ADVERTISEMENT

ಭತ್ತದ ಪೈರು, ಜೋಳದ ತೆನೆಯ ಮನೆ

ಪ್ರಸನ್ನ ಹೆಗ್ಡೆ ಕಲ್ಲಬೆಟ್ಟು
Published 21 ಡಿಸೆಂಬರ್ 2013, 4:57 IST
Last Updated 21 ಡಿಸೆಂಬರ್ 2013, 4:57 IST
ಮೂಡುಬಿದಿರೆ ವಿದ್ಯಾಗಿರಿಯ ಕೃಷಿ ಮೇಳ ಆವರಣದಲ್ಲಿ ಜನಪದ ಸಂಸ್ಕೃತಿಯನ್ನು ಬಿಂಬಿಸುವ ಭತ್ತದ ಪೈರು ಹಾಗೂ ಜೋಳದ ತೆನೆಯಿಂದ ನಿರ್ಮಾಣವಾದ ಮನೆ.
ಮೂಡುಬಿದಿರೆ ವಿದ್ಯಾಗಿರಿಯ ಕೃಷಿ ಮೇಳ ಆವರಣದಲ್ಲಿ ಜನಪದ ಸಂಸ್ಕೃತಿಯನ್ನು ಬಿಂಬಿಸುವ ಭತ್ತದ ಪೈರು ಹಾಗೂ ಜೋಳದ ತೆನೆಯಿಂದ ನಿರ್ಮಾಣವಾದ ಮನೆ.   

ವಿದ್ಯಾಗಿರಿ (ಮೂಡುಬಿದಿರೆ): ಆಳ್ವಾಸ್‌ ವಿಶ್ವನುಡಿಸಿರಿ ವಿರಾಸತ್‌ ಸಮ್ಮೇಳನದ ಎಲ್ಲಿ ನೋಡಿದರೂ ಕಲಾ ವೈವಿಷ್ಟ್ಯ, ಜನಪದ ಸೊಗಡು ಎದ್ದು ಕಾಣುತ್ತಿದೆ. ಶ್ರೀಮತಿ ಸುಂದರಿ ಆನಂದ ಅಳ್ವ ಪರಿಸರಕ್ಕೆ ಒಂದು ಸುತ್ತು ಹೊಡೆದರೆ ಇಂತಹ ಸೊಬಗು ಅಲ್ಲಲ್ಲಿ ಕಾಣ ಸಿಗುತ್ತದೆ.

ನುಡಿಸಿರಿ ವಿರಾಸತ್‌ ಜತೆಗೆ ಜನಪದ ಸಂಸ್ಕೃತಿಯನ್ನು ಅಳವಡಿಸಿಕೊಂಡಿರುವುದರಿಂದ ಕೃಷಿಮೇಳ ಪರಿಸರದಲ್ಲಿ  ಎರಡು ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಕೃಷಿ ಸಂಸ್ಕೃತಿಯ ಪರಿಚಯ ಇಲ್ಲಿ ಆಗಿದೆ.  ವಿದ್ಯಾಗಿರಿ ಆವರಣದಲ್ಲಿ ಎರಡು ಜಿಲ್ಲೆಗಳ ಕೃಷಿ ಪರಂಪರೆಯನ್ನು ಬಿಂಬಿಸುವ ಭತ್ತದ ಪೈರು ಹಾಗೂ ಜೋಳದ ತೆನೆಯಿಂದ ನಿರ್ಮಿಸಿದ ಸುಂದರವಾದ ಎರಡು ಪ್ರತ್ಯೇಕ  ಮನೆಗಳ ದರ್ಶನವಾಗುತ್ತದೆ.

ಶಿವಮೊಗ್ಗದ ರೈತರು ತಾವು ಬೆಳೆಸಿದ  ಜೋಳದ ತೆನೆಗಳಿಂದ  ಚೆಂದದ ಮನೆಯನ್ನು ನಿರ್ಮಿಸಿದರೆ, ಉತ್ತರ ಕನ್ನಡದ ರೈತರು ತಾವು ಬೆಳೆಸಿದ  ಭತ್ತದ ತೆನೆಗಳಿಂದ  ಒಂದು ಮನೆಯನ್ನು ನಿರ್ಮಿಸಿದ್ದಾರೆ. ರಾಜ್ಯದ ಪ್ರಮುಖ ಆಹಾರ ಬೆಳೆಗಳಾದ ಭತ್ತ ಮತ್ತು ಜೋಳದ ದೇವ ಮಂದಿರಗಳು  ಇವೆಯೊ ಎಂಬಂತೆ ವಿದ್ಯಾಗಿರಿಯಲ್ಲಿ ಮೈದಳೆದಿವೆ. ಎಸ್‌ಕೆಡಿಆರ್‌ಡಿಪಿ  ವತಿಯಿಂದ ನಡೆಯುವ 34ನೇ ರಾಜ್ಯಮಟ್ಟದ ಕೃಷಿ ಸಮ್ಮೇಳನದ ಸಭಾಂಗಣದ ಹತ್ತಿರದಲ್ಲೆ ಕೃಷಿ ಪರಂಪರೆಯ ಈ ಮನೆಗಳು ನೋಡುಗರ ಗಮನಸೆಳೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.