ADVERTISEMENT

ಮೋದಿ ಸರ್ಕಾರದಿಂದ ಜನರ ಕಲ್ಯಾಣ: ಸಚಿವ ರಮೇಶ ಜಿಗಜಿಣಗಿ

ಉಜ್ವಲ ಫಲಾನುಭವಿಗಳ ಸಮಾವೇಶ

​ಪ್ರಜಾವಾಣಿ ವಾರ್ತೆ
Published 25 ಜನವರಿ 2019, 15:03 IST
Last Updated 25 ಜನವರಿ 2019, 15:03 IST
ಬಂಟ್ವಾಳದ ಬಿ.ಸಿ. ರೋಡ್‌ನಲ್ಲಿ ಶುಕ್ರವಾರ ಉಜ್ವಲ ಎರಡನೇ ಹಂತದ ಯೋಜನೆಯಡಿ ಫಲಾನುಭವಿಗಳಿಗೆ ಅಡುಗೆ ಅನಿಲ ಸಂಪರ್ಕದ ದಾಖಲೆಗಳನ್ನು ಕೇಂದ್ರ ಸಚಿವ ರಮೇಶ ಜಿಗಜಿಣಗಿ ಹಸ್ತಾಂತರಿಸಿದರು.
ಬಂಟ್ವಾಳದ ಬಿ.ಸಿ. ರೋಡ್‌ನಲ್ಲಿ ಶುಕ್ರವಾರ ಉಜ್ವಲ ಎರಡನೇ ಹಂತದ ಯೋಜನೆಯಡಿ ಫಲಾನುಭವಿಗಳಿಗೆ ಅಡುಗೆ ಅನಿಲ ಸಂಪರ್ಕದ ದಾಖಲೆಗಳನ್ನು ಕೇಂದ್ರ ಸಚಿವ ರಮೇಶ ಜಿಗಜಿಣಗಿ ಹಸ್ತಾಂತರಿಸಿದರು.   

ಮಂಗಳೂರು: ದೇಶದ ಪ್ರತಿಯೊಬ್ಬ ಪ್ರಜೆಯೂ ಸ್ವಾವಲಂಬಿ ಬದುಕು ಸಾಗಿಸಬೇಕು ಎನ್ನುವ ಮಹತ್ವಾಕಾಂಕ್ಷಿ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಜನರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದು ಕೇಂದ್ರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆ ಸಚಿವ ರಮೇಶ ಜಿಗಜಿಣಗಿ ಹೇಳಿದರು.

ಬಿ.ಸಿ. ರೋಡ್‌ನಲ್ಲಿ ಶುಕ್ರವಾರ ಉಜ್ವಲ ಯೋಜನೆಯ ಫಲಾನುಭವಿಗಳ ಸಮಾವೇಶ ಹಾಗೂ ಎರಡನೇ ಹಂತದ ಫಲಾನುಭವಿಗಳಿಗೆ ಅಡುಗೆ ಅನಿಲ ಸಂಪರ್ಕ ವಿತರಿಸಿ ಅವರು ಮಾತನಾಡಿದರು.

ದೇಶದಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಸ್ವಚ್ಛತೆಗೆ ಆದ್ಯತೆ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಜನಧನ, ಉಜ್ವಲ, ಆಯುಷ್ಮಾನ್‌ದಂತಹ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದರು.

ADVERTISEMENT

ಜನರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿರುವ ಎನ್‌ಡಿಎ ಸರ್ಕಾರ, ಶುದ್ಧ ಕುಡಿಯುವ ನೀರು ಒದಗಿಸುವುದರ ಜತೆಗೆ ನೈರ್ಮಲ್ಯಕ್ಕೂ ಹೆಚ್ಚಿನ ಒತ್ತು ನೀಡುತ್ತಿದೆ. ಶೌಚಾಲಯ ನಿರ್ಮಾಣದಲ್ಲಿ ಕ್ರಾಂತಿಕಾರಿ ಹೆಜ್ಜೆ ಇರಿಸಲಾಗಿದೆ. ಈಗಾಗಲೇ 27 ರಾಜ್ಯಗಳನ್ನು ಬಯಲು ಬಹಿರ್ದೆಸೆ ಮುಕ್ತವನ್ನಾಗಿ ಮಾಡಲಾಗಿದೆ ಎಂದು ಹೇಳಿದರು.

‘ಇಲ್ಲಿ ನಡೆಯುತ್ತಿರುವ ಸಮಾವೇಶ ಮಾದರಿಯಾಗಿದೆ. ಇಂತಹ ಸಮಾವೇಶವನ್ನು ನನ್ನ ಕ್ಷೇತ್ರವಾದ ವಿಜಯಪುರದಲ್ಲಿಯೂ ಮಾಡುತ್ತೇನೆ’ ಎಂದರು.

