ADVERTISEMENT

ಪುತ್ತೂರಿನಲ್ಲಿ ಅಪರೂಪದ ವಿವಾಹ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 7:45 IST
Last Updated 19 ಅಕ್ಟೋಬರ್ 2012, 7:45 IST

ಪುತ್ತೂರು:  ಆತನ ಹೆಸರು ಮಹೇಶ್ ಭಟ್, ಹುಟ್ಟು ಅಂಗವಿಕಲ. ಆಕೆ ಸೌಮ್ಯಾ. ಬಡ ಕುಟುಂಬಕ್ಕೆ ಸೇರಿದ ಅನಾಥ ಯುವತಿ. ವಿಭಿನ್ನ ಜಾತಿಗೆ ಸೇರಿದ ಇವರಿಬ್ಬರು ಗುರುವಾರ ಸಂಪ್ರದಾಯ ಮೀರಿ ಪುತ್ತೂರಿನ ರಾಧಾಕೃಷ್ಣ ಮಂದಿರದಲ್ಲಿ ಬಂಧು ಬಳಗದ ಸಮಕ್ಷಮದಲ್ಲಿ ಹಸೆಮಣೆ ತುಳಿದರು. ಇದೊಂದು ಅಪರೂಪದ ವಿವಾಹವಾಗಿತ್ತು.

ಹವ್ಯಕ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಸ್ಫುರದ್ರೂಪಿ ಯುವಕ ಮಹೇಶ್ ಭಟ್ ಪೇಟೆಯ ಪಾಂಗಳಾಯಿ ನಿವಾಸಿ.  ಹುಟ್ಟಿನಿಂದಲೇ ಪೋಲಿಯೊ ಪೀಡಿತನಾಗಿದ್ದು, ಎರಡೂ ಕಾಲುಗಳು ಸ್ವಾಧೀನ ಕಳೆದುಕೊಂಡಿದ್ದವು.
 
ನಡೆದಾಡಲು ಸಾಧ್ಯವಾಗದ ಪರಿಸ್ಥಿತಿ ಅವರದ್ದು. ಕೆಲವು ವರ್ಷಗಳಿಂದ ಮನೆಯ ಸಮೀಪ ಕಂಪ್ಯೂಟರ್ ಜ್ಯೋತಿಷ್ಯ ವೃತ್ತಿ ನಡೆಸುತ್ತಿರುವ ಅವರು ಗುರುವಾರ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಬದುಕಿನ ಭವಿಷ್ಯವನ್ನೂ ಭದ್ರಪಡಿಸಿಕೊಂಡರು.  

ಕಾಸರಗೋಡು ಜಿಲ್ಲೆಯ ಮಂಜೇಶ್ವರ ಸಮೀಪದ ವರ್ಕಾಡಿಯ ಬಟ್ಟೆಂಗಳ ನಿವಾಸಿಯಾದ ಸೌಮ್ಯಾ (27)ಪರಿವಾರ ಬಂಟ (ನಾಯ್ಕ) ಸಮುದಾಯಕ್ಕೆ ಸೇರಿದವರು. ಬಡ ಕುಟುಂಬದಿಂದ ಬಂದ ಅವರು ತಂದೆ- ತಾಯಿ ಇಲ್ಲದ ಅನಾಥೆ. ಇದೀಗ ಮಹೇಶ್ ಭಟ್ ಅವರ ಕೈಹಿಡಿಯುವ ಮೂಲಕ ಬದುಕಿನ ಮುಂದಿನ ಪಯಣಕ್ಕೆ ಮುನ್ನುಡಿ ಬರೆದರು.

ಸೌಮ್ಯಾ ಸುಮಾರು 15 ವರ್ಷಗಳ ಹಿಂದೆಯೇ ತಂದೆ ಮತ್ತು ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿದ್ದರು. ಬಳಿಕ ಅಜ್ಜಿಯ ಆಶ್ರಯದಲ್ಲಿದ್ದರು. ಎರಡು ವರ್ಷ ಹಿಂದೆ ಅಜ್ಜಿಯೂ ಸಾವನ್ನಪ್ಪಿದ ಕಾರಣ ಆಕೆ ಅನಾಥೆಯಾಗಬೇಕಾಯಿತು.  

ಸೌಮ್ಯಾ ಅವರ ಬದುಕಿನ ನೋವನ್ನರಿತ ಸಮೀಪದ ವರ್ಕಾಡಿಯ ಸೌಮ್ಯಾರ ಮತ್ತು ವಿಠಲ್ ನಾಯ್ಕ  ಸಹೋದರರು ಆಕೆಯನ್ನು ತಮ್ಮ  ತಮ್ಮ ಮನೆಗೆ ಕರೆದೊಯ್ದು ಮಗಳಂತೆ ಸಲಹಲಾರಂಭಿಸಿದ್ದರು. ಸಾಕು ತಂದೆಯವರಿಂದ ಈ ವೈವಾಹಿಕ ಸಂಬಂಧ ಕೂಡಿಬರಲು ಕಾರಣವಾಯಿತು.

ಜ್ಯೋತಿಷದ ನಂಟಿನಿಂದ ಗಂಟು....
ದಾಮೋದರ್ ಅವರು ಜ್ಯೋತಿಷ್ಯ ಶಾಸ್ತ್ರ ಕೇಳಲು ಹಿಂದೊಮ್ಮೆ ಪುತ್ತೂರಿನ ಪಾಂಗಳಾಯಿ ಬಳಿಯಿರುವ ಮಹೇಶ್ ಭಟ್ ಅವರ ಜ್ಯೋತಿಷಾಲಯಕ್ಕೆ ಹೋಗಿದ್ದರು. ಈ ಜ್ಯೋತಿಷದ ಹಿನ್ನೆಲೆಯ ಪರಿಚಯದಲ್ಲಿ ಮಹೇಶ್ ಭಟ್ ಅವರು ದಾಮೋದರ್ ಅವರಲ್ಲಿ ತನಗೊಬ್ಬಳು ಬಾಳ ಸಂಗಾತಿ ಬೇಕಾಗಿದ್ದು, ಎಲ್ಲಾದರೂ ಇದ್ದರೆ ತಿಳಿಸಿ ಅಂದ್ದ್ದಿದು ವಿವಾಹಕ್ಕೆ ಬೆಸುಗೆಯಾಯಿತು.


ಮಹೇಶ್ ಅವರ ಪರಿಸ್ಥಿತಿ ಅರ್ಥೈಸಿಕೊಂಡು ಸ್ವತಃ ಬಯಸಿ ಹಿರಿಯರ ಆಶಿರ್ವಾದಗಳೊಂದಿಗೆ ವಿವಾಹವಾಗಿದ್ದೇನೆ. ನನಗೆ ಪೂರ್ಣ ಸಂತೃಪ್ತಿ ಇದೆ. ಮುಂದೆ ಅನ್ಯೋನ್ಯವಾಗಿ ಬಾಳುತ್ತೇವೆ ಸೌಮ್ಯಾ ಹೇಳಿದರು. ಸಾಕು ತಂದೆಯ ಪ್ರಸ್ತಾಪಕ್ಕೆ ಸೌಮ್ಯಾ ಒಪ್ಪಿಗೆ ಸೂಚಿಸಿ ಅಂಗವಿಕಲ ಯುವಕನನ್ನು ವಿವಾಹವಾವಾಗಿ ಅವರಿಗೆ ಬಾಳು ನೀಡಲು ಮುಂದಾಗು ಮೂಲಕ ಸೌಮ್ಯಾ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.