಕ್ಕನ್ನು ತಂದು ಚೆನ್ನಮ್ಮರಿಗೆ ನೀಡಿದ್ದರು. ಚೆನ್ನಮ್ಮ ಈ ಚೆಕ್ಕನ್ನು ಬಡಗ ಎಡಪದವಿನ ಅಂಚೆ ಕಚೇರಿಯಲ್ಲಿರುವ ತಮ್ಮ ಅಂಚೆ ಖಾತೆ ಮೂಲಕ ಕಲೆಕ್ಷನ್‌ಗೆ ಹಾಕಿದ್ದರು. ಸರ್ಕಾರದ ಖಜಾನೆ ಖಾತೆಯಾಗಿರುವ ಮಂಗಳೂರಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖಾ ಖಾತೆಯಲ್ಲಿ ಹಣವಿಲ್ಲದೆ ಚೆನ್ನಮ್ಮರ ಚೆಕ್ ನಗದೀಕರಣವಾಗದೆ ವಾಪಾಸು ಬಂದಿದೆ.

ಸರ್ಕಾರದ ಖಜಾನೆಯಲ್ಲಿ ಹಣವಿಲ್ಲದ ತಪ್ಪಿಗೆ ಚೆನ್ನಮ್ಮರಿಗೆ ಸ್ಟೇಟ್ ಬ್ಯಾಂಕ್ ಇಂಡಿಯಾ 100 ರೂಪಾಯಿ ಹಾಗೂ ಬಡಗೆಡಪದವು ಅಂಚೆ ಕಚೇರಿ 55ರೂಪಾಯಿ ದಂಡ ವಿಧಿಸಿವೆ. ಚೆನ್ನಮ್ಮರ ಅಂಚೆ ಖಾತೆಯಲ್ಲಿ ಇಷ್ಟೊಂದು ಹಣವಿರಲಿಲ್ಲ. ಕೊನೆಗೆ ಮನೆ ಹತ್ತಿರದ ವ್ಯಕ್ತಿಯೊಬ್ಬರಿಂದ ಹಣ ಸಾಲ ಪಡಕೊಂಡು ದಂಡ ಪಾವತಿಸಿ ಚೆನ್ನಮ ಚೆಕ್ಕನ್ನು ವಾಪಾಸು ಪಡಕೊಂಡಿದ್ದಾರೆ.

ಆದರೆ ಮತ್ತೊಮ್ಮ ಈ ಚೆಕ್ಕನ್ನು ನಗದೀಕರಣಕ್ಕೆ ಕಳಿಸಿ ಸರ್ಕಾರದ ಖಜಾನೆಯಲ್ಲಿ ಹಣವಿಲ್ಲದಿದ್ದರೆ ಎಲ್ಲಿ ಮತ್ತೊಮ್ಮೆ ಬ್ಯಾಂಕ್ ತನಗೆ ದಂಡ ವಿಧಿಸಬಹುದೆಂಬ ಆತಂಕದಲ್ಲಿ ಚೆನ್ನಮ್ಮ ಅವರು ಈ ಚೆಕ್ಕನ್ನು ಮನೆಯಲ್ಲೇ ಇರಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.