ಶಾಸಕ ಸಿ.ಟಿ. ರವಿ ಮಾತನಾಡಿ, ಬಡತನ ಮುಕ್ತ ನವ ಭಾರತ ನಿರ್ಮಾಣಕ್ಕೆ ಪ್ರಧಾನಿ ಮೋದಿ ಸಂಕಲ್ಪ ಮಾಡಿದ್ದಾರೆ. 33 ಕೋಟಿ ಜನಧನ ಖಾತೆ, ₹12 ಪ್ರಿಮಿಯಂನಲ್ಲಿ ಜನ ಸುರಕ್ಷಾ ವಿಮೆ ಯೋಜನೆ, ಮುದ್ರಾ ಸಾಲ ಯೋಜನೆ, ಆಯುಷ್ಮಾನ, ಉಜ್ವಲದಂತಹ ಯೋಜನೆಗಳನ್ನು ರೂಪಿಸುವ ಮೂಲಕ ದೇಶದ ಸಮಗ್ರ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ ಎಂದು ಹೇಳಿದರು.

ಬಿಜೆಪಿ ಸರ್ಕಾರ ಬಡಜನರ ಪರವಾಗಿ ಕೆಲಸ ಮಾಡುತ್ತಿದೆ. 2022 ರ ವೇಳೆಗೆ ಎಲ್ಲರಿಗೂ ಮನೆ ಒದಗಿಸುವ ಗುರಿ ಹಾಕಿಕೊಳ್ಳಲಾಗಿದೆ. ಡಿಬಿಟಿ ಮೂಲಕ ನೇರವಾಗಿ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಅನುದಾನವನ್ನು ಜಮಾ ಮಾಡುವ ಮೂಲಕ ಕೊಳ್ಳೆ ಹೊಡೆಯುವುದನ್ನು ತಡೆಯಲಾಗಿದೆ. ಸೋರಿಕೆಯನ್ನು ತಡೆಗಟ್ಟಲು ಕಾನೂನುಗಳನ್ನು ಜಾರಿಗೆ ತರಲಾಗಿದೆ. ಇದೇ ಕಾರಣಕ್ಕೆ ಎಲ್ಲ ಕಳ್ಳರು ಈಗ ಒಂದಾಗುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ತಿಂಗಳಲ್ಲಿ ಹೊಗೆ ಮುಕ್ತ ಜಿಲ್ಲೆ: ದಕ್ಷಿಣ ಕನ್ನಡ ಜಿಲ್ಲೆಯನ್ನು ಒಂದು ತಿಂಗಳಲ್ಲಿ ಹೊಗೆಮುಕ್ತ ಜಿಲ್ಲೆಯನ್ನಾಗಿ ಘೋಷಣೆ ಮಾಡಲಾಗುವುದು. ಬೆಳ್ತಂಗಡಿ ತಾಲ್ಲೂಕು ಕೇವಲ 10 ದಿನದಲ್ಲಿ ಹೊಗೆಮುಕ್ತವಾಗಲಿದೆ ಎಂದು ಸಂಸದ ನಳಿನ್‌ಕುಮಾರ್ ಕಟೀಲ್ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ ಉಜ್ವಲ ಯೋಜನೆಯಡಿ 42 ಸಾವಿರ ಜನರಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗಿದೆ. ಎರಡನೇ ಹಂತದಲ್ಲಿ ಎಲ್ಲ ಬಿಪಿಎಲ್‌ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ ಸಿಗಲಿದೆ. ಎಲ್ಲ ಕುಟುಂಬಗಳು ಅಡುಗೆ ಅನಿಲ ಸಿಲಿಂಡರ್ ಪಡೆಯಲಿದ್ದು, ತಾಯಂದಿರ ಕಣ್ಣೀರಿಗೆ ಮುಕ್ತಿ ಸಿಗಲಿದೆ ಎಂದು ಹೇಳಿದರು.

ಸ್ವಾಮಿ ವಿವೇಕಾನಂದರು ಭಾರತ ವಿಶ್ವ ಗುರು ಆಗಬೇಕು ಎನ್ನುವ ಕನಸು ಕಂಡಿದ್ದರು. ಅದೇ ಕನಸಿನೊಂದಿಗೆ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಅಂದಿನಿಂದ ಇಲ್ಲಿಯವರೆಗೆ ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಎನ್ನುವ ಘೋಷ ವಾಕ್ಯದ ಮೂಲಕ ಸಮೃದ್ಧ ಭಾರತ ನಿರ್ಮಾಣಕ್ಕೆ ಮುನ್ನುಡಿ ಬರೆದಿದ್ದಾರೆ ಎಂದು ಹೇಳಿದರು.

