ADVERTISEMENT

ಮಹಿಳೆಯರನ್ನು ಗೌರವಿಸದ ಕಾಂಗ್ರೆಸ್‌

ಕರುನಾಡ ಮಹಿಳಾ ಜಾಗೃತಿ ಸಂವಾದಲ್ಲಿ ಮೀನಾಕ್ಷಿ ಲೇಖಿ ಆರೋಪ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2018, 13:23 IST
Last Updated 29 ಏಪ್ರಿಲ್ 2018, 13:23 IST

ಮಂಗಳೂರು: ತಮ್ಮ ಪಕ್ಷದೊಳಗಿನ ಮಹಿಳೆಯರನ್ನು ಗೌರವದಿಂದ ನಡೆಸಿಕೊಳ್ಳದ ಕಾಂಗ್ರೆಸ್‌ ಕೇಂದ್ರ ಸರ್ಕಾರದ ‘ಬೇಟಿ ಬಚಾವೋ, ಬೇಟಿ ಪಡಾವೋ’ ಯೋಜನೆಯನ್ನು ಅಪಹಾಸ್ಯ ಮಾಡುತ್ತಿರುವುದು ವಿಪರ್ಯಾಸ ಎಂದು ಸಂಸದೆ ಮೀನಾಕ್ಷಿ ಲೇಖಿ ಹೇಳಿದರು.

ನಗರದ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ಶನಿವಾರ ಕರುನಾಡ ಮಹಿಳಾ ಜಾಗೃತಿ ಸಂವಾದದಲ್ಲಿ ಅವರು ಮಾತನಾಡಿದರು. ‘ಕಾಂಗ್ರೆಸ್‌ ಮುಖಂಡರಿಂದಲೇ ದೌರ್ಜನ್ಯಗಳು ನಡೆದ ಬಗ್ಗೆ ಸ್ಥಳೀಯ ಕಾರ್ಪೊರೇಟರ್‌ ಪ್ರತಿಭಾ ಕುಳಾಯಿ ಸೇರಿದಂತೆ ಹಲವರು ಪ್ರತಿಭಟಿಸಿದ್ದಾರೆ. ಅನುಪಮ ಶೆಣೈ, ರೋಹಿಣಿ ಸಿಂಧೂರಿ ಅವರಂತಹ ಅಧಿಕಾರಿಗಳಿಗೆ ಕೆಲಸ ಮಾಡಲು ಪೂರಕ ವಾತಾವರಣ ಕಲ್ಪಿಸದ ಸರ್ಕಾರ ಕೇಂದ್ರದ ಯೋಜನೆಗಳ ಬಗ್ಗೆ ಟೀಕಿಸುತ್ತಿರುವುದು ಸರಿಯಲ್ಲ. ಕಠುವಾ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಮೋಂಬತ್ತಿ ಹಚ್ಚಿ ಪ್ರತಿಭಟನೆ ನಡೆಸುವ ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಅವರು ಬಿಜಾಪುರ, ಬೀದರ್‌ನಲ್ಲಿ ನಡೆದ ಪ್ರಕರಣಗಳ ಬಗ್ಗೆ ಯಾಕೆ ಮೌನವಾಗಿರುತ್ತಾರೆ? ಎಲ್ಲ ಜಾತಿ, ಧರ್ಮ, ಪ್ರದೇಶದ ಹೆಣ್ಮಕ್ಕಳನ್ನೂ ಸಮಾನವಾಗಿ ನೋಡುವ ಮನೋಭಾವ ಇರಬೇಕಲ್ಲವೇ? ಆಯ್ದ ಪ್ರಕರಣಗಳ ಬಗ್ಗೆ ಮಾತ್ರ ಪ್ರತಿಭಟನೆಗಳನ್ನು ನಡೆಸುವ ರಾಜಕೀಯ ಸರಿಯಲ್ಲ’ ಎಂದು ಅವರು ಹೇಳಿದರು.

ಭಾರತ ಜನನಿಯ ತನುಜಾತೆ.. ಎಂದು ಕುವೆಂಪು ಅವರು ಕರ್ನಾಟಕವನ್ನು ಬಣ್ಣಿಸಿದರು. ಆದರೆ ರಾಜ್ಯದಲ್ಲಿರುವ ಕಾಂಗ್ರೆಸ್‌ ಸರ್ಕಾರ ಕುವೆಂಪು ಪ್ರತಿಪಾದಿಸಿದ ಏಕತೆಯನ್ನು ಒಡೆಯಲು ಭಾಷೆ, ಧರ್ಮ, ಜಾತಿಯ ಹೆಸರಿನಲ್ಲಿ ಯತ್ನಿಸುತ್ತಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಭಾಗ್ಯಲಕ್ಷ್ಮಿ ಯೋಜನೆ, ಮಡಿಲು ಕಿಟ್‌, ಸೈಕಲ್‌ ವಿತರಣೆ ಸೇರಿದಂತೆ ಮಹಿಳಾ ಸಬಲೀಕರಣದ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರು. 72 ವಿದ್ಯಾರ್ಥಿನಿ ನಿಲಯ, 64 ಮಹಿಳಾ ವಸತಿ ನಿಲಯಗಳನ್ನು ಮಂಜೂರು ಮಾಡಿದ್ದರು.

