ADVERTISEMENT

ನಿರೀಕ್ಷೆ ಮೂಡಿಸಿದ ಮುಂಗಾರು ಪೂರ್ವ ಮಳೆ

ಸುಳ್ಯ ತಾಲ್ಲೂಕಿನಲ್ಲಿ ವಾಡಿಕೆಗಿಂತ ಅಧಿಕ ಮಳೆ

ಚಿದಂಬರ ಪ್ರಸಾದ್
Published 19 ಮೇ 2018, 6:37 IST
Last Updated 19 ಮೇ 2018, 6:37 IST
ನಿರೀಕ್ಷೆ ಮೂಡಿಸಿದ ಮುಂಗಾರು ಪೂರ್ವ ಮಳೆ
ನಿರೀಕ್ಷೆ ಮೂಡಿಸಿದ ಮುಂಗಾರು ಪೂರ್ವ ಮಳೆ   

ಮಂಗಳೂರು: ಕಳೆದ ಎರಡು ವರ್ಷಗಳಿಂದ ಅವಕೃಪೆಯಿಂದ ತತ್ತರಿಸಿದ್ದ ಜಿಲ್ಲೆಗೆ ಈ ಬಾರಿ ವರುಣನ ಕೃಪೆ ಸಿಕ್ಕಿದೆ. ಉತ್ತಮ ಮುಂಗಾರು ಪೂರ್ವ ಮಳೆ ಬಿದ್ದಿರುವುದರಿಂದ ನೆಮ್ಮದಿ ತರಿಸಿದೆ. ಮಳೆಯಿಂದಾಗಿ ಕೃಷಿಕರು ತುಸು ಸಂತಸದಲ್ಲಿದ್ದರೆ, ನಗರದ ನಾಗರಿಕರು ಕುಡಿಯುವ ನೀರಿನ ಸಮಸ್ಯೆಯಿಂದ ಹೊರಬರುವಂತಾಗಿದೆ.

ಕಳೆದ ವರ್ಷ ಬರದ ಛಾಯೆಯಲ್ಲಿ ನಲುಗಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರಿಗಿಂತ ಮುಂಚಿತವಾಗಿಯೇ ಒಳ್ಳೆಯ ಮಳೆ ಸುರಿದಿದ್ದು, ಕೃಷಿ ಚಟುವಟಿಕೆಗೆ ಸಿದ್ಧತೆಗಳು ಆರಂಭಿಸಲು ವೇದಿಕೆ ನಿರ್ಮಾಣವಾಗಿದೆ.

ಒಳಹರಿವು ಸ್ಥಗಿತಗೊಂಡಿದ್ದ ನೇತ್ರಾವತಿಯಲ್ಲಿ ಮಳೆಯಿಂದಾಗಿ ನೀರಿನ ಹರಿವು ಆರಂಭವಾಗಿದೆ. ಹೀಗಾಗಿ ಎಎಂಆರ್‌ ಜಲಾಶಯ 5 ಮೀಟರ್‌ ಹಾಗೂ ತುಂಬೆ ಜಲಾಶಯದಲ್ಲಿ 6 ಮೀಟರ್‌ ನೀರು ಸಂಗ್ರಹವಾಗಿದೆ. ಮುಂಗಾರು ಪೂರ್ವ ಮಳೆಯಿಂದಾಗಿ ಈ ಬಾರಿ ನಗರಕ್ಕೆ ಕುಡಿಯುವ ನೀರಿನ ಯಾವುದೇ ಸಮಸ್ಯೆ ಎದುರಾಗಿಲ್ಲ.

