ADVERTISEMENT

ಪ್ರಣಾಳಿಕೆ ಬಿಡುಗಡೆ: ಪೂಜಾರಿಗೆ ಜೈಕಾರ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2018, 12:33 IST
Last Updated 28 ಏಪ್ರಿಲ್ 2018, 12:33 IST
ಮಂಗಳೂರಿನಲ್ಲಿ ಶುಕ್ರವಾರ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಹಿರಿಯ ಮುಖಂಡ ಜನಾರ್ದನ ಪೂಜಾರಿ ಅವರಿಗೆ ಪ್ರಣಾಳಿಕೆ ನೀಡಿದರು. ಪ್ರಜಾವಾಣಿ ಚಿತ್ರ
ಮಂಗಳೂರಿನಲ್ಲಿ ಶುಕ್ರವಾರ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಹಿರಿಯ ಮುಖಂಡ ಜನಾರ್ದನ ಪೂಜಾರಿ ಅವರಿಗೆ ಪ್ರಣಾಳಿಕೆ ನೀಡಿದರು. ಪ್ರಜಾವಾಣಿ ಚಿತ್ರ   

ಮಂಗಳೂರು: ಇಲ್ಲಿನ ಟಿ.ಎಂ.ಎ. ಪೈ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆ ಬಿಡುಗಡೆಯಲ್ಲಿ ಭಾಗವಹಿಸಿದ್ದ ಪಕ್ಷದ ಹಿರಿಯ ನಾಯಕ ಬಿ.ಜನಾರ್ದನ ಅವರಿಗೆ ಜೈಕಾರಗಳ ಸುರಿಮಳೆಯೇ ದೊರೆಯಿತು. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಣಾಳಿಕೆಯ ಮೊದಲ ಪ್ರತಿಯನ್ನು ಪೂಜಾರಿ ಅವರಿಗೆ ನೀಡಿ ಗೌರವಿಸಿದರು.

ಅನಾರೋಗ್ಯದ ಕಾರಣದಿಂದ ವಿಶ್ರಾಂತಿಯಲ್ಲಿರುವ ಪೂಜಾರಿಯವರು ಹಲವು ದಿನಗಳಿಂದ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿಲ್ಲ. ಎಐಸಿಸಿ ಅಧ್ಯಕ್ಷರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅವರಿಗೆ ಆಹ್ವಾನ ನೀಡಿತ್ತು.

ಶುಕ್ರವಾರ ಬೆಳಿಗ್ಗೆ 9.15ರ ವೇಳೆಗೆ ಪೂಜಾರಿಯವರು ಸಭಾಂಗಣಕ್ಕೆ ಬಂದಾಗ ಅಲ್ಲಿದ್ದ ಕಾಂಗ್ರೆಸ್‌ ನಾಯಕರು, ಮುಖಂಡರು, ಕಾರ್ಯಕರ್ತರು ಎದ್ದು ನಿಂತು ಗೌರವ ಸಲ್ಲಿಸಿದರು.

ADVERTISEMENT

ಅಕ್ಕಿಯ ಕೊಳಗದಲ್ಲಿದ್ದ ಪ್ರಣಾಳಿಕೆಯನ್ನು ಹೊರತೆಗೆಯುವ ಮೂಲಕ ಬಿಡುಗಡೆ ಮಾಡಿದ ರಾಹುಲ್‌, ಮೊದಲ ಪ್ರತಿಯನ್ನು ಪೂಜಾರಿಯವರ ಕೈಗಿತ್ತರು.

ಸಭೆಯಲ್ಲಿ ಮಾತನಾಡಿದವರು ಪೂಜಾರಿಯವರ ಹೆಸರು ಪ್ರಸ್ತಾಪಿಸಿದಾಗಲೆಲ್ಲ ಸಭಾಂಗಣದಲ್ಲಿ ಜೈಕಾರಗಳ ಸುರಿಮಳೆಯೇ ಆಯಿತು. ಸಭೆ ಮುಗಿಯುತ್ತಿದ್ದಂತೆ ರಾಹುಲ್‌ ಅವರೇ ಪೂಜಾರಿಯವರ ಕೈಹಿಡಿದು ವೇದಿಕೆಯಿಂದ ಕೆಳಕ್ಕಿಳಿಯಲು ನೆರವಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.