ADVERTISEMENT

ಬಿಜೆಪಿ ಭ್ರಷ್ಟಾಚಾರಕ್ಕೆ ಆರೆಸ್ಸೆಸ್ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 9:20 IST
Last Updated 3 ಫೆಬ್ರುವರಿ 2011, 9:20 IST

ಮಂಗಳೂರು: ‘ಬಿಜೆಪಿಯ ಕೆಟ್ಟ ಆಡಳಿತದಿಂದಾಗಿ ಕರ್ನಾಟಕ ಈಗ ದೇಶದ ಭ್ರಷ್ಟಾಚಾರದ ರಾಜಧಾನಿಯಂತಾಗಿದೆ. ಸದಾ ಆದರ್ಶ, ಮೌಲ್ಯಗಳ ಮಾತು ಆಡುವ ಆರ್‌ಎಸ್‌ಎಸ್, ಈ ವಿಷಯದಲ್ಲಿ ಮೌನಕ್ಕೆ ಶರಣಾಗುವ ಮೂಲಕ ಭ್ರಷ್ಟರ ರಕ್ಷಣೆಗೆ ನಿಂತಿದೆ’...

ಹೀಗೆ ಕರ್ನಾಟಕದ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದವರು ಸಂಸದ, ಅಖಿಲ ಭಾರತ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಜಿತೇಂದ್ರ ಸಿಂಗ್.
ನಗರದ ಹೊರವಲಯ ತೊಕ್ಕೊಟ್ಟು– ಮೈದಾನದಲ್ಲಿ ಬುಧವಾರ ಸಂಜೆ ಯುವ ಕಾಂಗ್ರೆಸ್ ಆಯೋಜಿಸಿದ್ದ ಬೃಹತ್ ಜನಜಾಗೃತಿ ಸಮಾವೇಶಕ್ಕೆ ಚಾಲನೆ ನೀಡಿದ ಸಿಂಗ್, ಬಿಜೆಪಿಯನ್ನು ಆರ್‌ಎಸ್‌ಎಸ್ ರಕ್ಷಿಸಿದರೂ ರಾಜ್ಯದ ಜನ ಮಾತ್ರ  ಕ್ಷಮಿಸುವುದಿಲ್ಲ ಎಂದರು.

ದೇಶದ ಚಿತ್ರಣ ಬದಲಿಸುವ ಶಕ್ತಿ ಯುವಕರಲ್ಲಿದೆ. ಅವರಿಂದಲೇ ದೇಶದ ಪ್ರಗತಿ ಸಾಧ್ಯ ಎಂದು ನಂಬಿರುವ ರಾಹುಲ್ ಗಾಂಧಿ ರಾಜಕೀಯದಲ್ಲಿ ಸಮಗ್ರ ಬದಲಾವಣೆ ತರಲು ಇಡೀ ದೇಶ ಸುತ್ತುತ್ತಿದ್ದಾರೆ. ಮುಂದಿನ ತಿಂಗಳು ಕರ್ನಾಟಕಕ್ಕೂ ಬರಲಿದ್ದಾರೆ ಎಂದರು.

ರೈತರ ಹಣ ಬಿಜೆಪಿ ಕಚೇರಿಗೆ: ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ, ಶಾಸಕ ರಾಜೀವ್ ಸಾವತ್ ಮಾತನಾಡಿ, ದೇಶದ ಯಾವ ರಾಜ್ಯಕ್ಕೆ ಹೋದರೂ ಅಲ್ಲೆಲ್ಲ ಕರ್ನಾಟಕ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಮಾತುಗಳೇ ಕೇಳಿಬರುತ್ತಿವೆ. ರಾಜ್ಯದ ಬಡ ರೈತರ ತೆರಿಗೆ ಹಣ ಬಿಜೆಪಿ ಕಚೇರಿ ಸೇರುತ್ತಿದೆ. ಇವರೆಲ್ಲ ರಾಮನ ಹೆಸರು ಹೇಳಿಕೊಂಡು ರಾವಣನ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ದೇಶದ 15 ರಾಜ್ಯಗಳಲ್ಲಿ ಯುವ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಪೂರ್ಣಗೊಂಡಿದ್ದು ಪ್ರಜಾಪ್ರಭುತ್ವ ತಳಹದಿಯಲ್ಲಿ ವಿವಿಧ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಯುವ ಕಾಂಗ್ರೆಸ್ ರಾಜ್ಯ ಘಟಕ ಅಧ್ಯಕ್ಷ, ಶಾಸಕ ಕೃಷ್ಣ ಬೈರೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಯುವ ಜನಾಂಗದಲ್ಲಿ ಮೌನ ಕ್ರಾಂತಿ ತರಲು ರಾಹುಲ್ ಗಾಂಧಿ ಶ್ರಮಿಸುತ್ತಿದ್ದಾರೆ. ಕಲುಷಿತಗೊಂಡಿರುವ ರಾಜಕೀಯದಲ್ಲಿ ಪರಿಶುದ್ಧತೆ ತರಲು ಯುವಕರು ಅತ್ಯಧಿಕ ಸಂಖ್ಯೆಯಲ್ಲಿ ರಾಜಕೀಯಕ್ಕೆ ಸೇರಬೇಕು ಎಂದರು.

