ADVERTISEMENT

ಪಜೀರು ಪಂಚಾಯಿತಿಗೆ ಗ್ರಾಮಸ್ಥರ ಮುತ್ತಿಗೆ

ಪಜೀರು: ಗ್ಯಾಸ್ ಗೋದಾಮಿಗೆ ಪರವಾನಗಿ ನೀಡದಂತೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಜುಲೈ 2013, 13:44 IST
Last Updated 9 ಜುಲೈ 2013, 13:44 IST

ಮುಡಿಪು: ಪಜೀರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರ್ಕಾಣ ಎಂಬಲ್ಲಿ ವ್ಯಕ್ತಿಯೊಬ್ಬರು ನಿರ್ಮಿಸಲು ಉದ್ದೇಶಿರುವ ಗ್ಯಾಸ್ ಗೋದಾಮಿಗೆ ಪರವಾನಗಿ ನೀಡುವ ವಿಷಯಕ್ಕೆ ಸಂಬಂದಿಸಿದಂತೆ ಅರ್ಕಾಣ ನಾಗರಿಕರು ಸೋಮವಾರ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಒಂದು ವರ್ಷದ ಹ ಹಿಂದೆ ಮಹಮ್ಮದ್ ಫಯ್ಾ ಎಂಬುವವರು ಅರ್ಕಾಣದಲ್ಲಿ ಗ್ಯಾಸ್ ಸಿಲಿಂಡರ್‌ಗಳ ಗೋದಾಮು ಕಟ್ಟಡ ನಿರ್ಮಾಣಕ್ಕಾಗಿ ಪಜೀರು ಪಂಚಾಯಿತಿಯಿಂದ ಪರವಾನಗಿ ಕೇಳಿದ್ದರು. ಆದರೆ ಅರ್ಕಾಣ ಪರಿಸರದ ನಾಗರಿಕರು ಇದನ್ನು ವಿರೋಧಿಸಿದ್ದರು. ಗೋದಾಮಿನ ಸುತ್ತಮುತ್ತ ಹಲವಾರು ಮನೆಗಳಿದ್ದು ಗ್ಯಾಸ್ ಗೋದಾಮಿನಿಂದ ಮುಂದೆ ಅಪಾಯ ಎದುರಾಗಬಹುದು ಎಂಬ ಆತಂಕ ವ್ಯಕ್ತವಾಗಿತ್ತು. ಈ ಪ್ರದೇಶದಲ್ಲಿ ಅಂಗನವಾಡಿ, ಧಾರ್ಮಿಕ ಕೇಂದ್ರ, ಪ್ರಾಥಮಿಕ ಶಾಲೆ ಇದೆ. ಅದೇ ಸ್ಥಳದಲ್ಲಿ ವಿದ್ಯುತ್ ಸಂಪರ್ಕದ ತಂತಿಯೂ ಹಾದು ಹೋಗಿರುವುದರಿಂದ ಗೋದಾಮು ನಿರ್ಮಿಸಬಾರದು ಎಂದು ಪಂಚಾಯಿತಿಗೆ ಮನವಿ ನೀಡಿದ್ದರು.

ಅಲ್ಲದೆ ಫಜೀರು ಪಂಚಾಯಿತಿ ಕೂಡಾ ಊರಿನ ನಾಗರಿಕರ ಪರವಾಗಿ ನಿಂತು ಗೋದಾಮು ನಿರ್ಮಾಣಕ್ಕೆ ಪರವಾನಗಿ ನೀಡದೆ ಅರ್ಜಿಯನ್ನು ತಿರಸ್ಕರಿಸಿತು. ಮಹಮ್ಮದ್ ಅವರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಈ ವಿವಾದದ ಕುರಿತು ಆದೇಶ ನೀಡಿ ಪಂಚಾಯಿತಿ ಪರವಾನಗಿ ವಿಷಯವನ್ನು ಮತ್ತೊಮ್ಮೆ ಪರಿಶೀಲಿಸಿ ಮತ್ತು ಆ ಪ್ರದೇಶದ ಸುರಕ್ಷಾ ಕ್ರಮಗಳನ್ನು ಪರಿಗಣಿಸಿ ನಿರ್ಣಯ ತೆಗೆದುಕೊಳ್ಳುವಂತೆ ತಿಳಿಸಿತ್ತು. ಪಜೀರು ಗ್ರಾಮ ಪಂಚಾಯಿತಿ ಸಭೆ ನಡೆಸಿ ಮುಂದಿನ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿತ್ತು.

