ADVERTISEMENT

ಬಜಗೋಳಿ ಶಾಲೆ ಸುವರ್ಣ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 10:10 IST
Last Updated 25 ಫೆಬ್ರುವರಿ 2012, 10:10 IST

ಕಾರ್ಕಳ: ತಾಲ್ಲೂಕಿನ ಬಜಗೋಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಶನಿವಾರ `ಸುವರ್ಣ ಮಹೋತ್ಸವ~ದ ಸಂಭ್ರಮ.

ಬಜಗೋಳಿ ಅಪ್ಪಾಯಿ ಬಸದಿ ಸಮೀಪ 1955ರ ಆಗಸ್ಟ್ 26ರಂದು  ಏಕೋಪಾಧ್ಯಾಯ ಶಾಲೆಯಾಗಿ ಆರಂಭಗೊಂಡ ಈ ಶಾಲೆ ಮರುವರ್ಷ ಸಾರ್ವಜನಿಕ ಶಿಕ್ಷಣ ಇಲಾಖೆ ಕಟ್ಟಡದಲ್ಲಿ ಮುಂದುವರಿಯಿತು. 1964ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ, ನಂತರ ಮಾದರಿ ಶಾಲೆಯಾಗಿ ಮಾರ್ಪಟ್ಟಿತು.

ವಿದ್ಯಾರ್ಥಿಗಳಲ್ಲಿ ಇಂಗ್ಲಿಷ್ ಭಾಷೆ ಕೌಶಲ ಹೆಚ್ಚಿಸಲು ಸ್ಪೋಕನ್ ಇಂಗ್ಲಿಷ್ ತರಗತಿ ನಡೆಸಲಾಗುತ್ತಿದೆ. ಕಂಪ್ಯೂಟರ್ ಕಲಿಕೆಗೂ ಅವಕಾಶವಿದ್ದು, ಗ್ರಾಮೀಣ ವಿದ್ಯಾರ್ಥಿಗಳು ಸದುಪಯೋಗ ಪಡೆಯುತ್ತಿದ್ದಾರೆ.

ಸ್ಕೌಟ್, ಗೈಡ್ಸ್ ಮತ್ತು ಭಾರತ ಸೇವಾದಳ ಚಟುವಟಿಕೆ ಪರಿಣಾಮ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಪ್ರತಿಭಾ ಕಾರಂಜಿ, ಕ್ರೀಡಾಕೂಟಗಳಲ್ಲಿ  ಬಹುಮಾನ ಪಡೆದಿದ್ದಾರೆ. ವಿದ್ಯಾರ್ಥಿನಿ ಮಲ್ಲಿಕಾ ಶೆಟ್ಟಿ ರಾಜ್ಯ ಮಟ್ಟದ ವಾಲಿಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾಳೆ. 2011-12ರಲ್ಲಿ ಉಡುಪಿ ಜಿಲ್ಲೆಯ 5 ವಲಯದ ಶಾಲೆಗಳಲ್ಲಿ ಉತ್ತಮ ರೀತಿಯ ಕಾರ್ಯಯೋಜನೆಯ ಎಸ್‌ಡಿಎಂಸಿ ಪ್ರಶಸ್ತಿಯೂ ಲಭಿಸಿದೆ.

ಸುವರ್ಣ ಮಹೋತ್ಸವ ಅಂಗವಾಗಿ `ತರಗತಿ ಕೊಠಡಿಗಳ ದತ್ತು~ ಯೋಜನೆ ಹಮ್ಮಿಕೊಳ್ಳಲಾಗಿದ್ದು, 16 ಮಂದಿ ಪ್ರತಿವರ್ಷ ಅಂದಾಜು ರೂ. 5 ಸಾವಿರದಿಂದ 8 ಸಾವಿರ ಅನುದಾನ ಭರಿಸುತ್ತಿದ್ದಾರೆ.
ಸುವರ್ಣ ಮಹೋತ್ಸವ ಸಂದರ್ಭ ಶೈಕ್ಷಣಿಕ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.