ADVERTISEMENT

ಮಳೆ ಹಾನಿ: ತುರ್ತು ಸ್ಪಂದನೆಗೆ ಸೂಚನೆ

ಸಚಿವ ಯು.ಟಿ. ಖಾದರ್‌ ವಿವಿಧೆಡೆ ಭೇಟಿ: ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2018, 4:55 IST
Last Updated 11 ಜೂನ್ 2018, 4:55 IST

ಉಳ್ಳಾಲ: ಮಳೆ ಗಾಳಿಯಿಂದ ಹಾನೀಗೀಡಾದ ಮನೆಗಳಿಗೆ ಪ್ರಕೃತಿ ವಿಕೋಪದಡಿ ಮುಂದಿನ 10 ದಿನಗಳೊಳಗೆ ಸೂಕ್ತ ಪರಿಹಾರ ಒದಗಿಸಬೇಕು. ಮನೆ ಪರಿಶೀಲನೆ ಸಂದರ್ಭದಲ್ಲಿ ನಿಷ್ಪಕ್ಷಪಾತವಾಗಿ ಮಾನವೀಯತೆ ನೋಡಿ ಹಾನಿಯ ವೆಚ್ಚವನ್ನು ನೀಡಬೇಕು. ಹಾನಿಗೀಡಾದ ಕುಟುಂಬ ಮನೆ ಪುನರ್ ನಿರ್ಮಾಣ ಮಾಡಿಕೊಳ್ಳಲು ಅಧಿಕಾರಿಗಳು ಸ್ಪಂದಿಸಬೇಕು ಎಂದು ನಗರಾಭಿವೃದ್ಧಿ ಮತ್ತು ವಸತಿ ಖಾತೆ ಸಚಿವ ಯು.ಟಿ. ಖಾದರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಎರಡು ದಿನಗಳಿಂದ ಸುರಿಯುತ್ತಿರುವ ಗಾಳಿ ಮಳೆಯಿಂದ ಹಾನಿಗೀಡಾದ ಸುಭಾಷ್‍ ನಗರದ ಇಸ್ಮಾಯಿಲ್, ಸುಂದರ್ ಮಜಲ್ ಮತ್ತು ಲೂಸಿ ಅವರ ಮನೆಗೆ ಭಾನುವಾರ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು ಮಾತನಾಡಿದರು.

ಈ ವರ್ಷ ಮಳೆ ಪ್ರಾರಂಭದ ಬಳಿಕ ಮಂಗಳೂರು ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 25ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ಉಳ್ಳಾಲದಲ್ಲಿ ಕಡಲ್ಕೊರೆ‌ತಕ್ಕೆ ಶಾಶ್ವತ ಕಾಮಗಾರಿ ಹೊರತಾದ ಪ್ರದೇಶಗಳಲ್ಲಿ ಬೇಕಾದ ತಾತ್ಕಾಲಿಕ ಕ್ರಮವನ್ನು ಈಗಾಗಲೇ ಕೈಗೊಳ್ಳಲಾಗಿದೆ. ಅಗತ್ಯ ಇರುವ ಕಡೆ ತುರ್ತು ಕಾಮಗಾರಿ ನಡೆಸುವಂತೆ ಈಗಾಗಲೇ ಸಂಬಂಧಿತ ಇಲಾಖೆಯ ಅಧಿಕಾರಿಗಳಿಗೆ ಸೂಚಿಸ
ಲಾಗಿದೆ ಎಂದು ಅವರು ಹೇಳಿದರು.

ADVERTISEMENT

ಕಳೆದೆರಡು ದಿನಗಳಿಂದ ಮಳೆಯೊಂದಿಗೆ ಗಾಳಿ ಬೀಸಿದ ಪರಿಣಾಮ ಮರಗಳು ಉರುಳಿ ಬಿದ್ದು, ವಿದ್ಯುತ್ ಕಂಬ ಸೇರಿದಂತೆ ಮನೆಗಳಿಗೆ ಹಾನಿಯಾಗಿದೆ. ಈ ವ್ಯಾಪ್ತಿಯಲ್ಲಿ ಪ್ರಕೃತಿ ವಿಕೋಪ ನಡೆದ ಕಡೆ ತುರ್ತು ಕ್ರಮ ಕೈಗೊಳ್ಳಲು ಅಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಮುನ್ನೂರು - ಅಂಬ್ಲಮೊಗರು ಸೇತುವೆಪೂರ್ಣವಾಗುವ ತನಕ ಪರ್ಯಾಯ ರಸ್ತೆ ಹಾನಿಯಾದರೆ ದುರಸ್ತಿಗೊಳಿಸಿ ಯಥಾಸ್ಥಿತಿಯಲ್ಲಿ
ಡುವಂತೆ ಸಚಿವ ಯು.ಟಿ.ಖಾದರ್ ಸೇತುವೆ ಗುತ್ತಿಗೆದಾರರಿಗೆ ಸೂಚಿಸಿದರು.

ಸುಭಾಷ್‍ನಗರದಲ್ಲಿ ಹಾನಿಗೀಡಾದ ಇಸ್ಮಾಯಿಲ್ ಅವರ ಮನೆಗೆ ಸಚಿವ ಯು,ಟಿ. ಖಾದರ್ ಭೇಟಿ ನೀಡಿ ಪರಿಶೀಲಿಸಿದರು.

ಶನಿವಾರ ತಡರಾತ್ರಿ ಬೀಸಿದ ಭಾರೀ ಗಾಳಿ ಮಳೆಗೆ ಮನೆಯ ಚಾವಣಿ ಹಾರಿ ಹೆಂಚುಗಳೆಲ್ಲ ಹಾರಿದ ಘಟನೆ ಮುನ್ನೂರು ಗ್ರಾಮದ
ಸುಭಾಶ್ ನಗರದಲ್ಲಿ ನಡೆದಿದೆ. ಈ ವೇಳೆ ಮಹಿಳೆ ಸಹಿತ ಇಬ್ಬರು ಗಾಯಗೊಂಡಿದ್ದಾರೆ.

ಚಾವಣಿ ಕುಸಿತ– ಹೆಂಚಿಗೆ ಹಾನಿ

ಮುನ್ನೂರು ಗ್ರಾಮದ ಸುಭಾಶ್ ನಗರದ ಇಸ್ಮಾಯೀಲ್ ದೆಪ್ಪೆಲಿಮಾರ್(ಬದಿಗುಡ್ಡೆ) ಎಂಬವರಿಗೆ ಸೇರಿದ ಮನೆ ಇದಾಗಿದೆ. ನಿನ್ನೆ ಒಂದು ಗಂಟೆ ಸುಮಾರಿಗೆ ಬೀಸಿದ ಭಾರೀ ಗಾಳಿಗೆ ಇವರ ವಾಸದ ಮನೆಯ ಹಂಚುಗಳೆಲ್ಲ ಹಾರಿ ಹೋಗಿವೆ. ಈ ವೇಳೆ ಮನೆಯಲ್ಲಿ ಮಲಗಿದ್ದ ಇಸ್ಮಾಯೀಲ್ ಹಾಗೂ ಅವರ ಪತ್ನಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಳಿಯ ಹೊಡೆತಕ್ಕೆ ಸಿಲುಕಿ ಮನೆಯ ಚಾವಣಿ ಸಂಪೂರ್ಣ ಕುಸಿದಿದೆ. ಹೆಂಚುಗಳು ಸಂಪೂರ್ಣ ಧ್ವಂಸಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.