ADVERTISEMENT

ಮಂಗಳೂರು: ಭದ್ರತಾ ಕೊಠಡಿ ಸೇರಿದ ಮತಯಂತ್ರ

ಮತ ಎಣಿಕೆ ಕೇಂದ್ರದ ಸುತ್ತ ಬಿಗಿ ಪೊಲೀಸ್‌ ಭದ್ರತೆ

​ಪ್ರಜಾವಾಣಿ ವಾರ್ತೆ
Published 14 ಮೇ 2018, 8:03 IST
Last Updated 14 ಮೇ 2018, 8:03 IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಶನಿವಾರ ಮತದಾನಕ್ಕೆ ಬಳಸಿದ್ದ ವಿದ್ಯುನ್ಮಾನ ಮತಯಂತ್ರ ಮತ್ತು ವಿವಿಪ್ಯಾಟ್‌ಗಳು ನಗರದ ಬೋಂದೆಲ್‌ನ ಮಹಾತ್ಮ ಗಾಂಧಿ ಶತಮಾನೋತ್ಸವ ಸಂಯುಕ್ತ ಪದವಿ
ಪೂರ್ವ ಕಾಲೇಜಿನಲ್ಲಿ ಸ್ಥಾಪಿಸಿರುವ ಭದ್ರತಾ ಕೊಠಡಿಗಳಿಗೆ ಬಂದು ತಲುಪಿವೆ.

1,858 ಮತಗಟ್ಟೆಗಳಲ್ಲಿ ಬಳಕೆ ಮಾಡಿರುವ 2,699 ಬ್ಯಾಲೆಟ್‌ ಯೂನಿಟ್‌, 2,262 ಕಂಟ್ರೋಲ್‌ ಯೂನಿಟ್‌ ಮತ್ತು 2,608 ವಿವಿಪ್ಯಾಟ್‌ಗಳನ್ನು ಮತದಾನ ಮುಗಿದ ಬಳಿಕ ಆಯಾ ಕ್ಷೇತ್ರಗಳ ಮಸ್ಟರಿಂಗ್ ಕೇಂದ್ರಗಳಿಗೆ ತರಲಾಯಿತು. ಅಲ್ಲಿಂದ ಬಿಗಿ ಭದ್ರತೆಯಲ್ಲಿ ಭದ್ರತಾ ಕೇಂದ್ರಕ್ಕೆ ಸಾಗಿಸಲಾಯಿತು. ಭಾನುವಾರ ಬೆಳಿಗ್ಗೆ 7.30ರ ಸುಮಾರಿಗೆ ಎಲ್ಲ ಎಂಟು ಕ್ಷೇತ್ರಗಳ ಮತಯಂತ್ರಗಳೂ ಎಣಿಕೆ ಕೇಂದ್ರ ತಲುಪಿದವು.

ಮತಗಟ್ಟೆ ಸಿಬ್ಬಂದಿ ಆಯಾ ಮತಗಟ್ಟೆಗಳ ವಿದ್ಯುನ್ಮಾನ ಮತಯಂತ್ರ ಮತ್ತು ವಿವಿಪ್ಯಾಟ್‌ಗಳನ್ನು ಮಸ್ಟರಿಂಗ್‌ ಕೇಂ
ದ್ರದಲ್ಲಿ ಹಸ್ತಾಂತರಿಸುವಾಗ ಶನಿವಾರ ಮಧ್ಯರಾತ್ರಿ ಕಳೆದಿತ್ತು. ಬಳಿಕ ಡಿ ಮಸ್ಟರಿಂಗ್ ಪ್ರಕ್ರಿಯೆ ನಡೆಸಿ ಲಾರಿಗಳಲ್ಲಿ ತುಂಬಿ ಅರೆಸೇನಾ ಪಡೆ ಮತ್ತು ಪೊಲೀಸ್‌ ಭದ್ರತೆಯಲ್ಲಿ ಬೋಂದೆಲ್‌ಗೆ ತರಲಾಯಿತು. ಆಯಾ ಕ್ಷೇತ್ರಗಳ ಮತಯಂತ್ರ
ಗಳನ್ನು ಪ್ರತ್ಯೇಕ ಭದ್ರತಾ ಕೊಠಡಿಗಳಲ್ಲಿ ಇರಿಸಿ ಬಾಗಿಲಿಗೆ ಬೀಗ ಹಾಕಿ, ಮೊಹರು ಮಾಡಲಾಗಿದೆ. ಮಂಗಳವಾರ ಬೆಳಿಗ್ಗೆಯಿಂದ ಮತ ಎಣಿಕೆ ನಡೆಯಲಿದೆ. ಅದಕ್ಕೂ ಮೊದಲು ಭದ್ರತಾ ಕೊಠಡಿಗಳ ಬಾಗಿಲನ್ನು ತೆರೆಯಲಾಗುತ್ತದೆ.

ADVERTISEMENT

ಬಿಗಿ ಭದ್ರತೆ: ಭದ್ರತಾ ಕೇಂದ್ರಕ್ಕೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಅರೆಸೇನಾ ಪಡೆಯ ನೂರಾರು ಯೋಧ
ರು ಮತ್ತು ಸ್ಥಳೀಯ ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ. ಭದ್ರತಾ ಕೇಂದ್ರ ಪ್ರವೇಶ ದ್ವಾರ ಸಂಪೂರ್ಣವಾಗಿ ಅರೆಸೇನಾ ಪಡೆಯ ಸುಪರ್ದಿಯಲ್ಲಿದೆ.

ಸಿದ್ಧತೆ ಆರಂಭ

ಮತ ಎಣಿಕೆಗೆ ಸಿದ್ಧತೆಗಳು ಭಾನುವಾರದಿಂದಲೇ ಆರಂಭವಾಗಿವೆ. ಮತ ಎಣಿಕೆಗೆ ಅಗತ್ಯವಿರುವ ಮೇಜುಗಳನ್ನು ಸಾಗಿಸುವುವುದು, ಎಣಿಕೆ ಕೇಂದ್ರದ ಸುತ್ತ ಜನರನ್ನು ನಿಯಂತ್ರಿಸಲು ಬ್ಯಾರಿಕೇಡ್‌ಗಳನ್ನು ಅಳವಡಿಸುವ ಕೆಲಸ ಪ್ರಗತಿಯಲ್ಲಿದ್ದುದು ಕಂಡುಬಂತು.

ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಸ್‌.ಸಸಿಕಾಂತ್ ಸೆಂಥಿಲ್, ಮಂಗಳೂರು ನಗರ ಪೊಲೀಸ್ ಕಮಿಷನರ್‌ ವಿಪುಲ್‌ ಕುಮಾರ್, ದಕ್ಷಿಣ ಕನ್ನಡ ಎಸ್‌ಪಿ ಡಾ.ಬಿ.ಆರ್‌.ರವಿಕಾಂತೇಗೌಡ, ಎಂಟೂ ಕ್ಷೇತ್ರಗಳ ಚುನಾವಣಾಧಿಕಾರಿಗಳು ಮತ್ತು ಚುನಾವಣಾ ವೀಕ್ಷಕರು ಭಾನುವಾರ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.