ADVERTISEMENT

ಮಂತ್ರವಾದಿ ವಶದಲ್ಲಿ ಪುತ್ರಿಯರು: ಅಮ್ಮನ ದೂರು

​ಪ್ರಜಾವಾಣಿ ವಾರ್ತೆ
Published 21 ಜನವರಿ 2011, 10:35 IST
Last Updated 21 ಜನವರಿ 2011, 10:35 IST

ಮಂಗಳೂರು: ‘ಸ್ಥಳೀಯ ವ್ಯಕ್ತಿಯೊಬ್ಬ ವಾಮಾಚಾರ ನಡೆಸಿ ತಮ್ಮ ಇಬ್ಬರು ಪುತ್ರಿಯರನ್ನು ಅಪಹರಿಸಿದ್ದಾನೆ. ಪುತ್ರಿಯರನ್ನು ಬಿಡಿಸಿಕೊಡಿ’ ಎಂದು ಪುತ್ತೂರು ತಾಲ್ಲೂಕು ಪೆರ್ಲಂಪಾಡಿ ಗ್ರಾಮದ ಮಾಲೆತ್ತೋಡಿ ಮಹಿಳೆಯೊಬ್ಬರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಬ್ರಹ್ಮಣ್ಯೇಶ್ವರ ರಾವ್ ಅವರಿಗೆ ಗುರುವಾರ ದೂರು ನೀಡಿದರು.

‘ಕೃಷ್ಣ ಮಣಿಯಾಣಿ ಎಂಬಾತ ನನ್ನ ಹಿರಿಯ ಪುತ್ರಿ ಸತ್ಯವತಿಯನ್ನು(20) ಮೂರು ವರ್ಷದ ಹಿಂದೆ ವಶೀಕರಣ ನಡೆಸಿ ಅಪಹರಿಸಿದ್ದ.  ಕಳೆದ ಮಾರ್ಚ್‌ನಲ್ಲಿ ಇನ್ನೊಬ್ಬಳು ಪುತ್ರಿ ಶಶಿಕಲಾ(18) ಎಂಬಾಕೆಯನ್ನೂ ಇದೇ ರೀತಿ ಅಪಹರಿಸಿದ್ದಾನೆ’ ಎಂದು ಮಾಲೆತ್ತೋಡಿಯ ಲೀಲಾವತಿ ದೂರಿನಲ್ಲಿ ತಿಳಿಸಿದ್ದಾರೆ.

‘ಇಬ್ಬರನ್ನೂ ಯಾವ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದಾನೊ ಸ್ಪಷ್ಟವಾಗಿ ತಿಳಿದಿಲ್ಲ. ಸತ್ಯವತಿಗೆ ಗುಜರಾತ್ ಯುವಕನೊಂದಿಗೆ ಮದುವೆ ಮಾಡಿಕೊಟ್ಟಿದ್ದೇನೆ ಎನ್ನುತ್ತಾನೆ.ಆದರೆ ಆಕೆಯನ್ನು ಮಾರಾಟ ಮಾಡಿರುವ ಸಾಧ್ಯತೆಯೂ ಇದೆ. ಶಶಿಕಲಾಳನ್ನು ಮನೆಗೆ ಕಳುಹಿಸಿ ಕೊಡುವಂತೆ ಕೇಳಿದರೆ ಸಂಕ್ರಾಂತಿ ಬಳಿಕ ಕಳುಹಿಸುವೆ ಎಂದಿದ್ದ ಆತ ಇನ್ನೂ ಕಳುಹಿಸಿಯೇ ಇಲ್ಲ’ ಎಂದು ಆಕೆ ಅಲವತ್ತುಕೊಂಡಿದ್ದಾರೆ.

ನಂತರ ಸುದ್ದಿಗಾರರ ಜತೆ ಮಾತನಾಡಿದ ಲೀಲಾವತಿ, ‘ನಾಲ್ಕು ಮದುವೆಯಾಗಿರುವ ಕೃಷ್ಣ ಮಣಿಯಾಣಿ, ನನ್ನ ಸಹೋದರಿ ವೇದಾವತಿಯನ್ನೂ 20 ವರ್ಷದ ಹಿಂದೆ ಇದೇ ರೀತಿ ವಶೀಕರಿಸಿ ಮದುವೆ ಮಾಡಿಕೊಂಡಿದ್ದ. ಆಕೆಯೂ ಈತನ ಕೃತ್ಯಗಳಿಗೆ ನೆರವಾಗುತ್ತಿದ್ದಾಳೆ. ವಾಮಾಚಾರಕ್ಕೆ ಹೆದರಿ ಊರಿನ ಜನ ಆತನ ವಿರುದ್ಧ ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ’ ಎಂದರು.

‘ನಮಗೂ ಜೀವ ಬೆದರಿಕೆ ಒಡ್ಡಿದ್ದಾನೆ. ಹಾಗಾಗಿ ಕಳೆದ ಮಾರ್ಚ್‌ನಲ್ಲಿಯೇ ಶಶಿಕಲಾಳನ್ನು ಅಪಹರಿಸಿದ್ದರೂ ಈವರೆಗೂ ದೂರು ನೀಡಲು ಧೈರ್ಯ ಬಂದಿರಲಿಲ್ಲ. 18 ವರ್ಷದ ಹಿಂದೆಯೇ ಪತಿ ಮೋನಪ್ಪ ತೀರಿಕೊಂಡಿದ್ದು, ಬೀಡಿ ಕಟ್ಟಿ, ಕೂಲಿ ಮಾಡಿ ಪುತ್ರಿಯರನ್ನು ಬೆಳೆಸಿದ್ದೆ. ಈಗ ಅವರ ಭವಿಷ್ಯದ ಬಗ್ಗೆಯೇ ಚಿಂತೆಯಾಗಿದೆ. ಯಾರೂ ದಿಕ್ಕೇ ಇಲ್ಲದಂತಾಗಿದೆ. ದಯವಿಟ್ಟು ಪುತ್ರಿಯರು ಮನೆಗೆ ಬರುವಂತೆ ಮಾಡಿಕೊಡಿ’ ಎಂದು ಅಂಗಲಾಚಿದರು.ಲೀಲಾವತಿ ಸಹೋದರಿ ಗಿರಿಜಾ ಜತೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.