ADVERTISEMENT

ಮಲೇರಿಯ ಹತೋಟಿಗೆ ತರಲು ಸಹಕರಿಸಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2012, 6:20 IST
Last Updated 9 ಜೂನ್ 2012, 6:20 IST

ಮೂಡುಬಿದಿರೆ: `ಮಲೇರಿಯ ಹರಡದಂತೆ ಮುನ್ನೆಚ್ಚರಿಕೆ ವಹಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಪುರಸಭೆ ಈ ನಿಟ್ಟಿನಲ್ಲಿ ಈಗಾಗಲೇ ಅಗತ್ಯ ಕ್ರಮ ಕೈಗೊಂಡಿದ್ದು ಸಾರ್ವಜನಿಕರೂ ಸಹಕಾರ ನೀಡಬೇಕು~ ಎಂದು ಪುರಸಭೆ ಅಧ್ಯಕ್ಷ ರತ್ನಾಕರ ದೇವಾಡಿಗ ಹೇಳಿದರು.

ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ನಡೆದ ಮಲೇರಿಯ ಮಾಸಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲಾ ಆರೋಗ್ಯ ಸೊಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಕಚೇರಿ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

`ಪುರಸಭೆ ವತಿಯಿಂದ ಈಗಾಗಲೇ ನಗರದ ಹೊಟೇಲ್, ಅಂಗಡಿಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ಆರೋಗ್ಯ ತಪಾಸಣೆ  ಮಾಡಲಾಗಿದೆ. ಸ್ವಚ್ಛತೆ ಕಾಯ್ದುಕೊಳ್ಳಲು ವ್ಯಾಪಾರಸ್ಥರಿಗೆ ಸೂಚನೆ ನೀಡಲಾಗಿದೆ. ಮನೆ, ಅಂಗಡಿ, ಮುಂಗಟ್ಟುಗಳ ಸುತ್ತ ಮುತ್ತ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು~ ಎಂದು ದೇವಾಡಿಗ ಹೇಳಿದರು.

ಅತಿಥಿಯಾಗಿದ್ದ ಜಿಲ್ಲಾ ಆರೋಗ್ಯ ಸಹಾಯಕ ಜಯರಾಮ ಪೂಜಾರಿ ಮಾತನಾಡಿ ಸಮಸ್ಯೆ ಬಂದ ನಂತರ ಎಚ್ಚೆತ್ತುಕೊಳ್ಳುವುದರ ಬದಲು ಸಮಸ್ಯೆ ಬರುವ ಮೊದಲೆ ಜಾಗ್ರತೆ ವಹಿಸಬೇಕು. ಜ್ವರದ ತೀವ್ರತೆ ಇದ್ದಾಗ ರಕ್ತ ಪರೀಕ್ಷೆ ಮಾಡಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಸಲಹೆಯಿತ್ತರು.

ಜಿಲ್ಲಾ ಮಲೇರಿಯ ಅಧಿಕಾರಿ ಡಾ.ಅರುಣ್ ಕುಮಾರ್ ಪ್ರಾತ್ಯಕ್ಷಿಕೆ ಮೂಲಕ ಮಲೇರಿಯಾ ಬಗ್ಗೆ ಮಾಹಿತಿಯಿತ್ತರು. ಕಿರಿಯ ಆರೋಗ್ಯ ಸಹಾಯಕಿ ಕುಸುಮ ಮತ್ತು ಹಿರಿಯ ಆರೋಗ್ಯ ಸಹಾಯಕಿ ರವಿಕಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.