ADVERTISEMENT

ಮಂಗಳೂರಿನಿಂದ ಸೌದಿಗೆ ನೇರ ಯಾನ ಆರಂಭ

ಉದ್ಯೋಗ ಕಡಿತ-ಸೌದಿ ಅಧಿಕಾರಿಗಳೊಂದಿಗೆ ಚರ್ಚೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 8:33 IST
Last Updated 4 ಏಪ್ರಿಲ್ 2013, 8:33 IST

ಮಂಗಳೂರು: ಸೌದಿ ಅರೇಬಿಯಾದ ಪ್ರಜೆಗಳಿಗೆ ಖಾಸಗಿ ಕಂಪೆನಿಗಳಲ್ಲಿ ಹೆಚ್ಚಿನ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಸೌದಿ ಸರ್ಕಾರ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರುತ್ತಿರುವ ಸಂದರ್ಭದಲ್ಲೇ ಮಂಗಳೂರಿನಿಂದ ಸೌದಿಗೆ ಬುಧವಾರ ನೇರ ವಿಮಾನಯಾನ ಸೇವೆ ಆರಂಭವಾಗಿದೆ.

`ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ನಾನು ಮತ್ತು ಯು.ಟಿ.ಖಾದರ್‌ಸಂಪರ್ಕಿಸಲಿದ್ದೇವೆ. ನಿತಾಕತ್ ನಿಯಮದಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜನರನ್ನು ಪಾರು ಮಾಡುವ ನಿಟ್ಟಿನಲ್ಲಿ ಚರ್ಚಿಸಲಿದ್ದೇವೆ. ಭಾರತಕ್ಕೆ ಮರಳಿದ ಬಳಿಕ ಇದೇ ವಿಚಾರದ ಬಗ್ಗೆ ನಾನು ವಿದೇಶಾಂಗ ವ್ಯವಹಾರ ಸಚಿವಾಲಯ ಮತ್ತು ಸಾಗರೋತ್ತರ ವ್ಯವಹಾರ ಸಚಿವಾಲಯದ ಜತೆಗೆ ಚರ್ಚಿಸಲಿದ್ದೇನೆ' ಎಂದು ಸಂಸದ ಜಯಪ್ರಕಾಶ್ ಹೆಗ್ಡೆ ದಮಾಮ್‌ಗೆ ತೆರಳಲು ಸಜ್ಜಾಗಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಏರುವುದಕ್ಕೆ ಮೊದಲು ಪತ್ರಕರ್ತರಿಗೆ ತಿಳಿಸಿದರು.

`ಮಂಗಳೂರಿನಿಂದ ಸೌದಿ ಅರೇಬಿಯಾಕ್ಕೆ ನೇರ ವಿಮಾನಯಾನ ಈ ಭಾಗದ ಜನರ ಬಹುವರ್ಷಗಳ ಬೇಡಿಕೆಯಾಗಿತ್ತು. ಇದೀಗ ಕನಸು ಈಡೇರಿದೆ. ರಾಜ್ಯದ ಕರಾವಳಿ ಮತ್ತು ಕೇರಳದ ಉತ್ತರ ಭಾಗದ ಸಾವಿರಾರು ಮಂದಿ ಸೌದಿಯಲ್ಲಿ ಉದ್ಯೋಗದಲ್ಲಿದ್ದು, ಅವರಿಗೆ ಮತ್ತು ಅವರ ಕುಟುಂಬದವರಿಗೆ ಈ ನೇರ ವಿಮಾನದಿಂದ ಅನುಕೂಲವಾಗಲಿದೆ' ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.

ಸಂಜೆ 4 ಗಂಟೆಗೆ ಕಲ್ಲಿಕೋಟೆ (ಕೋಯಿಕ್ಕೋಡ್)ಯಿಂದ ಬಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಐಎಕ್ಸ್ 385 ವಿಮಾನ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆಯೇ ಮಿಂಚಿನ ಸಂಚಾರವಾದಂತಹ ಅನುಭವವಾಯಿತು. ವಿಮಾನದಲ್ಲಿ 109 ಮಂದಿ ಇದ್ದರು.

ಮಂಗಳೂರಿನಿಂದ 56 ಮಂದಿ ಪ್ರಯಾಣಿಕರು ಅದನ್ನು ಏರಲು ಸಿದ್ಧತೆ ನಡೆಸುತ್ತಿದ್ದರು. ಜಯಪ್ರಕಾಶ್ ಹೆಗ್ಡೆ ಮತ್ತು ಯು.ಟಿ.ಖಾದರ್ ಅವರು ಕೆಲವು ಪ್ರಯಾಣಿಕರಿಗೆ ಬೋರ್ಡಿಂಗ್ ಪಾಸ್, ಸಿಹಿತಿಂಡಿ ಪೊಟ್ಟಣಗಳನ್ನು ನೀಡಿದರು. ಕೊನೆಗೆ ಪ್ರಯಾಣಿಕರ ಜತೆಗೆ ತಾವೂ ದಮಾಮ್‌ನತ್ತ ತೆರಳಲು ವಿಮಾನ ಏರಿದರು.

ಪ್ರಯಾಣಕ್ಕೆ ಸಜ್ಜಾಗಿ ನಿಂತಿದ್ದ ನಾಲ್ಕು ಮಕ್ಕಳ ತಾಯಿ ತಹಿರಾ ಅವರು ಬಹಳ ಸಂಭ್ರಮದಲ್ಲಿದ್ದರು. `ನಾನು ಇದಕ್ಕೆ ಮೊದಲು ಆರು ಬಾರಿ ಸೌದಿ ಆರೇಬಿಯಾಕ್ಕೆ ತೆರಳಿದ್ದೆ. ಪ್ರತಿ ಬಾರಿಯೂ ಕೊಂಡಿ ವಿಮಾನಗಳನ್ನು ಬಳಸಿ ಅಲ್ಲಿಗೆ ತೆರಳಬೇಕಾಗಿತ್ತು. ನೇರವಾಗಿ ತೆರಳುವ ಅವಕಾಶ ಸಿಕ್ಕಿದ್ದಕ್ಕೆ ನನಗೆ ಬಹಳ ಸಮಾಧಾನವಾಗಿದೆ' ಎಂದರು.

ಮಂಗಳೂರು ವಿಮಾನ ನಿಲ್ದಾಣ ಅಂತರರಾಷ್ಟ್ರೀಯ ನಿಲ್ದಾಣವಾಗಿ ಪರಿವರ್ತನೆಗೊಂಡ ಬಳಿಕ ನಡೆದಿರುವ ಮತ್ತೊಂದು ಬೆಳವಣಿಗೆ ಇದು. ಇದೊಂದು ಸಂಭ್ರಮದ ಕ್ಷಣವೂ ಹೌದು. ಈ ತಿಂಗಳ ಪೂರ್ತಿ ವಿಮಾನದ ಸೀಟುಗಳು ಭರ್ತಿಯಾಗಿವೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ರಾಧಾಕೃಷ್ಣನ್ `ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT