ADVERTISEMENT

ಮೆಸ್ಕಾಂ ಎಂಜಿನಿಯರ್‌ಗೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2012, 9:40 IST
Last Updated 6 ಏಪ್ರಿಲ್ 2012, 9:40 IST

ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡ್ ಸಮೀಪದ ತಾಳಿಪಡ್ಪು ಎಂಬಲ್ಲಿ ಕರ್ತವ್ಯನಿರತರಾಗಿದ್ದ `ಮೆಸ್ಕಾಂ~ನ ಸಹಾಯಕ ಎಂಜಿನಿಯರ್ ನಾರಾಯಣ ಪ್ರಕಾಶ್ ಎಂಬವರ ಮೇಲೆ ತಂಡವೊಂದು ಹಲ್ಲೆ ನಡೆಸಿದ ಘಟನೆ ಗುರುವಾರ ಬೆಳಕಿಗೆ ಬಂದಿದೆ.

ಆರೋಪಿಗಳಾದ ಸ್ಥಳೀಯ ನಿವಾಸಿ ಹಸೈನಾರ್ ನೇತೃತ್ವದ ಶಮೀರ್, ಬಶೀರ್, ಶರೀಫ್ ಮತ್ತಿತರ 10 ಮಂದಿ ವಿರುದ್ಧ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ತಾಳಿಪಡ್ಪು ಪ್ರದೇಶದಲ್ಲಿ ಬುಧವಾರ ರಾತ್ರಿ 11.30ರ ವೇಳೆಗೆ ವಿದ್ಯುತ್ ಸ್ಥಗಿತಗೊಂಡಿರುವ ಬಗ್ಗೆ ದೂರವಾಣಿ ಕರೆ ಬಂದಿತ್ತು ಎನ್ನಲಾಗಿದೆ.

ಇದರಿಂದಾಗಿ ಸಹಾಯಕ ಎಂಜಿನಿಯರ್ ನಾರಾಯಣ ಪ್ರಕಾಶ್ ನೇತೃತ್ವದ ಸಿಬ್ಬಂದಿ ಧಾವಿಸಿ ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದರು. ಇದೇ ವೇಳೆ ಸ್ಥಳೀಯ ನಿವಾಸಿ ಹಸೈನಾರ್ ನೇತೃತ್ವದ ತಂಡವು ಏಕಾಏಕಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿದೆ ಎಂದು ಆರೋಪಿಸಲಾಗಿದೆ. ಗಾಯಾಳು ನಾರಾಯಣ ಪ್ರಕಾಶ್ ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗುರುವಾರ ಬೆಳಿಗ್ಗೆ ಬಿ.ಸಿ.ರೋಡ್ ಶಾಖೆಯ ಮೆಸ್ಕಾಂ ಸಿಬ್ಬಂದಿ ದಿಢೀರ್ ಪ್ರತಿಭಟನೆ ನಡೆಸಿದರು.
ಹಸೈನಾರ್ ವಿದ್ಯುತ್ ಬಿಲ್ಲು ಪಾವತಿಸಿದೆ ವಂಚಿಸಿದ ಆರೋಪ ಹೊಂದಿದ್ದು, ಕ್ರಿಮಿನಲ್ ಚಟುವಟಿಕೆಯಲ್ಲಿಯೂ ಪಾಲ್ಗೊಂಡಿರುವ ಆರೋಪವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವೃತ್ತನಿರೀಕ್ಷಕ ಅನಿಲ್ ಎಸ್. ಕುಲಕರ್ಣಿ, ನಗರ ಠಾಣಾಧಿಕಾರಿ ಶೇಖರ್ ನೇತೃತ್ವದ ಪೊಲೀಸರು ಗುರುವಾರ ಇಡೀ ದಿನ ಆರೋಪಿಗಳಿಗಾಗಿ ಹುಡುಕಾಟ ನಡೆಸಿರುವುದಾಗಿ ತಿಳಿಸಿದ್ದಾರೆ.

ಈ ನಡುವೆ ತಾಲ್ಲೂಕಿನ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಅವರು ಹಲ್ಲೆಯನ್ನು ತೀವ್ರವಾಗಿ ಖಂಡಿಸ್ದ್ದಿದಾರೆ. ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ ಅವರು ಗುರುವಾರ ನಡೆದ ಪ್ರತಿಭಟನೆ ವೇಳೆ ಭೇಟಿ ನೀಡಿದ್ದು, ಮೆಸ್ಕಾಂ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.