ADVERTISEMENT

ಮಕ್ಕಳನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಮತ್ತೊಬ್ಬನ ಸೆರೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 6:36 IST
Last Updated 25 ಏಪ್ರಿಲ್ 2013, 6:36 IST

ಸುರತ್ಕಲ್: ಇಲ್ಲಿನ ಪೊಲೀಸ್ ಠಾಣೆ ವ್ಯಾಪ್ತಿಯ ಕುಳಾಯಿ-ಹೊನ್ನೆಕಟ್ಟೆ ಎಂಬಲ್ಲಿ ಬಾಡಿಗೆ ಮನೆಯಲ್ಲಿ   ಬಾಲಕಿಯರನ್ನು ಇರಿಸಿಕೊಂಡು ನಡೆಯುತ್ತಿದ್ದ ವೇಶ್ಯಾವಾಟಿಕೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.

ಪ್ರಮುಖ ಆರೋಪಿ ತಾರಾ ಹಾಗೂ ದೀಪಾ ಅವರನ್ನು ಸಿಒಡಿ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ದಾಳಿ ನಡೆಸಿದ ಸಂದರ್ಭ ಬಂಧಿಸಿದ್ದರು. ಅವರು ನೀಡಿದ ಮಾಹಿತಿಯಂತೆ ತಾರಾಳ ಪತಿ ಬೇಲೂರು ಮೂಲದ ಭುವನೇಶ್ ಕುಮಾರ್ (45) ನನ್ನು ಬಂಧಿಸಿದ್ದಾರೆ. ತಾರಾ, ದೀಪಾ ಹಾಗೂ ಭುವನೇಶನಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕುಳಾಯಿ-ಹೊನ್ನೆಕಟ್ಟೆಯ ಬಾಡಿಗೆ ಮನೆಯಲ್ಲಿ 16 ವರ್ಷಗಳಿಂದ ನೆಲೆಸಿದ್ದ ತಾರಾ ರಾಜ್ಯದ ಬೇರೆ ಬೇರೆ ಭಾಗಗಳಿಂದ ಅಪ್ರಾಪ್ತ ವಯಸ್ಸಿನ ಬಾಲಕಿಯರನ್ನು ಕರೆತಂದು ಅವರಿಗೆ ವಿದ್ಯಾಭ್ಯಾಸ ನೀಡುವ ನೆಪದಲ್ಲಿ ವೇಶ್ಯಾವಾಟಿಕೆಗೆ ದೂಡುತ್ತಿದ್ದಳು.

ಮೈಸೂರಿನ ಒಡನಾಡಿ ಸ್ವಯಂಸೇವಾ ಸಂಸ್ಥೆ ಸಂತ್ರಸ್ತ ಬಾಲಕಿಯನ್ನು ರಕ್ಷಿಸಿದ್ದ ವೇಳೆ ಆಕೆ ನೀಡಿದ್ದ ಮಾಹಿತಿಯ ಅನ್ವಯ ಸಿಒಡಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ತಾರಾ, ದೀಪಾ, ರಿಕ್ಷಾ ಚಾಲಕ ಚಿತ್ರಾಪುರದ ಚಿತ್ತಪ್ಪನನ್ನು ವಶಕ್ಕೆ ಪಡೆದುಕೊಂಡಿದ್ದರೆ, ಭುವನೇಶ್ ತಲೆಮರೆಸಿಕೊಂಡಿದ್ದ.

ತಾರಾಳ ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಬಗ್ಗೆ ಸುರತ್ಕಲ್ ಪೊಲೀಸರಿಗೂ ಮಾಹಿತಿ ಸಿಕ್ಕಿತ್ತು. ಕಳೆದ ಅಕ್ಟೋಬರ್‌ನಲ್ಲಿ ಕುಳಾಯಿ ನಿವಾಸಿ ಸ್ಟೆಲ್ಲಾ ಎಂಬವರು ತನ್ನ ಗಂಡ ಅಶೋಕ ಪದೇ ಪದೇ ತಾರಾಳ ಮನೆಗೆ ಹೋಗಿ ಬರುತ್ತಿದ್ದು, ಅವರನ್ನು ಕರೆಸಿ ವಿಚಾರಣೆ ನಡೆಸಿ ನ್ಯಾಯ ಕೊಡಿಸಬೇಕೆಂದು ಠಾಣೆಗೆ ದೂರು ನೀಡಿದ್ದರು.

ಆಗ ಕರ್ತವ್ಯದಲ್ಲಿದ್ದ ಕಾನ್‌ಸ್ಟೇಬಲ್ ಜನಾರ್ದನ ಹಾಗೂ ವಿಶ್ವನಾಥ್ ಜೊತೆ ಎಎಸ್‌ಐ ಫೆಡ್ರಿಕ್ ಪಾಯ್ಸ ಅವರು ತಾರಾ ಮನೆಗೆ ಪೊಲೀಸ್ ಸಮವಸ್ತ್ರದಲ್ಲಿ ತೆರಳಿ ವಿಚಾರಣೆ ನಡೆಸಿದ್ದರು. ಆ ವೇಳೆ ಅಶೋಕ ಅಲ್ಲಿರಲಿಲ್ಲ. ನಂತರ ಅಶೋಕನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದ ವೇಳೆ ಆತ, ತಾರಾಳ ಕಾರು  ಚಾಲಕನಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೆ ನೀಡಿದ್ದರಿಂದ ಪ್ರಕರಣ ಇತ್ಯರ್ಥಗೊಂಡಿತು ಎನ್ನಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.