ರಾಜ್ಯದಲ್ಲಿ ಈ ಸಂಬಂಧ ಫೆಬ್ರುವರಿ 3ನೇ ವಾರ ಸದಸ್ಯತ್ವ ಅಭಿಯಾನ ನಡೆಸುತ್ತಿದ್ದು ಯಾರು ಬೇಕಾದರೂ ಪಕ್ಷಕ್ಕೆ ಸೇರಬಹುದು ಎಂದು ಮುಕ್ತ ಆಹ್ವಾನ ನೀಡಿದರು. ಪ್ರತಿ ಬೂತ್‌ನಲ್ಲಿ ಯುವ ಕಾಂಗ್ರೆಸ್ ಸಮಿತಿ ರಚಿಸುವುದು ತಮ್ಮ ಗುರಿ ಎಂದರು.

ಯುವ ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಅರುಣ್ ಕೊವೆಲ್ಲೊ, ಸದಸ್ಯತ್ವ ಅಭಿಯಾನದ ಕರ್ನಾಟಕ ಉಸ್ತುವಾರಿ ವಹಿಸಿಕೊಂಡ ಶಾನಿಮೋಲ್ ಉಸ್ಮಾನ್, ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ರಮಾನಾಥ ರೈ, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಮಾಜಿ ಸಂಸದ ವಿನಯಕುಮಾರ್ ಸೊರಕೆ, ಶಾಸಕರಾದ ಯು.ಟಿ.ಖಾದರ್, ಅಭಯಚಂದ್ರ ಜೈನ್, ಉಳ್ಳಾಲ ದರ್ಗಾದ ಅಧ್ಯಕ್ಷ ಯು.ಕೆ.ಮೋನು, ಎಐಸಿಸಿ ಸದಸ್ಯ ಪಿ.ವಿ.ಮೋಹನ್, ಐವನ್ ಡಿಸೋಜ, ವಿಜಯಕುಮಾರ ಶೆಟ್ಟಿ, ಬೋಂಡಾಲ ಜಗನ್ನಾಥ ಶೆಟ್ಟಿ  ಮತ್ತಿತರರಿದ್ದರು.

ಸಮಾವೇಶ ಹೀಗಿತ್ತು...
*  ಒಂದೂವರೆ ಗಂಟೆ ವಿಳಂಬ ಆರಂಭ
*  ಉದ್ಘಾಟನೆಗೂ ಮುನ್ನವೇ ಉದ್ಘಾಟನಾ ಭಾಷಣ ಮಾಡಿದ ಜಿತೇಂದ್ರ ಸಿಂಗ್
*  ಅರಳಿದ ಹಿಂಗಾರ, ಗಣ್ಯರಿಗೆ ಮುಟ್ಟಾಳೆ ತೊಡಿಸಿ ತುಳು ಸಂಸ್ಕೃತಿ ಆಚರಣೆ
*  ರಮಾನಾಥ ರೈ, ಪೂಜಾರಿ ಅರ್ಧ ಗಂಟೆ ತಡ
*  ಕನ್ನಡ ನುಡಿಗೆ ಕಷ್ಟಪಟ್ಟ ಯುವ  ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಕೊವೆಲ್ಲೊ
*  ಬೃಹತ್ ವೇದಿಕೆ ಇದ್ದರೂ ಮೊದಲ  ಸಾಲಿನಲ್ಲೇ ಕೂರಲು ಪೈಪೋಟಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.