ADVERTISEMENT

ಮುಂದಿನ ತಿಂಗಳಿಂದ ಕಾರ್ಡ್ ವಿತರಣೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2012, 12:59 IST
Last Updated 14 ಡಿಸೆಂಬರ್ 2012, 12:59 IST

ಮಂಗಳೂರು: ನಗರ ಆಸ್ತಿಗಳ ನಕ್ಷೆ ಮತ್ತು ಹಕ್ಕು ದಾಖಲೆಗಳನ್ನು ಸಿದ್ಧಪಡಿಸುವ ಯೋಜನೆ (ಯುಪಿಒಆರ್) ಇನ್‌ಫೋಟೆಕ್ ಕಂಪೆನಿಯಿಂದ ನಡೆಯುತ್ತಿದ್ದು, ಈಗಾಗಲೇ ಸುಮಾರು 120ರಷ್ಟು ಕರಡು ಕಾರ್ಡ್‌ಗಳು ಸಿದ್ಧವಾಗಿವೆ. ಮುಂದಿನ ತಿಂಗಳಿಂದ ಅವುಗಳನ್ನು ವಿತರಿಸಿ ತಿದ್ದುಪಡಿಗಳೇನಾದರೂ ಇದ್ದರೆ ಮಾಡಿಸಿಕೊಂಡು ಕಾಯಂ ಕಾರ್ಡ್ ವಿತರಿಸಲು ವೇದಿಕೆ ಸಜ್ಜಾಗತೊಡಗಿದೆ.

ನಗರವನ್ನು ಒಟ್ಟು 30 ಸೆಕ್ಟರ್‌ಗಳಾಗಿ ವಿಂಡಿಸಲಾಗಿದ್ದು, 8 ಸೆಕ್ಟರ್‌ಗಳಲ್ಲಿ ಆಸ್ತಿಗಳ ಅಳತೆ ಕಾರ್ಯ ಆರಂಭವಾಗಿದೆ. ಹಳೆ ಮಂಗಳೂರು ಪ್ರದೇಶ ಹಾಗೂ ಮಂಗಳಾ ಕಾರ್ನಿಶ್ ಯೋಜನಾ ಪ್ರದೇಶಗಳಲ್ಲಿ ಮೊದಲಾಗಿ ಈ ಕಾರ್ಯ ನಡೆಯುತ್ತಿದೆ. 35 ತಂಡಗಳು ಈ ಕಾರ್ಯದಲ್ಲಿ ತೊಡಗಿದ್ದು, ಒಂದೊಂದು ತಂಡ ಕನಿಷ್ಠ 20 ಆಸ್ತಿಗಳನ್ನು ಪ್ರತಿದಿನ ಗುರುತು ಹಾಕುತ್ತಿದೆ. ಹೀಗಾಗಿ ಪ್ರತಿದಿನ 500ರಿಂದ 1000ದಷ್ಟು ಆಸ್ತಿಗಳ ಅಳತೆ ಕಾರ್ಯ ನಡೆಯುತ್ತಿದೆ.

`ನಗರದಲ್ಲಿ 2 ಲಕ್ಷಕ್ಕೂ ಅಧಿಕ ಆಸ್ತಿಗಳಿವೆ. ಇದುವರೆಗೆ 15,280 ಆಸ್ತಿಗಳನ್ನು ಅಳತೆ ಮಾಡಿ ಪೂರ್ಣಗೊಳಿಸಲಾಗಿದೆ. 36,674 ಆಸ್ತಿಗಳನ್ನು ಸಮೀಕ್ಷೆಗಾಗಿ ಗುರುತಿಸಲಾಗಿದೆ.14,649 ಆಸ್ತಿಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. 15,320 ಆಸ್ತಿಗಳು ಮತ್ತು ಗಡಿಗಳನ್ನು ಗುರುತಿಸಲಾಗಿದೆ. 6585 ಆಸ್ತಿ ದಾಖಲೆಗಳನ್ನು ಪಡೆದುಕೊಳ್ಳಲಾಗಿದೆ.

