ADVERTISEMENT

ನಗರದಲ್ಲಿ ಉತ್ಸಾಹ ಜೋರು, ಮತದಾನ ಕಡಿಮೆ

ರಜೆಯ ಮೂಡ್‌ನಲ್ಲಿ ಮಂಗಳೂರು ನಗರ, ಮತದಾರ ಸ್ನೇಹಿ ಮತಗಟ್ಟೆ

​ಪ್ರಜಾವಾಣಿ ವಾರ್ತೆ
Published 13 ಮೇ 2018, 6:54 IST
Last Updated 13 ಮೇ 2018, 6:54 IST

ಮಂಗಳೂರು: ಜಿಲ್ಲೆಯ ಎಂಟು ಕ್ಷೇತ್ರಗಳ ಪೈಕಿ ಶೇ 67.47 ಮತದಾನ ನಡೆಯುವ ಮೂಲಕ ಅತೀ ಕಡಿಮೆ ಮತದಾನ ನಡೆದ ಕ್ಷೇತ್ರ ಎಂಬ ಕಪ್ಪುಚುಕ್ಕೆಯನ್ನು ಮಂಗಳೂರು ದಕ್ಷಿಣ ಕ್ಷೇತ್ರ ಅಂಟಿಸಿಕೊಂಡರೂ, ಮತದಾನ ಪ್ರಕ್ರಿಯೆ ನಗರದಲ್ಲಿ ಶಾಂತ ರೀತಿಯಲ್ಲಿ ಸಾಗಿತು. ಅಲ್ಲದೆ ಕಳೆದ ಬಾರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆದಿದೆ ಎನ್ನುವುದು ಸಮಾಧಾನದ ಸಂಗತಿ.

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಶೇ 74.55 ಮತದಾನ ನಡೆದಿದ್ದರೆ, ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಅಂದರೆ ಶೇ 83  ಮತ್ತು ಬಂಟ್ವಾಳದಲ್ಲಿ  ಶೇ 81. 89 ಮತದಾನ ನಡೆದಿದೆ. 

ಪ್ರಥಮಬಾರಿಗೆ ಮತದಾನ ಮಾಡುವವರು ಸೇರಿದಂತೆ ಹಲವರು ಶನಿವಾರ ಮುಂಜಾನೆಯೇ ಮತ ಹಾಕಿ ಶಾಯಿ ಹಾಕಿದ ಬೆರಳನ್ನು ತೋರಿಸಿದ ಫೋಟೋಗಳನ್ನು ವಾಟ್ಸ್‌ ಆ್ಯಪ್‌ ಸ್ಟೇಟಸ್‌ಗೆ, ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡಿ ತಮ್ಮ ಸ್ನೇಹಿತರನ್ನು, ಬಂಧುಗಳನ್ನು ಮತದಾನ ಮಾಡುವಂತೆ ಹುರಿದುಂಬಿಸಿದರು.

ADVERTISEMENT

ರೊಸಾರಿಯೋ ನಿವಾಸಿ 100 ವರ್ಷ ವಯಸ್ಸಿನ ಗ್ಲೇಡಿಯಸ್‌ ಡಿಸೋಜ ಸ್ಟೇಟ್‌ಬ್ಯಾಂಕ್‌ ಬಳಿ ಮತಗಟ್ಟೆಗೆ ಬಂದು ಮತ ಚಲಾಯಿಸಿದರು.

ಮದುವೆಯ ಬೆಳ್ಳನೆಯ ಗೌನ್‌ನಲ್ಲಿ ಬೋಂದೆಲ್‌ನ ಸೇಂಟ್‌ ಲಾರೆನಸ್‌ ಆಂಗ್ಲ ಮಾಧ್ಯಮ ಶಾಲೆಯ ಮತಗಟ್ಟೆಗೆ ಬಂದ ವಿಯೋಲಾ ಮರಿಯಾ ಫರ್ನಾಂಡಿಸ್‌ ಮತ ಚಲಾಯಿಸಿ, ಅಲ್ಲಿದ್ದ ಮಾಧ್ಯಮದವರೊಡನೆ ಮಾತನಾಡಿದರು. ‘ಮದುವೆಯ ದಿನವೇ ಮತದಾನ ಮಾಡಲು ಖುಷಿಯಾಗುತ್ತಿದೆ’ ಎಂದು ಹೇಳಿದ ಅವರು ತಮ್ಮ ಕುಟುಂಬದವರೊಡನೆ ಬಂದು ಮತದಾನದ ಪ್ರಕ್ರಿಯೆಯನ್ನು ಸಂಭ್ರಮಿಸಿದರು.  ಅವರ ಸಂಭ್ರಮಕ್ಕೆ ಫೇಸ್‌ಬುಕ್‌ನಲ್ಲಿ ಶ್ಲಾಘನೆಯ ಮಹಾಪೂರವೇ ಹರಿದಿದೆ.