ADVERTISEMENT

ಈ ವರ್ಷ ಜನವರಿಯಿಂದ ಮೇ 18ರವರೆಗೆ ಸುಳ್ಯ ತಾಲ್ಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದ್ದರೆ, ಬಂಟ್ವಾಳ ತಾಲ್ಲೂಕಿನಲ್ಲಿ ಅತ್ಯಂತ ಕಡಿಮೆ ಮಳೆಯಾಗಿದೆ. ಸುಳ್ಯ ತಾಲ್ಲೂಕಿನಲ್ಲಿ 212 ಮಿ.ಮೀ. ವಾಡಿಕೆ ಮಳೆ ಆಗಬೇಕಿದ್ದು, ಈವರೆಗೆ 230 ಮಿ.ಮೀ. ಮಳೆ ಸುರಿದಿದೆ.

ಜಿಲ್ಲೆಯ ಸರಾಸರಿಯನ್ನು ಗಮನಿಸಿದರೂ, ಕಳೆದ ವರ್ಷಕ್ಕೆ ಹೋಲಿಸಿದರೆ ಉತ್ತಮ ಮಳೆ ಸುರಿದಿದೆ. ಜನವರಿಯಿಂದ ಮೇವರೆಗೆ ಜಿಲ್ಲೆಯಲ್ಲಿ 234.4 ಮೀ.ಮೀ. ವಾಡಿಕೆ ಮಳೆ ಆಗಬೇಕು. ಈ ವರ್ಷ 196ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕೇವಲ 67.1 ಮಿ.ಮೀ. ಮಳೆ ದಾಖಲಾಗಿತ್ತು.

ಮೊದಲ ಬಾರಿ ಬರದ ಛಾಯೆ: ಮಳೆಗೆ ಹೆಸರಾದ ಕರಾವಳಿಯಲ್ಲೂ ಕಳೆದ ಬಾರಿ ಬರದ ಛಾಯೆ ಆವರಿಸಿತ್ತು. ಜಿಲ್ಲೆಯ ಮಂಗಳೂರು ಮತ್ತು ಬಂಟ್ವಾಳ ತಾಲ್ಲೂಕುಗಳು ಬರಪೀಡಿತ ಎಂದು ಸರ್ಕಾರವೇ ಘೋಷಣೆ ಮಾಡಿತ್ತು.

ಮುಂಗಾರು ಹಂಗಾಮಿನಲ್ಲಿ ವಾಡಿಕೆಯಂತೆ 3,573 ಮಿ.ಮೀ. ಮಳೆ ಆಗಬೇಕು. ಆದರೆ, ಕಳೆದ ವರ್ಷ ಜನವರಿಯಿಂದ ಸೆಪ್ಟೆಂಬರ್‌ವರೆಗಿನ ಮುಂಗಾರು ಹಂಗಾಮಿನಲ್ಲಿ 2,758.4 ಮಿ.ಮೀ. ಮಳೆ ಬಿದ್ದಿತ್ತು. ಹಿಂಗಾರು ಹಂಗಾಮಿನಲ್ಲೂ ಕೇವಲ 76.5 ಮಿ.ಮೀ. ಮಳೆಯಾಗಿದ್ದು, ಇಡೀ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿತ್ತು.

ಜಿಲ್ಲೆಯಲ್ಲಿ ಸುಗ್ಗಿ ಬೆಳೆ ಭತ್ತದ ಬಿತ್ತನೆಗೆ 20 ಸಾವಿರ ಹೆಕ್ಟೇರ್ ಗುರಿ ಇದ್ದರೂ, ಹಿಂಗಾರು ಮಳೆ ಕೊರತೆಯಿಂದಾಗಿ 14 ಸಾವಿರ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ ಸಾಧ್ಯವಾಗಿತ್ತು. 2016 ರಲ್ಲಿಯೂ 24 ಸಾವಿರ ಹೆಕ್ಟೇರ್ ಗುರಿಯಲ್ಲಿ 19 ಸಾವಿರ ಹೆಕ್ಟೇರ್ ಸಾಧನೆಯಾಗಿತ್ತು. ಮಳೆಯ ಕೊರತೆಯಿಂದಾಗಿ ಕಳೆದ ಬಾರಿಯ ಏಣಿಲು ಬೆಳೆಯ 29 ಸಾವಿರ ಹೆಕ್ಟೇರ್ ಭತ್ತದ ಬಿತ್ತನೆ ಗುರಿ ಮುಟ್ಟುವುದು ಸಾಧ್ಯವಾಗಿರಲಿಲ್ಲ.