ಶಾಸಕ ರಾಜೇಶ್‌ ನಾಯಕ್‌ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ್ ಪೂಜಾರಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಶಾಸಕರಾದ ಎಸ್‌. ಅಂಗಾರ, ಸಂಜೀವ ಮಠಂದೂರು, ಡಾ.ವೈ. ಭರತ್‌ ಶೆಟ್ಟಿ, ಉಮಾನಾಥ ಕೋಟ್ಯಾನ್‌, ಡಿ. ವೇದವ್ಯಾಸ್ ಕಾಮತ್‌, ಹರೀಶ್‌ ಪೂಂಜ, ಐಒಸಿಎಲ್‌ನ ಕೆ. ಶೈಲೇಂದ್ರ, ಬಿಪಿಸಿಎಲ್‌ನ ಪ್ರೇಮನಾಥ್‌, ಬಿಪಿಸಿಎಲ್‌ ಕರ್ನಾಟಕ ಮುಖ್ಯಸ್ಥ ಪ್ರದೀಪ್‌ ನಾಯರ್‌ ವೇದಿಕೆಯಲ್ಲಿದ್ದರು.

ಬಿಪಿಸಿಎಲ್‌ನ ಪ್ರಾದೇಶಿಕ ವ್ಯವಸ್ಥಾಪಕ ಎಸ್. ತಂಗವೇಲು ಸ್ವಾಗತಿಸಿದರು. ಮನೋಹರ ಪ್ರಸಾದ್‌ ನಿರೂಪಿಸಿದರು. ಎಚ್‌ಪಿಸಿಎಲ್‌ನ ವಲಯ ಮುಖ್ಯಸ್ಥ ಅಂಬಾಭವಾನಿ ವಂದಿಸಿದರು.

‘ನಳಿನ್‌ಗೆ ಹೃದಯದ ಭಾಷೆ ಗೊತ್ತು’

‘ಸಂಸದ ನಳಿನ್‌ಕುಮಾರ್‌ ಕಟೀಲ್‌ ಅವರಿಗೆ ಭಾಷೆಯ ಸಮಸ್ಯೆ ಸ್ವಲ್ಪ ಮಟ್ಟಿಗೆ ಇರಬಹುದು. ಇಂಗ್ಲಿಷ್‌, ಹಿಂದಿ ಬರುವುದಿಲ್ಲ ಎಂದು ಕೆಲವರು ಆರೋಪಿಸುತ್ತಾರೆ. ಆದರೆ, ಅವರಿಗೆ ಜನರ ಹೃದಯದ ಭಾಷೆ ಗೊತ್ತು. ಅದನ್ನು ಸಮರ್ಪಕವಾಗಿ ಬಳಸುವ ಮೂಲಕ ರಾಜ್ಯದಲ್ಲಿಯೇ ತಮ್ಮ ಕ್ಷೇತ್ರಕ್ಕೆ ಅತಿ ಹೆಚ್ಚು ಅನುದಾನ ತಂದಿರುವ ಹೆಗ್ಗಳಿಕೆ ನಳಿನ್‌ ಅವರದ್ದಾಗಿದೆ’ ಎಂದು ಸಂಸದ ಪ್ರಹ್ಲಾದ ಜೋಷಿ ಹೇಳಿದರು.

ನಳಿನ್‌ಕುಮಾರ್ ಕಟೀಲ್‌ ಅವರು ಜಿಲ್ಲೆಗೆ ಬೇಕಾದ ಸೌಲಭ್ಯಗಳನ್ನು ಪಡೆಯುವಲ್ಲಿ ನಿಸ್ಸೀಮರು. ಸಂಬಂಧಿಸಿದವರನ್ನು ಭೇಟಿ ಮಾಡಿ, ಅವರ ಮನವೊಲಿಸಿ, ಯೋಜನೆಗಳನ್ನು ಪಡೆದುಕೊಳ್ಳುತ್ತಾರೆ. ಇಂತಹ ಕ್ರಿಯಾಶೀಲ ಸಂಸದ ನಳಿನ್‌ಕುಮಾರ್‌ ಅವರಿಗೆ ಕ್ಷೇತ್ರದ ಜನರು ಮತ್ತೊಮ್ಮೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.

*ಕುಟುಂಬದ ಹಿತಕ್ಕಾಗಿ ರಾಜಕಾರಣ ಮಾಡುವವರನ್ನು ದೂರವಿಡಿ. ದೇಶವೇ ಕುಟುಂಬ ಎಂದು ಕೆಲಸ ಮಾಡುವವರನ್ನು ಆಯ್ಕೆ ಮಾಡಿ
–ಸಿ.ಟಿ. ರವಿ,ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.