ADVERTISEMENT

ಕೇಂದ್ರವು ಉಜ್ವಲಾ ಯೋಜನೆಯ ಮೂಲಕ ಗ್ರಾಮೀಣ ಮಹಿಳೆಯರಿಗೆ ನೆರವಾಗಿದೆ. ಮುದ್ರಾ ಯೋಜನೆಯಡಿ ಶೇ 70ರಷ್ಟು ಮಹಿಳೆಯರು ಸ್ವ ಉದ್ಯೋಗ ಕಂಡುಕೊಂಡಿದ್ದಾರೆ. ಜನ್‌ಧನ್‌ ಖಾತೆಯಿಂದಾಗಿ ಹಲವಾರು ಅನುದಾನಗಳು ನೇರವಾಗಿ ಫಲಾನುಭವಿಗಳಿಗೇ ತಲುಪುವಂತಾಗಿದೆ. ಆದರೆ ಕಾಂಗ್ರೆಸ್‌ ತೋರಿಕೆಗೆ ಮಹಿಳಾ ಸಬಲೀಕರಣ ಎನ್ನುತ್ತಾ, ವಾಸ್ತವ ಜೀವನದಲ್ಲಿ ಅವರಿಗೆ ಯಾವುದೇ ರೀತಿಯಲ್ಲಿ ನೆರವಾಗುತ್ತಿಲ್ಲ ಎಂದು ಅವರು ಟೀಕಿಸಿದರು.

ಸಾಧಕಿಯರಾದ ಯಶೋದಾ ಲಾಯಿಲ, ಶ್ರೀಮತಿ ಶೆಟ್ಟಿ, ಜಾನಕಿ ಕರ್ಕೇರ, ಸುಕನ್ಯಾ ಏಕನಾಥ್‌, ಗೌತಮಿ, ಪ್ರಜ್ಞಾ ಅವರನ್ನು ಸನ್ಮಾನಿಸಲಾಯಿತು. ಸಂಸದ ನಳಿನ್‌ ಕುಮಾರ್ ಕಟೀಲ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಬಿಜೆಪಿ ಸಹ ವಕ್ತಾರೆ ಜಿ.ಕೆ. ಸುಲೋಚನಾ ಭಟ್‌ ಇದ್ದರು. ಪೂಜಾ ಪೈ ಸ್ವಾಗತಿಸಿದರು.

‘ಮಹಿಳಾ ಮೀಸಲಾತಿ ಕಡ್ಡಾಯವಾಗಲಿ’

ಎಲ್ಲ ರಾಜಕೀಯ ಪಕ್ಷಗಳು ಟಿಕೆಟ್‌ ಹಂಚಿಕೆ ವೇಳೆಗೆ ಶೇ 33ರಷ್ಟು ಮಹಿಳಾ ಮೀಸಲಾತಿ ನೀಡುವುದು ಕಡ್ಡಾಯವಾಗಬೇಕು. ಇದಕ್ಕೆ ಸಂವಿಧಾನ ತಿದ್ದುಪಡಿ ಬೇಕಾಗಿಲ್ಲ. ಚುನಾವಣಾ ಆಯೋಗವೇ ಈ ನಿಯಮ ಜಾರಿಗೆ ತರಬಬಹುದು ಎಂದು ಮೀನಾಕ್ಷಿ ಲೇಖಿ ಹೇಳಿದರು. ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯಕ್ಕೆ ಬರಬೇಕು ಎಂಬುದು ನನ್ನ ಆಶಯ ಎಂದರು.

ಲೈಂಗಿಕ ವಿಚಾರಗಳಿಗೆ ಸಂಬಂಧಿಸಿದ ವೆಬ್‌ಸೈಟ್‌ಗಳನ್ನುಬ್ಲಾಕ್‌ ಮಾಡುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಇಂತಹ ಚಿತ್ರ ವೀಕ್ಷಿಸುವುದರಿಂದಲೇ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆಯೇ ಎಂಬ ಬಗ್ಗೆ ವಿವರವಾದ ಅಧ್ಯಯನ ನಡೆಯಬೇಕಾಗಿದೆ. ಮಹಿಳಾ ದೌರ್ಜನ್ಯ ತಡೆಯಲು ಕೇವಲ ಕಠಿಣ ಶಿಕ್ಷೆಯ ವಿಧಿಸುವ ನಿಯಮ ಮಾತ್ರವಲ್ಲದೆ, ಸಮಾಜದಲ್ಲಿ ತಿಳಿವಳಿಕೆ ಮೂಡಿಸುವ ಕೆಲಸ ವ್ಯಾಪಕವಾಗಿ ನಡೆಯಬೇಕಾಗಿದೆ ಎಂದರು.

ದೇವಸ್ಥಾನದ ಹುಂಡಿ ಹಣವನ್ನು ಅಭಿವೃದ್ಧಿಗೆ ಬಳಸುವುದು ಸರಿಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತ, ‘ಸರ್ಕಾರ ದೇವಸ್ಥಾನಗಳಿಗೆ ನೀಡಿದ ಅನುದಾನಕ್ಕಿಂತ ಹೆಚ್ಚಿನ ಅನುದಾನವನ್ನು ಚರ್ಚ್‌ಗಳಿಗೆ ನೀಡಿದೆ. ಈ ಕುರಿತು ಜಾತ್ಯತೀತವಾಗಿ ಯೋಚನೆ ಮಾಡಬೇಕಾದ ಅಗತ್ಯವಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.