ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯವನ್ನು ಸಂಪರ್ಕಿಸುವ ಕುಮಾರಧಾರ ಮುಳುಗು ಸೇತುವೆ ಮೇಲ್ದರ್ಜೆಗೆ ಏರಿಸುವ ಕಾರ್ಯ ಈಡೇರಿದ್ದರಿಂದ ಮತ್ತೆ ಇಲ್ಲಿ ಸಮಸ್ಯೆಗಳು ಎದುರಾಗುವ ಆತಂಕ ತಲೆದೋರಿದೆ.
ಪ್ರಸಿದ್ಧ ಪುಣ್ಯ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯವನ್ನು ಗುಂಡ್ಯ ಹಾಗೂ ಉಪ್ಪಿನಂಗಡಿ ಮಾರ್ಗವಾಗಿ ಸಂಪರ್ಕಿಸುವ ರಸ್ತೆಯ ಮಧ್ಯೆ ಎದುರಾಗುವ ಕುಮಾರಧಾರಾ ಸೇತುವೆ ಬಹಳ ಹಿಂದೆಯೇ ನಿರ್ಮಾಣಗೊಂಡಿತ್ತು. ಹಳೆಯದಾದ ಈ ಸೇತುವೆ ಮಳೆಗಾಲದಲ್ಲಿ ಆಗಾಗ ಮುಳುಗಡೆಯಾಗುತ್ತಿದೆ. ಮಳೆಗಾಲದಲ್ಲಿ ಘಟ್ಟ ಪ್ರದೇಶದಿಂದ ಭಾರಿ ಮಳೆಯ ಪರಿಣಾಮ ಈ ನದಿ ಉಕ್ಕಿ ಹರಿಯುತ್ತದೆ. ತಗ್ಗಿನಲ್ಲಿರುವ ಈ ಸೇತುವೆಯೂ ಮುಳುಗಡೆಯಾಗುತ್ತದೆ.
ಇದರಿಂದ ಕ್ಷೇತ್ರಕ್ಕೆ ಬರುವ ದೂರ ದೂರದ ಯಾತ್ರಾರ್ಥಿಗಳು ಸೇರದಂತೆ ಜನಸಾಮಾನ್ಯರು ಶಾಲಾ ಮಕ್ಕಳು ತೀವ್ರ ತೊಂದರೆಗೆ ಸಿಲುಕುತ್ತಾರೆ. ವರ್ಷದಲ್ಲಿ ಹತ್ತಾರು ಭಾರಿ ಮುಳುಗುವ ಈ ಸೇತುವೆ ಮುಳುಗಡೆಯಾದಾಗ ಕೆಲವೊಮ್ಮೆ ಎರಡರಿಂದ ಮೂರು ದಿನಗಳ ಕಾಲ ಸಂಪರ್ಕ ಕಡಿತಗೊಂಡು ಜನಜೀವನ ಅಸ್ತವ್ಯಸ್ತವಾಗುತ್ತದೆ.
ಪ್ರಯಾಣಿಕರು ರಸ್ತೆಯ ಇಕ್ಕೆಲಗಳಲ್ಲಿ ತಾಸುಗಟ್ಟಲೆ ಕಾಯುವುದಲ್ಲದೆ, ಕ್ಷೇತ್ರವಿಡೀ ಸಂಪರ್ಕವನ್ನೇ ಕಡಿದುಕೊಂಡು ಬಿಡುತ್ತದೆ. ಹೊರಗಿನಿಂದ ಬರುವ ಭಕ್ತರು 2 ಬದಿಗಳಲ್ಲಿ ಉಳಿದುಕೊಂಡು ತೊಂದರೆ ಅನುಭವಿಸುತ್ತಾರೆ.
ರೈಲಿನಲ್ಲಿ ಬರುವ ಭಕ್ತರು ಈ ಮೂಲಕ ಕ್ಷೇತ್ರ ತಲುಪಬೇಕು. ಹಾಗಾಗೀ ಇವರಿಗೂ ಬರಲು ತೆರಳಲು ಕಷ್ಟವಾಗುತ್ತದೆ. ನೆಟ್ಟಣ, ಮರ್ಧಾಳ, ಇಚಿಲಂಪಾಡಿ, ಗುಂಡ್ಯ, ಕಡಬ, ಧರ್ಮಸ್ಥಳ ಮಾರ್ಗವಾಗಿ ಸಂಚರಿಸುವ ಬೆಂಗಳೂರು, ಹಾಸನ, ಮಂಗಳೂರು ಮುಂತಾದ ದೂರದ ಊರಿನವರು ಸೇರದಂತೆ ಎಲ್ಲರೂ ಈ ಮುಳುಗು ಸೇತುವೆಯಿಂದ ತ್ರಾಸ ಪಡಬೇಕಾಗುತ್ತದೆ. ಶಾಲಾ ಕಾಲೇಜುಗಳು ಆರಂಭ ಮತ್ತು ಬಿಡುವ ಸಂದರ್ಭದಲ್ಲಿ ಸೇತುವೆ ಮುಳುಗಡೆಯಾದರೆ ವಿದ್ಯಾರ್ಥಿಗಳು ಮನೆ ತಲುಪಲು ಅನಾನುಕೂಲವಾಗುತ್ತದೆ.
ಮುಳುಗು ಸೇತುವೆಯನ್ನು ಮೇಲ್ದರ್ಜೆಗೆ ಏರಿಸುವ ಕುರಿತು ಹಲವು ಬಾರಿ ಪ್ರಸ್ತಾಪಗಳು ಕೇಳಿ ಬಂದಿದ್ದರೂ ಕ್ರಮೇಣ ಮೂಲೆ ಸೇರಿವೆ. ಕೆಲಸ ಕಾರ್ಯಗಳು ನಿಧಾನಗತಿಯಿಂದಾಗಿ ನಿರಂತರವಾಗಿ ಮಳೆಗಾಲದ ಸಂಧರ್ಭ ಮುಳುಗಡೆಯಾಗುತ್ತಿರುವ ಈ ಸೇತುವೆಗೆ ಕಾಯಕಲ್ಪ ನೀಡುವಲ್ಲಿ ವಿಳಂಬವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.