ADVERTISEMENT

ಮೂಲ್ಕಿ: 52 ಮಲೇರಿಯ ಪ್ರಕರಣ ಪತ್ತೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2011, 8:45 IST
Last Updated 15 ಮಾರ್ಚ್ 2011, 8:45 IST

ಮೂಲ್ಕಿ: ಇಲ್ಲಿನ ಮೂಲ್ಕಿ ಹೋಬಳಿಯಲ್ಲಿ ಸುಮಾರು 36 ಮಲೇರಿಯ ರೋಗಿಗಳು ಸರ್ಕಾರಿ ದಾಖಲೆಯ ಮೂಲಕ ಪತ್ತೆಯಾಗಿದ್ದಾರೆ. ಖಾಸಗಿ ಮತ್ತು ಇನ್ನಿತರ ಆಸ್ಪತ್ರೆಗಳಲ್ಲಿ ಮಲೇರಿಯಾ ರೋಗಿಗಳು ದಾಖಲಾಗಿದ್ದು ಸೋಮವಾರ ‘ಪ್ರಜಾವಾಣಿ’ ಸಮೀಕ್ಷೆ ನಡೆಸಿದಾಗ ಒಟ್ಟು 52 ಪ್ರಕರಣಗಳು ಪತ್ತೆ ಆಗಿವೆ.

ಮೂಲ್ಕಿ ಹೋಬಳಿಯಲ್ಲಿ ಕೆಮ್ರಾಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೇ ಕಳೆದ ನವೆಂಬರ್ ತಿಂಗಳಿನಿಂದ ಜನವರಿವರೆಗೆ 32 ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. ಮೂಲ್ಕಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸುಮಾರು 16 ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ, ಐದು ರೋಗಿಗಳು ಆಸ್ಪತ್ರೆಯಲ್ಲಿಯೇ ಇದ್ದಾರೆ.ಕಿನ್ನಿಗೋಳಿ ಹಾಗೂ ಮೂಲ್ಕಿಯ ಖಾಸಗಿ ಒಟ್ಟು ಐದು ಆಸ್ಪತ್ರೆಯಲ್ಲೂ ಸಹ ಅನೇಕ ಮಲೇರಿಯ ಸಂಬಂಧಿ ರೋಗಿಗಳು ಚಿಕಿತ್ಸೆ ಪಡೆದುಕೊಂಡಿದ್ದು ಈ ಬಗ್ಗೆ ಮುನ್ನೆಚ್ಚರಿಕೆ ಕ್ರಮವನ್ನು ಅನುಸರಿಸಬೇಕಾದ ಅವಶ್ಯಕತೆ ಇದೆ ಎಂದು ಅಲ್ಲಿನ ವೈದ್ಯರು ಪ್ರತಿಕ್ರಿಯಿಸಿದ್ದಾರೆ.

ಕೆಮ್ರಾಲ್ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಭಾಸ್ಕರ ಕೋಟ್ಯಾನ್ ಹೇಳುವಂತೆ ಕಳೆದ ಮೂರು ತಿಂಗಳಿನಿಂದ ನಮ್ಮ ಆರೋಗ್ಯ ಕಾರ್ಯಕರ್ತರು ಜಾಗೃತಿ ಮೂಡಿಸುತ್ತಿದ್ದಾರೆ. ಕೆಲವೊಂದು ನಿರ್ದಿಷ್ಟ ಪ್ರದೇಶದಲ್ಲಿ ಈ ಮಲೇರಿಯಾ ರೋಗವು ಕಾಣಿಸಿಕೊಂಡಿದೆ. ಇದರ ಬಗ್ಗೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಿಗೂ ವರದಿ ನೀಡಲಾಗಿದೆ ಎಂದರು.

ಕಿನ್ನಿಗೋಳಿ ಮತ್ತು ಮೂಲ್ಕಿಯಲ್ಲಿ ಬೃಹತ್ ಕಟ್ಟಡಗಳು ತಲೆ ಎತ್ತುತ್ತಿದ್ದು ಇಲ್ಲಿನ ಕಾರ್ಮಿಕರು ವಲಸೆ ಬರುವುದರಿಂದ ಅಲ್ಲಿನ ಈ ರೋಗವನ್ನು ತಂದು ಇಲ್ಲಿ ಹರಡುತ್ತಿದ್ದಾರೆ. ಚಿಕಿತ್ಸೆಗೆ ಇಲ್ಲಿ ದಾಖಲಾಗುತ್ತಿದ್ದಾರೆ. ಕೆಲವೊಂದು ಹೋಟೆಲ್ ಕಾರ್ಮಿಕರು ಸಹ ಮಲೇರಿಯಾ ರೋಗಕ್ಕೆ ತುತ್ತಾಗಿದ್ದಾರೆ ಎಂದು ಲಿಖಿತ ವರದಿ ನೀಡಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಮೂಲ್ಕಿಯಲ್ಲಿನ ಲಿಂಗಪ್ಪಯ್ಯ ಕಾಡು ಕಾರ್ಮಿಕರ ಕಾಲೋನಿಯಲ್ಲಿಯೂ ಮಲೇರಿಯ ರೋಗ ಲಕ್ಷಣಗಳು ಕಂಡುಬಂದಿದ್ದು ಇಲ್ಲಿ ಕಳೆದ 15 ವರ್ಷದ ಹಿಂದೆ ಡೆಂಗೆ ಜ್ವರ ಬಂದು ಸಾವು ನೋವು ಅನುಭವಿಸಿದ ನೆನಪು ಇನ್ನೂ ಸಹ ಹಸಿರಾಗಿದೆ. ಕಳೆದ ವರ್ಷವೂ ಸಹ ಪತ್ತೆಯಾಗದ ರೋಗವೊಂದು ಉಲ್ಬಣಿಸಿದಾಗ ಜಿಲ್ಲಾ ಆರೋಗ್ಯ ಇಲಾಖೆಯವರೇ ಇಲ್ಲಿ ಬಂದು ಪರೀಕ್ಷೆ ಮಾಡಿ ಚಿಕಿತ್ಸೆ ನೀಡಿದ್ದನ್ನು ನೆನಪಿಸಬಹುದು.

ಈ ಪ್ರದೇಶದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡದೇ ಇರುವುದರಿಂದ ರೋಗ ಶೀಘ್ರವಾಗಿ ಉಲ್ಬಣಗೊಳ್ಳಲು ಕಾರಣ ಎಂದು ವೈದ್ಯಕೀಯ ವಿಭಾಗದ ಸಿಬ್ಬಂದಿ ವರದಿ ನೀಡಿದ್ದಾರೆ. ಈ ಬಗ್ಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಬಿ.ಎಂ.ಆಸಿಫ್ ಅವರಲ್ಲಿ ವಿಚಾರಿಸಿದಾಗ ಜಿಲ್ಲಾ ವೈದ್ಯರಲ್ಲಿ ಮತ್ತು ಶಾಸಕ ಅಭಯಚಂದ್ರ ಅವರ ಗಮನಕ್ಕೆ ತಂದು ಶೀಘ್ರವಾಗಿ ಧೂಮೀಕರಣ (ಫಾಗಿಂಗ್), ಆರೋಗ್ಯ, ಸ್ವಚ್ಚತೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಲಾಗುವುದು ಎಂದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.