ADVERTISEMENT

ಬಿಜೆಪಿ ಪ್ರಣಾಳಿಕೆ– ಯೋಗೀಶ್ ಭಟ್‌ ಬಿಡುಗಡೆ

ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ

​ಪ್ರಜಾವಾಣಿ ವಾರ್ತೆ
Published 7 ಮೇ 2018, 13:12 IST
Last Updated 7 ಮೇ 2018, 13:12 IST

ಮಂಗಳೂರು: ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಬಿಡುಗಡೆಯಾದ ಹಣದಿಂದಲೇ ಪ್ರಸ್ತುತ ಅಭಿವೃದ್ಧಿ ಕೆಲಸಗಳಾಗುತ್ತಿವೆ. ನಗರದ ಅಭಿವೃದ್ಧಿಗೆ ಪ್ರಸ್ತುತ ರಾಜ್ಯ ಸರ್ಕಾರದ ಕೊಡುಗೆ ಏನೂ ಇಲ್ಲ ಎಂದು ಮಾಜಿ ಶಾಸಕ ಎನ್.ಯೋಗೀಶ್ ಭಟ್ ಹೇಳಿದರು.

ಅವರು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಣಾಳಿಕೆಯನ್ನು ಭಾನುವಾರ ಬಿಡುಗಡೆಗೊಳಿಸಿ ಮಾತನಾಡಿದರು. ವೇದವ್ಯಾಸ ಕಾಮತ್ ಶಾಸಕರಾದರೆ ದಕ್ಷಿಣ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳಾಗಲಿದ್ದು, ಬಾಕಿ ಉಳಿದ ಕಾರ್ಯಗಳಿಗೆ ವೇಗ ದೊರೆಯಲಿದೆ. ಮಂಗಳೂರಿನಿಂದ ಗೋವಾಕ್ಕೆ ಹಡಗು ಪ್ರವಾಸೋದ್ಯಮ ಅಭಿವೃದ್ಧಿ, ಇರುವ ನಾಲ್ಕು ಕುದ್ರುಗಳನ್ನು ಪಾರ್ಕ್‌ಗಳಾಗಿ ಅಭಿವೃದ್ಧಿ ಪಡಿಸುವುದು, ಅಂತರರಾಷ್ಟ್ರೀಯ ಮಟ್ಟದ ಗಾಲ್ಫ್ ಕೋರ್ಸ್‌ನ ಅಭಿವೃದ್ಧಿಪಡಿಸಲಾಗುವುದು ಎಂದರು.

ನದಿ ಮತ್ತು ಸಾಗರ ತೀರದ ನಡುವೆ ರಾಣಿ ಅಬ್ಬಕ್ಕನ ಶೌರ್ಯಗಾಥೆಯ ಬೆಳಕು ಮತ್ತು ಶಬ್ದ ಲೇಸರ್ ಶೋ, ಹೆಲಿ ಟೂರಿಸಂ ಅಭಿವೃದ್ಧಿ, ಕದ್ರಿಯಲ್ಲಿ ಬೋನ್ಸಾಯ್ ಪಾರ್ಕ್ ನಿರ್ಮಾಣ, ಪ್ರತಿ ಮನೆಗೂ ಪೈಪ್‌ಲೈನ್‌ಗಳ ಮೂಲಕ ಗ್ಯಾಸ್ ಹಂಚಿಕೆ ಇತ್ಯಾದಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಯೋಗೀಶ್ ಭಟ್ ತಿಳಿಸಿದರು.

ADVERTISEMENT

ಬಿಜೆಪಿ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಡಿ.ವೇದವ್ಯಾಸ ಕಾಮತ್ ಮಾತನಾಡಿ, ‘ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಈಗಾಗಾಲೇ ಅಭಿವೃದ್ಧಿಯ ರೂಪುರೇಷೆ ತಯಾರಿಸಲಾಗಿದ್ದು, ಜನತೆಯ ಸಹಕಾರ ಅಗತ್ಯವಾಗಿ ಬೇಕಿದೆ’  ಎಂದರು.

ಬೀಡಿ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುವುದು, ಸಣ್ಣ ಕೈಗಾರಿಕೆಗಳಿಗೆ ಉತ್ತಮ ಮೂಲಭೂತ ಸೌಕರ್ಯ ಮತ್ತು ಒಳಚರಂಡಿ ವ್ಯವಸ್ಥೆಯನ್ನು ಒದಗಿಸುವುದು. ಕೋಮು ಸೌಹಾರ್ದ ರಕ್ಷಣೆಗೆ ಬೇಕಾದ ಕಾನೂನು ರೂಪಿಸಿ ಜಾರಿಗೆ ತರುವುದು ಹೀಗೆ ಹಲವು ಯೋಚನೆಗಳು ಇವೆ ಎಂದವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ರವಿಶಂಕರ ಮಿಜಾರು, ರೂಪಾ ಡಿ. ಬಂಗೇರ, ಭಾಸ್ಕರಚಂದ್ರ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.