ಇದರ ಜತೆಗೆ ಜಿಲ್ಲೆಯ ಪ್ರಮುಖ ಬೆಳೆಯಾದ ತೆಂಗು ಮತ್ತು ಅಡಿಕೆಯ ಇಳುವರಿಯಲ್ಲೂ ಶೇ 50 ರಷ್ಟು ಕೊರತೆ ಉಂಟಾಗಿತ್ತು. ನೀರಿನ ಕೊರತೆಯಿಂದ ಬಹುತೇಕ ಅಡಿಕೆ, ತೆಂಗು ಮರಗಳು ಒಣಗಿದ್ದವು.

ಮಂಗಳೂರಿನಲ್ಲಿ ಭಾರಿ ಮಳೆ: ಮರ ಬಿದ್ದು ಕಾರಿಗಳಿಗೆ ಹಾನಿ

ಮಂಗಳೂರು: ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಗುರುವಾರ ರಾತ್ರಿ ಭಾರಿ ಮಳೆ ಸುರಿದಿದೆ. ರಾತ್ರಿ 12 ಗಂಟೆಗೆ ಆರಂಭವಾದ ಗುಡುಗು ಸಹಿತ ಮಳೆ, 2 ಗಂಟೆಯವರೆಗೂ ಮುಂದುವರಿದಿತ್ತು.

ಗಾಳಿಯಿಂದ ಕೂಡಿದ ಮಳೆ ಸುರಿದಿದ್ದರಿಂದ ನಗರದ ಅತ್ತಾವರದ ಬಾಬುಗುಡ್ಡೆಯಲ್ಲಿ ದೊಡ್ಡ ಮರವೊಂದು ಉರುಳಿ ಬಿದ್ದಿದೆ. ಇದರಿಂದ ನಾಲ್ಕು ಕಾರುಗಳು ಜಖಂಗೊಂಡಿದ್ದು, ವಿದ್ಯುತ್‌ ಪರಿವರ್ತಕಕ್ಕೂ ಹಾನಿಯಾಗಿದೆ. ಮೂರು ವಿದ್ಯುತ್‌ ಕಂಬಗಳ ಮುರಿದು ಬಿದ್ದಿವೆ.

ರಾತ್ರಿ ವೇಳೆ ಈ ಘಟನೆ ನಡೆದಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಬೆಳಿಗ್ಗೆಯಿಂದಲೇ ಮರ ತೆರವು ಕಾರ್ಯಾಚರಣೆ ನಡೆಸಿದರು.

ಮಂಗಳೂರು ತಾಲ್ಲೂಕಿನಲ್ಲಿ 51.7, ಬೆಳ್ತಂಗಡಿ ತಾಲ್ಲೂಕಿನಲ್ಲಿ 17.6, ಪುತ್ತೂರಿನಲ್ಲಿ 10.1, ಬಂಟ್ವಾಳದಲ್ಲಿ 2.8 ಹಾಗೂ ಸುಳ್ಯ ತಾಲ್ಲೂಕಿನಲ್ಲಿ 2.1 ಮಿ.ಮೀ. ಮಳೆಯಾಗಿದೆ. ಉಡುಪಿ ಜಿಲ್ಲೆಯ ಕೆಲವು ಕಡೆಗಳಲ್ಲೂ ಗುರುವಾರ ರಾತ್ರಿ ಮಳೆ ಸುರಿದಿದೆ. ತಮಿಳುನಾಡು, ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ ಮತ್ತು ಲಕ್ಷದ್ವೀಪಕ್ಕೆ ಸಾಗರ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದ್ದು, 24 ಗಂಟೆಗಳಲ್ಲಿ ಮತ್ತೆ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.