ಸದ್ಯದ ಇದೇ ವೇಗದಲ್ಲಿ ಅಳತೆ ಕಾರ್ಯ ಮುಂದುವರಿದರೆ ಮುಂದಿನ ಜೂನ್ ಹೊತ್ತಿಗೆ ಎಲ್ಲಾ 2 ಲಕ್ಷ ಅಸ್ತಿಗಳ ಅಳತೆ ಕಾರ್ಯ ಕೊನೆಗೊಳ್ಳುವ ನಿರೀಕ್ಷೆ ಇದೆ' ಎಂದು ಯುಪಿಒಆರ್‌ನ ಯೋಜನಾ ನಿರ್ದೇಶಕ ಕುಸುಮಾಧರ್ ಗುರುವಾರ `ಪ್ರಜಾವಾಣಿ'ಗೆ ತಿಳಿಸಿದರು.

ಅದೆಷ್ಟೋ ಕಡೆಗಳಲ್ಲಿ ಗಡಿ ಗುರುತಿಗೆ ತಾತ್ಕಾಲಿಕ ಕಂಬದಂತಹ ಗುರುತು ಸಹ ಇಲ್ಲ. ಅಳತೆಗೆ ಬಂದ ಸಂದರ್ಭದಲ್ಲಿ ಇಂತಹ ತಾತ್ಕಾಲಿಕ ಗಡಿ ಗುರುತುಗಳನ್ನು ಒದಗಿಸಿದರೆ ಅಳತೆ ಸುಲಭವಾಗುತ್ತದೆ. ಡಿಜಿಟಲ್ ಅಳತೆ ಸಾಧ್ಯವಾಗದ ಕಡೆಗಳಲ್ಲಷ್ಟೇ ಟೇಪ್ ಬಳಸಿ ಅಳತೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.

ಪುತ್ತೂರಿನಂತಹ ನಗರಕ್ಕೂ ವಿಸ್ತರಣೆ
ಶಿವಮೊಗ್ಗದಲ್ಲಿ ಯುಪಿಒಆರ್ ಯೋಜನೆ ಸಂಪೂರ್ಣ ಕೊನೆಗೊಂಡಿದೆ. ಬೆಂಗಳೂರಿನಲ್ಲೂ ಈ ಯೋಜನೆ ಇದೀಗ ಆರಂಭವಾಗಿದೆ. ಮುಂದಿನ ದಿನಗಳಲ್ಲಿ 5 ಸಾವಿರಕ್ಕಿಂತ ಅಧಿಕ ಜನಸಂಖ್ಯೆ ಇರುವ ಪಟ್ಟಣ ಪ್ರದೇಶಗಳಲ್ಲೂ ಯುಪಿಒಆರ್ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದ್ದು, ಪುತ್ತೂರು ಸಹಿತ ರಾಜ್ಯದ 200ಕ್ಕೂ ಅಧಿಕ ಪಟ್ಟಣಗಳಲ್ಲಿ ಈ ಕಾರ್ಯ ಮುಂದಿನ ವರ್ಷದಿಂದ ಆರಂಭವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಇನ್‌ಫೋಟೆಕ್ ಕಂಪೆನಿಯು ಅಂಗನವಾಡಿ, ಆಶಾ ಕಾರ್ಯಕರ್ತೆಯರನ್ನು ಬಳಸಿಕೊಂಡು ಆಸ್ತಿದಾರರಿಗೆ ನೋಟಿಸ್ ನೀಡುವುದು, ಆಸ್ತಿಗಳನ್ನು ಗುರುತಿಸುವಂತಹ ಕೆಲಸ ಮಾಡುತ್ತಿದೆ. ಕಂಪೆನಿಯ 250ಕ್ಕೂ ಅಧಿಕ ಮಂದಿ ಇದೀಗ ಅಳತೆ ಮತ್ತು ಇತರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಹಳೆಯ ಕಾಲದ ಸಂಕೋಲೆಯ ಬದಲಿಗೆ ಅತ್ಯಂತ ಕರಾರುವಾಕ್ಕಾಗಿ ಅಳತೆ ಮಾಡಿಸುವ `ಟೋಟಲ್ ಸ್ಟೇಷನ್ ಡಿಜಿಟಲ್' ತಂತ್ರಜ್ಞಾನದೊಂದಿಗೆ ಅಳತೆ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.