ನಗರದ ಉರ್ವ ಬಳಿ ಇರುವ ಸೇಂಟ್‌ ಅಲೋಶಿಯಸ್‌ ಪ್ರೌಢಶಾಲೆಯಲ್ಲಿ ಸಂಸದ ನಳಿನ್‌ಕುಮಾರ್‌ ಕಟೀಲು ಮತ ಚಲಾಯಿಸಿದರೆ, ಕದ್ರಿ ಪದವು ಮತಗಟ್ಟೆಯಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ವೈ. ಭರತ್‌ ಶೆಟ್ಟಿ ಪತ್ನಿ ಡಾ. ಅಸಾವರಿ ಶೆಟ್ಟಿ ಅವರೊಡನೆ ಮತ ಚಲಾಯಿಸಿದರು. ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್‌ ಅವರು ಗಾಂಧಿನಗರ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಪತ್ನಿ ವೃಂದಾ ಕಾಮತ್‌ ಅವರೊಂದಿಗೆ ಬಂದು ಮತ ಹಾಕಿದರು. ಶಾಸಕ ಜೆ. ಆರ್. ಲೋಬೊ ಅವರು ಬೆಂದೂರು ಕ್ರಾಸ್‌ನ ಸೇಂಟ್‌ ಸೆಬೆಸ್ಟಿಯನ್‌ ಶಾಲೆಯಲ್ಲಿ ಪತ್ನಿ ಫಿಲೋಮಿನಾ ಲೋಬೊ ಅವರೊಡನೆ ಮತ ಹಾಕಿದರು.

ಚುನಾವಣಾ ಆಯೋಗ ಈ ಬಾರಿ ಮತಗಟ್ಟೆಗಳನ್ನು ಮತದಾರ ಸ್ನೇಹಿ ಆಗಿಸಲು ಪ್ರಯತ್ನಿಸಿದ್ದು ಹಲವೆಡೆ ಶ್ಲಾಘನೆ ವ್ಯಕ್ತವಾಯಿತು. ಉರ್ವದ ಸೇಂಟ್‌ ಅಲೋಶಿಯಸ್‌ ಶಾಲೆ, ಲೇಡಿಹಿಲ್‌ ವಿಕ್ಟೋರಿಯಾ ಶಾಲೆ ಮತ್ತು ಬಲ್ಮಠ ಶಾಲೆಯಲ್ಲಿ ಪಿಂಕ್‌ ಮತಗಟ್ಟೆಗಳು ಮತದಾರರನ್ನು ಆಕರ್ಷಿಸಿದವು.

ಸುರತ್ಕಲ್‌ನ ಕೊರಗ ಬುಡಕಟ್ಟು ಸಮುದಾಯದ ಮದ್ಯ ಶಾಲೆಯಲ್ಲಿ ಮತಗಟ್ಟೆಯನ್ನು ಸಾಂಪ್ರದಾಯಿಕ ವಸ್ತುಗಳಿಂದ ಸಿಂಗರಿಸಲಾಗಿತ್ತು. ಎತ್ನಿಕ್‌ ಮತಗಟ್ಟೆ ಎಂದು ಗುರುತಿಸಿ, ತೆಂಗಿನ ಎಲೆ, ಬಿಳಿಲಿನ ವಿವಿಧ ವಿನ್ಯಾಸಗಳಿಂದ ಮತಗಟ್ಟೆಯನ್ನು ಸಿಂಗರಿಸಲಾಗಿತ್ತು. ಮಾದರಿ ಮತಗಟ್ಟೆಗಳಲ್ಲಿ ಮತದಾರರಿಗೆ ಟೋಕನ್‌ಗಳನ್ನು ನೀಡಿ, ಸರತಿಯ ಸಾಲಿನಲ್ಲಿ ನಿಲ್ಲುವ ತಲೆನೋವು ತಪ್ಪಿತು. ಮತ್ತೆ ಕೆಲವೆಡೆ ಬಿಸಿಲು ತಡೆಯಲು ಶಾಮಿಯಾನ ಹಾಕಿ ತಂಪಾಗಿಸಲಾಗಿತ್ತು.

ಮಳೆರಾಯ ಶನಿವಾರ ಮತದಾರರ ಮೇಲೆ ಕೃಪೆದೋರಿದ್ದು, ಉತ್ತಮ ವಾತಾವರಣ ಇತ್ತು. ರಜಾದಿನದ ಮೂಡ್‌ನಲ್ಲಿದ್ದ ನಗರದ ಹಲವು ಅಂಗಡಿ ಮುಂಗಟ್ಟುಗಳೂ ಮುಚ್ಚಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.