ಸೋಮವಾರ ಪಜೀರು ಪಂಚಾಯಿತಿ ಸಾಮಾನ್ಯ ಸಭೆ ನಡೆಸಲು ತೀರ್ಮಾನಿಸಲಾಗಿತ್ತು. ಸಾಮಾನ್ಯ ಸಭೆಯ ವಿಷಯದ ತಿಳಿದು ಅರ್ಕಾಣ ಆಸುಪಾಸಿನ ಗ್ರಾಮಸ್ಥರು ಪಂಚಾಯಿತಿ ಮುಂಬಾಗಿಲಲ್ಲೇ ಸಭೆ ಮುಗಿಯುವರೆಗೂ ಕಾದು ಕುಳಿತಿದ್ದರು. ಮಧ್ಯಾಹ್ನದ ವರೆಗೂ ಸಭೆ ಮುಗಿಯದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಘೋಷಣೆಗಳನ್ನು ಕೂಗಿದರು. ಕೊಣಾಜೆ ಪೊಲೀಸರು ಬಿಗಿ ಭದ್ರತೆಯನ್ನೂ ಏರ್ಪಡಿಸಿದ್ದರು.

ಕೊನೆಗೆ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಪಜೀರು ಗ್ರಾಮ ಪಂಚಾಯಿತಿಯ ಎಲ್ಲಾ 15 ಸದಸ್ಯರೆಲ್ಲರೂ ಒಮ್ಮತದಿಂದ ಮನೆಗಳು, ರಸ್ತೆ ವ್ಯವಸ್ಥೆ, ಶಾಲೆಗಳು, ಧಾರ್ಮಿಕ ಕೇಂದ್ರಗಳು ಇರುವ ಪ್ರದೇಶದಲ್ಲಿ ಪರವಾನಗಿ ನೀಡಲು ಸಾಧ್ಯವಿಲ್ಲ ಎಂಬ ನಿರ್ಣಯ ಕೈಗೊಂಡರು. ಪಂಚಾಯಿತಿ ಕಾರ್ಯದರ್ಶಿ ಮಾತ್ರ ಯಾವುದೇ ಕಾರಣಕ್ಕೂ ಗ್ಯಾಸ್ ಗೋದಾಮಿಗೆ ಪರವಾನಗಿ ನೀಡದಿರಲು ಸಾಧ್ಯವಿಲ್ಲ. ಇಲ್ಲಿಯ ಸ್ಥಳವನ್ನು ಪರಿಶೀಲಿಸಿ ಗೋದಾಮುವಿಗೆ ಪರವಾನಗಿ ನೀಡಬಹುದು ಎಂಬ ಹೇಳಿಕೆಯನ್ನು ನೀಡುತ್ತಿದ್ದರು.

ಪರವಾನಗಿ: ಪಂಚಾಯಿತಿ ಕಾರ್ಯದರ್ಶಿ ಸಂಜೆಯ ವೇಳೆಗೆ ಗ್ಯಾಸ್ ಗೋದಾಮಿಗೆ ಪರವಾನಗಿ ನೀಡಿದರು. ಇದರಿಂದ ಪಜೀರು ಗ್ರಾಮ ಪಂಚಾಯಿತಿಯ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಆಕ್ರೋಶಭರಿತರಾಗಿದ್ದು ಮುಂದಿನ ವಿಚಾರದ ಬಗ್ಗೆ ಶೀಘ್ರವೇ ಕಾನೂನು ಕ್ರಮ ಕೈಗೊಳ್ಳಲಿದ್ದೇವೆ ಎಂದು ಪಂಚಾಯಿತಿ ಅಧ್ಯಕ್ಷೆ ಪ್ಲೋರಿನಾ ಡಿ'ಸೋಜ ತಿಳಿಸಿದರು.

ಕಾನೂನು ರೀತಿಯಲ್ಲಿ ಗ್ಯಾಸ್ ಗೋದಾಮು ನಿರ್ಮಾಣದ ಸ್ಥಳವನ್ನು ಹಾಗೂ ದಾಖಲೆಗಳನ್ನು ಪರಿಶೀಲಿಸಿದ್ದೇನೆ. ಮೇಲಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪರಿಸರ ಮಾಲಿನ್ಯ ಇಲಾಖೆ, ಹಿಂದುಸ್ಥಾನ್ ಪೆಟ್ರೋಲಿಯಂ ಇಲಾಖೆ ಇವರೆಲ್ಲರದ್ದೂ ಅನುಮತಿ ಇರುವುದರಿಂದ ಹಾಗೂ ಹೈಕೋರ್ಟ್ ಆದೇಶವನ್ನು ಆಧರಿಸಿ ಪಂಚಾಯಿತಿ ಪರವಾನಗಿ ಕೊಡಬಾರದೆಂದು ನಿರ್ಣಯ ಮಾಡಿದ್ದರೂ ನಾನು ಕಾನೂನು ಕ್ರಮದಲ್ಲಿ ಪರವಾನಗಿ  ನೀಡಿದ್ದೇನೆ ಎಂದು ಪಂಚಾಯಿತಿ ಕಾರ್ಯದರ್ಶಿ ಕೇಶವ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.